ಶಬರಿಮಲೆ ದೇವಸ್ಥಾನದ ಪ್ರಸಿದ್ಧ ಹದಿನೆಂಟು ಮೆಟ್ಟಿಲುಗಳಾದ 'ಪತಿನೆಟ್ಟಂಪಾಡಿ'ಯಲ್ಲಿ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ [ಸ್ವಯಂ ಪ್ರೇರಿತ ಪ್ರಕರಣ Vs ಕೇರಳ ಸರ್ಕಾರ].
ಇತ್ತೀಚೆಗೆ ಈ ಹದಿನೆಂಟು ಮೆಟ್ಟಿಲುಗಳ ಬಳಿ ಪೊಲೀಸ್ ಸಿಬ್ಬಂದಿ ನಡೆಸಿದ ಫೋಟೋಶೂಟ್ ವಿವಾದವನ್ನು ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಅವಲೋಕನವು ಮಹತ್ವ ಪಡೆದಿದೆ. ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯೆಯಾಗಿ, ಶಬರಿಮಲೆಯ ಮುಖ್ಯ ಪೊಲೀಸ್ ಸಂಯೋಜಕರು ಅಫಿಡವಿಟ್ ಸಲ್ಲಿಸಿದರು, ಇದರಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರು.
ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಮುರಳಿ ಕೃಷ್ಣ ಎಸ್ ಅವರ ಪೀಠವು ಮೆಟ್ಟಿಲುಗಳ ಮೇಲೆ ಅಥವಾ ತಿರುಮುಟ್ಟಂನಲ್ಲಿ (ಗರ್ಭಗೃಹದ ಹೊರಗಿನ ಮುಖ್ಯ ಪ್ರಾಂಗಣ) ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ಅನುಮತಿಸಲಾಗುವುದಿಲ್ಲ ಎಂದು ಒತ್ತಿಹೇಳಿದೆ. "ಪಥಿನೆಟ್ಟಂಪಾಡಿ (18 ಪವಿತ್ರ ಮೆಟ್ಟಿಲುಗಳು) ಮತ್ತು ಶಬರಿಮಲೆ ಸನ್ನಿಧಾನಂನ ತಿರುಮುಟ್ಟಂನಂತಹ ಸ್ಥಳಗಳು ಯಾತ್ರಿಕರು, ವ್ಲಾಗರ್‌ಗಳು ಇತರೆ ಜನರು ಛಾಯಾಗ್ರಹಣ ಅಥವಾ ವೀಡಿಯೊಗ್ರಫಿಯನ್ನು ಮಾಡಲು ಅನುಮತಿಸುವ ಸ್ಥಳಗಳಲ್ಲ" ಎಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ವಿವಾದಿತ ಪೊಲೀಸ್ ಫೋಟೋಶೂಟ್ ಕುರಿತಾಗಿ ನ್ಯಾಯಾಲಯವು ಸಿಬ್ಬಂದಿ ವಿರುದ್ಧ ತೆಗೆದುಕೊಂಡ ಕ್ರಮದ ವಿವರಗಳಿಗೆ ಹೋಗದಿರಲು ನಿರ್ಧರಿಸಿತು. ಅದನ್ನು ಮುಖ್ಯ ಪೊಲೀಸ್ ಸಂಯೋಜಕರ ವಿವೇಚನೆಗೆ ಬಿಟ್ಟಿತ್ತು. ಪ್ರಸ್ತುತ ನಡೆಯುತ್ತಿರುವ ಮಂಡಲ ಮಕರವಿಳಕ್ಕು ಉತ್ಸವ ಋತುವಿನಲ್ಲಿ ಶಬರಿಮಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿರುವ ಪ್ರಕರಣದಲ್ಲಿ ಈ ಆದೇಶ ಬಂದಿದೆ.
ದಿನಂಪ್ರತಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಾಲಯವು ಈ ವಿಚಾರಣೆಯನ್ನು ಪ್ರತಿದಿನ ಕೈಗೊಳ್ಳುತ್ತಿದೆ. ಗುರುವಾರ ಹೊರಡಿಸಿದ ಆದೇಶದಲ್ಲಿ, ಶಬರಿಮಲೆ ದೇವಸ್ಥಾನದ ಒಳಗಿನ ದೇಗುಲಗಳಲ್ಲಿ ಒಂದಾದ ಮಲಿಕಪ್ಪುರಂ ದೇವಸ್ಥಾನದಲ್ಲಿ ಅನುಸರಿಸುತ್ತಿರುವ ಪದ್ಧತಿಯ ವಿಚಾರವಾಗಿಯೂ ನ್ಯಾಯಾಲಯವು ಅವಲೋಕನ ಮಾಡಿತು.
ಕಳೆದ ಕೆಲವು ವರ್ಷಗಳಿಂದ ಯಾತ್ರಾರ್ಥಿಗಳು ಮಲಿಕಪ್ಪುರಂ ದೇವಸ್ಥಾನದ ಮೇಲ್ಛಾವಣಿಯ ಮೇಲೆ ಬಟ್ಟೆಗಳನ್ನು ಎಸೆಯುವುದು, ಗೋಡೆಗಳಿಗೆ ಅರಿಶಿನ ಪುಡಿಯನ್ನು ಸುರಿಯುವುದು ಮತ್ತು ದೇವಾಲಯದ ಸುತ್ತಲೂ ತೆಂಗಿನಕಾಯಿ ಒಡೆಯುವುದನ್ನು ಮಾಡುತ್ತಿದ್ದಾರೆ. ಇದು ಮಲಿಕಪ್ಪುರಂ ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳ ಭಾಗವಲ್ಲ ಮತ್ತು ಯಾತ್ರಾರ್ಥಿಗಳು ಇಂತಹ ಆಚರಣೆಗಳನ್ನು ತಪ್ಪಿಸಲು ಸಲಹೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.