Karnataka HC and Train 
ಸುದ್ದಿಗಳು

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಸಮೀಕ್ಷೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನಿರ್ದೇಶಿಸಿದ ಹೈಕೋರ್ಟ್‌

ವನ್ಯ ಸಂಪತ್ತು ರಕ್ಷಣೆಯಲ್ಲಿ ತಜ್ಞತೆ ಹೊಂದಿರುವವರು ಮಾತ್ರವೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಬಹುದಾಗಿದೆ ಎಂದು ವಾದಿಸಿರುವ ಅರ್ಜಿದಾರರು. ಆಕ್ಷೇಪಾರ್ಹ ಸಭೆಯಲ್ಲಿ ತಜ್ಞರಲ್ಲದ ಸಚಿವರುಗಳು ಭಾಗವಹಿಸಿದ್ದರು.

Siddesh M S

ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಮಾರ್ಗದಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮದ ಕುರಿತು ಸಮೀಕ್ಷೆ ಮತ್ತು ವಿಶ್ಲೇಷಣೆ ನಡೆಸುವಂತೆ ಬುಧವಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

14ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ 168 ಕಿ.ಮೀ. ಉದ್ದದ ಹುಬ್ಬಳ್ಳಿ - ಅಂಕೋಲಾ ನೂತನ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸಲು ವಿವೇಚನಾರಹಿತವಾಗಿ ಒಪ್ಪಿಗೆ ನೀಡಿ ಶಿಫಾರಸ್ಸುಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಪ್ರಾಜೆಕ್ಟ್‌ ವೃಕ್ಷ ಒಕ್ಕೂಟ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಅರಣ್ಯ ಪ್ರದೇಶದಲ್ಲಿ ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ನಿರ್ಮಿಸುವುದರಿಂದ ವನ್ಯಜೀವಿಗಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮದ ಕುರಿತು ವಿಶ್ಲೇಷಣೆ ನಡೆಸುವಂತೆ ಹಾಗೂ ಆಕ್ಷೇಪಾರ್ಹ ಪ್ರದೇಶದಲ್ಲಿ ಸಮೀಕ್ಷೆ ನಡೆಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನಿರ್ದೇಶಿಸುತ್ತೇವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಹಲವು ಮಂಡಳಿಗಳು ಮತ್ತು ಪ್ರಾಧಿಕಾರಗಳು ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸ್ವತಂತ್ರ ವಿಶ್ಲೇಷಣಾ ವರದಿ ಸಿದ್ಧಪಡಿಸಬಹುದು. ಇದಕ್ಕೆ ತಜ್ಞರ ಅಗತ್ಯ ಉದ್ಭವಿಸಿದರೆ ಅವರನ್ನೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಳಗೊಳ್ಳಬಹುದಾಗಿದೆ” ಎಂದು ಪೀಠ ಹೇಳಿದೆ.

“ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬುದು ನಮಗೂ ಅರ್ಥವಾಗುತ್ತದೆ. ಅದಾಗ್ಯೂ, ಈ ಅಭಿವೃದ್ಧಿ ಯೋಜನೆಯಿಂದ ವನ್ಯಜೀವಿಗಳು ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಪರಿಶೀಲಿಸಬೇಕಿದೆ. ನಮ್ಮೆಲ್ಲಾ ಪ್ರಯತ್ನಗಳು ವನ್ಯಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿರಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಶ್ರೀಜಾ ಚಕ್ರವರ್ತಿ ಅವರು “14ನೇ ರಾಜ್ಯ ವನ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ವಿಶೇಷ ಆಹ್ವಾನಿತರು ಯೋಜನೆಯ ಪರವಾಗಿ ನೀಡಿರುವ ಅಭಿಪ್ರಾಯಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಅಂದಿನ ಬೃಹತ್‌, ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌, ಮಾಜಿ ಬೃಹತ್‌, ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಸಚಿವ ಹಾಗೂ ಶಾಸಕ ಆರ್‌ ವಿ ದೇಶಪಾಂಡೆ, ರಾಜ್ಯ ಮುಖ್ಯ ಕಾರ್ಯದರ್ಶಿ ವಿಶೇಷ ಆಹ್ವಾನಿತರಾಗಿದ್ದಾರೆ. ಆದರೆ, ಇವರಾರೂ ಮಂಡಳಿಯ ಸದಸ್ಯರಲ್ಲ” ಎಂದರು.

“ವಿಶೇಷ ಆಹ್ವಾನಿತರಾಗಿ ಮೇಲೆ ಹೇಳಿದವರು ಭಾಗವಹಿಸುವುದರಿಂದ ಸಭೆಯ ಉದ್ದೇಶವೇ ವಿಫಲವಾಗಿದೆ. ಇದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ನಿಯಮಾವಳಿ 2006ರ ನಿಯಮ 9ರ ಉಲ್ಲಂಘನೆಯಾಗಿದೆ. ವನ್ಯ ಸಂಪತ್ತು ರಕ್ಷಣೆಯಲ್ಲಿ ತಜ್ಞತೆ ಹೊಂದಿರುವವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಬಹುದಾಗಿದೆ. ಅಂದಾಜಿನ ಪ್ರಕಾರ ಯೋಜನೆಗಾಗಿ 2.2 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.

“ಪಶ್ಚಿಮ ಘಟ್ಟದಲ್ಲಿರುವ ಅಣಶಿ - ದಾಂಡೇಲಿ ಹುಲಿ ಸಂರಕ್ಷಣಾ ಯೋಜನೆ ಎಂದೇ ಪ್ರಸಿದ್ಧಿಯಾಗಿರುವ ಕಾಳಿ ಹುಲಿ ಸಂರಕ್ಷಣಾ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆ ಹಾದು ಹೋಗಲಿದ್ದು, ಇಲ್ಲಿ ಆನೆ ಮತ್ತು ಹುಲಿ ಕಾರಿಡಾರ್‌ ಇದೆ. 2012ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿರುವ ಪಶ್ಚಿಮ ಘಟ್ಟದಲ್ಲಿ ರೈಲ್ವೆ ಯೋಜನೆ ಹಾದು ಹೋಗಲಿದೆ” ಎಂದು ವಿವರಿಸಿದರು.

ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ನೂತನ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸುವ ಸಂಬಂಧದ ವನ್ಯಜೀವಿ ಮಂಡಳಿ ಶಿಫಾರಸ್ಸುಗಳನ್ನು ವಜಾ ಮಾಡಬೇಕು. ಕರ್ನಾಟಕ ವನ್ಯಜೀವಿ ಮಂಡಳಿಯು ಸಭೆಯ ಬಳಿಕ ಮಾಡಿರುವ ಶಿಫಾರಸ್ಸುಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸದಂತೆ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಹುಬ್ಬಳ್ಳಿ ಮತ್ತು ಅಂಕೋಲಾ ರೈಲು ಮಾರ್ಗ ನಿರ್ಮಿಸಲು 595.64 ಹೆಕ್ಟೇರ್ ಅರಣ್ಯ ಪ್ರದೇಶದ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ವನ್ಯಜೀವಿ ಮಂಡಳಿ ತೆಗೆದುಕೊಂಡ ನಿರ್ಧಾರದ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯವು ಕಳೆದ ವರ್ಷ ಮಧ್ಯಂತರ ಆದೇಶ ಹೊರಡಿಸಿತ್ತು.

ವಿಚಾರಣೆಯಲ್ಲಿ ಮತ್ತೊಬ್ಬ ಅರ್ಜಿದಾರರ ಪರವಾಗಿ ವಕೀಲೆ ಅನು ಚೆಂಗಪ್ಪ, ಉತ್ತರ ಕನ್ನಡ ಸೇವಾ ಸಮಿತಿ ಪರವಾಗಿ ಹಿರಿಯ ವಕೀಲ ರವೀಂದ್ರ ಕೊಳ್ಳೆ ಭಾಗವಹಿಸಿದ್ದರು.