ಮಹಿಳೆಯರಿಗೆ ಮತ್ತು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಿದೆ ಎಂಬ ಕಾರಣಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರ ವೀಡಿಯೊವನ್ನು ತೆಗೆದುಹಾಕಬೇಕು ಮತ್ತು ಅದು ಪ್ರಸಾರವಾಗದಂತೆ ತಡೆ ನೀಡಬೇಕೆಂದು ಕೋರಿ ಚೆನ್ನೈನ ಹತ್ತು ಮಹಿಳಾ ವಕೀಲರು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಕರ್ಣನ್ ಅವರು ʼಸುಪ್ರೀಂಕೋರ್ಟ್‌ನ ನಿವೃತ್ತ ಮತ್ತು ಹಾಲಿ ಹದಿಮೂರು ನ್ಯಾಯಮೂರ್ತಿಗಳ ಪತ್ನಿಯರು, ಮತ್ತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಮೂರ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಬೆದರಿಕೆ ಒಡ್ಡಿದ್ದಾರೆʼ ಎಂಬುದನ್ನು ವಕೀಲೆಯರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಕರ್ಣನ್ ಅವರು ನ್ಯಾಯಾಲಯದ ವಿವಿಧ ಮಹಿಳಾ ಸಿಬ್ಬಂದಿ ಮತ್ತು ವಕೀಲರನ್ನು ಹೆಸರಿಸಿದ್ದು ಅವರು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗೆ ಹೇಳಿಕೆ ನೀಡುವಾಗ ಕರ್ಣನ್ ಲೈಂಗಿಕ ಅಪರಾಧಗಳಿಗೆ ತುತ್ತಾದವರ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.
"ವೀಡಿಯೊ ಮತ್ತು ಅದರ ಹೂರಣ ಅತಿರೇಕದಿಂದ ಕೂಡಿದ್ದು, ಖಂಡನಾರ್ಹವಾಗಿದೆ. 1998ರ ತಮಿಳುನಾಡು ಸ್ತ್ರೀ ಕಿರುಕುಳ ನಿಷೇಧ ಕಾಯಿದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಎ, ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಅಡಿ ಇದು ಅಪರಾಧವಾಗಿದೆ. ಇನ್ನೂ ಶೋಚನೀಯ ಸಂಗತಿ ಎಂದರೆ ಸಂತ್ರಸ್ತರ ಹೆಸರನ್ನು ಉಲ್ಲೇಖಿಸುವುದು ಕಾನೂನಿನ ಪ್ರಕಾರ ನಿಷಿದ್ಧ ಎಂಬುದು ನ್ಯಾಯಮೂರ್ತಿಯಾದವರು ತಿಳಿದಿರಲೇಬೇಕಾದ ಸಂಗತಿ” ಎಂದು ವಕೀಲೆಯರು ತಿಳಿಸಿದ್ದಾರೆ.
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ವೀಡಿಯೊದಲ್ಲಿ ಕರ್ಣನ್ ನೀಡಿರುವ ಹೇಳಿಕೆಗಳು "ತೀವ್ರ ಸ್ತ್ರೀದ್ವೇಷ"ದಿಂದ ಕೂಡಿವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಅಲ್ಲದೆ ಲಿಂಗ ಮತ್ತು ಲೈಂಗಿಕತೆಯ ಪುರುಷ ಪ್ರಧಾನತೆಯನ್ನು ಪ್ರತಿನಿಧಿಸುತ್ತದೆ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮತ್ತು ಲಿಂಗ ನ್ಯಾಯ ಮತ್ತು ಸಮಾನತೆಯನ್ನು ಖಾತರಿಪಡಿಸುವ ಸಾಂವಿಧಾನಿಕ ಕರ್ತವ್ಯವನ್ನುನಿರ್ವಹಿಸಿದ ವ್ಯಕ್ತಿಯಿಂದ ಅಂತಹ ಹೇಳಿಕೆಗಳು ಬಂದಿರುವುದು ನಿಜಕ್ಕೂ ಭಯ ಹುಟ್ಟಿಸುತ್ತದೆ ಎಂದು ಪ್ರತ್ರದಲ್ಲಿ ವಿವರಿಸಲಾಗಿದೆ.
ಈ ಆಕ್ಷೇಪಾರ್ಹ ವೀಡಿಯೊ ಸಂದೇಶ ಮತ್ತು ಹೇಳಿಕೆಯನ್ನು ತನಿಖೆ ಮಾಡದೆ ಬಿಟ್ಟರೆ ಅದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು "ದೊಡ್ಡ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿರುವ ನೀತಿಗೆಟ್ಟ ಪುರುಷರಿಗೆ ಅಪಾಯಕಾರಿ ಸಂದೇಶ ಕಳುಹಿಸುತ್ತದೆ" ಎಂದು ಮಹಿಳಾ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಕರ್ಣನ್ ಅವರು ಡಾ. ಅಂಬೇಡ್ಕರ್ ಅವರ ಹೆಸರನ್ನು ಆಕ್ಷೇಪಾರ್ಹ ವೀಡಿಯೊದಲ್ಲಿ ಪ್ರಸ್ತಾಪಿಸಿದ್ದು, ತಮ್ಮನ್ನು "ಅಂಬೇಡ್ಕರ್ ಅವರ ದತ್ತುಪುತ್ರ" ಎಂದು ಕರೆದುಕೊಂಡಿದ್ದಾರೆ. ಇದಕ್ಕೆ ಪತ್ರದಲ್ಲಿ ಆಕ್ಷೇಪ ವ್ಯಕ್ತವಾಗಿದ್ದು "ಮಹಿಳೆಯರನ್ನು ಕೆಣಕಲು ಅಂಬೇಡ್ಕರ್ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ವೀಡಿಯೊದಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಕೂಡ ಹೆಸರಿಸಲಾಗಿದ್ದು ಇದು ಆಕ್ರಮಣಕಾರಿ ಮತ್ತು ಜನಾಂಗೀಯವಾದುದಾಗಿದೆ” ಎಂದು ಬಣ್ಣಿಸಲಾಗಿದೆ.
ಕರ್ಣನ್ ನಡೆಯಿಂದಾಗಿ ನ್ಯಾಯಾಧೀಶರ ನೇಮಕಾತಿ ಮಾಡುವ ವಿಧಾನವನ್ನು ಪ್ರಶ್ನಿಸಲು ವಕೀಲರಿಗೆ ಅನುವು ಮಾಡಿಕೊಟ್ಟಿದ್ದು ನ್ಯಾಯಾಂಗ ನೇಮಕಾತಿಗಳ ಪಾರದರ್ಶಕವಲ್ಲದ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
"ಈ ವಿಷಾದಕರ ಸ್ಥಿತಿ, ನ್ಯಾಯಾಂಗ ನೇಮಕಾತಿಗಳ ಪಾರದರ್ಶಕವಲ್ಲದ ಸ್ವರೂಪ ಮತ್ತು ಹೊಣೆಗಾರಿಕೆ ಕೊರತೆಯ ನೇರ ಫಲಶೃತಿಯಾಗಿದೆ. ಕರ್ಣನ್ ಅವರು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಯಾಗಿ ಜೈಲು ಸೇರಿದ ಸಂದರ್ಭದಲ್ಲಿ, ಕರ್ಣನ್ ಅವರನ್ನು ನೇಮಕ ಮಾಡಿದ್ದ ಕೊಲಿಜಿಯಂನ ಅಂದಿನ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು, ಕರ್ಣನ್ ಅವರ ಆಯ್ಕೆಯ ಹಿಂದಿದ್ದ ನಿರ್ಲಕ್ಷ್ಯವನ್ನು ಒಪ್ಪಿಕೊಂಡಿದ್ದರು. ಆಗ ಅವರು ʼಸುಪ್ರೀಂಕೋರ್ಟ್ ಕೊಲಿಜಿಯಂ, ಹೈಕೋರ್ಟ್ ಕೊಲ್ಜಿಯಂನ ಪರಿಶೀಲನೆಯನ್ನೇ ಸಂಪೂರ್ಣ ಅವಲಂಬಿಸಿರುತ್ತದೆʼ ಎಂದು ಹೇಳಿದ್ದರು. ವ್ಯಕ್ತಿಗಳು ಸೂಕ್ತವಲ್ಲದಿದ್ದರೂ ಅವರಿಗೆ ಪದೋನ್ನತಿ ನೀಡಿದ ಉದಾಹರಣೆಗಳಿವೆ. ಸಂಪೂರ್ಣ ಪಾರದರ್ಶಕ ಮತ್ತು ಉತ್ತರದಾಯಿತ್ವದ ನೆಲೆಯಲ್ಲಿ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ನೇಮಕಾತಿ ಆಗುವವರೆಗೆ ನ್ಯಾಯಾಂಗ ಇಂತಹ ಅಪಹಾಸ್ಯಕ್ಕೆ ತುತ್ತಾಗುವ ಮತ್ತು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಅಪಾಯ ಇದೆ”
“ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನುಭವಿಗಳಿಂದ ಆಗಾಗ್ಗೆ ಲಿಂಗ ಸೂಕ್ಷ್ಮತೆ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯನ್ನು ಇಂತಹ ಘಟನೆಗಳು ಬಹಿರಂಗಪಡಿಸುತ್ತವೆ. ನ್ಯಾಯಾಧೀಶರು ಕೂಡ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತರಾಗಬಲ್ಲರು ಮತ್ತು ಅಸ್ಖಲಿತವಾಗಿ ಇರಲಾರರು” ಎಂದು ಪತ್ರ ಹೇಳುತ್ತದೆ.
ಸಂವೇದನಾಶೀಲತೆ ರೂಪಿಸುವ ಕಾರ್ಯಕ್ರಮಗಳ ಮೂಲಕ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬಹುದಾದರೂ ವೈರಲ್ ಆಗಿರುವ ವೀಡಿಯೊ ಬಗ್ಗೆ ತಕ್ಷಣ ತುರ್ತು ಕ್ರಮ ಅಗತ್ಯ ಎಂದು ಕೋರಲಾಗಿದೆ. ಅಲ್ಲದೆ ವೀಡಿಯೊ ಪ್ರಸಾರ ಮಾಡಿದ ಕರ್ಣನ್ ವಿರುದ್ಧ ಮಾತ್ರವಲ್ಲದೆ ಮೂರನೇ ವ್ಯಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಚೆನ್ನೈ ವಕೀಲರ ಸಂಘದ ಹತ್ತು ಮಹಿಳಾ ವಕೀಲರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಪತ್ರದಲ್ಲಿ ಮಾಡಲಾದ ವಿನಂತಿ ಎರಡು ಬಗೆಯಲ್ಲಿದೆ:
ವೀಡಿಯೊವನ್ನು ಪ್ರಸಾರ ಮಾಡಲು ಬಳಸುತ್ತಿರುವ ಜಾಲತಾಣ ಸರ್ವರ್ / ಸಾಮಾಜಿಕ ಮಾಧ್ಯಮದಿಂದ ತಕ್ಷಣ ವೀಡಿಯೊ ಹಿಂಪಡೆಯುವಂತೆ ನಿರ್ದೇಶನ ನೀಡಬೇಕು.
ವೀಡಿಯೊ ಮೂಲದ ಬಗ್ಗೆ ತನಿಖೆ ನಡೆಸಬೇಕಿದ್ದು, ಅದನ್ನು ರೆಕಾರ್ಡ್ ಮಾಡಿ ಅಪ್‌ಲೋಡ್ ಮಡಿದ ವ್ಯಕ್ತಿಗಳ ಗುರುತು ಪತ್ತೆ ಹಚ್ಚಬೇಕು. ಜೊತೆಗೆ ರೆಕಾರ್ಡಿಂಗ್ ಸಮಯ ಮತ್ತು ಸ್ಥಳವನ್ನು ಕಂಡುಹಿಡಿಯಲು ಆದೇಶಿಸಬೇಕು, ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.