CJ Vibhu Bhakru and Justice̤ CM Poonacha 
ಸುದ್ದಿಗಳು

ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ನ್ಯಾಯಾಂಗ ತನಿಖೆಗೂ ಸಿದ್ಧ ಎಂದ ಸರ್ಕಾರ; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

"ಪೊಲೀಸ್​ ವಶದಲ್ಲಿದ್ದ ಕ್ರಿಮಿನಲ್​ ಅಸಹಜ ಸಾವು ಆಗಿರುವ ಅಂಶ ನಿಜ. ಜನರ ಭಾವನೆ ಪರಿಗಣಿಸಿ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ. ತನಿಖೆ ನಡೆಸಬಾರದೇ? ” ಎಂದ ಪೀಠ.

Bar & Bench

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಅತ್ಯಾಚಾರ ಮಾಡಿ, ಆಕೆಯನ್ನು ಕೊಲೆ ಮಾಡಿದ ಆರೋಪಿಯನ್ನು ಎನ್​ಕೌಂಟರ್​ ಮಾಡಿದ ಪ್ರಕರಣ ಸಂಬಂಧ ಶುಕ್ರವಾರ ಆದೇಶ ಪ್ರಕಟಿಸುವುದಾಗಿ ಕರ್ನಾಟಕ ಹೈಕೋರ್ಟ್​ ಹೇಳಿದೆ.

ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು, ಘಟನೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್​ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಕೋರಿ ಪೀಪಲ್ಸ್​ ಯೂನಿಯನ್​ ಫಾರ್​ ಲಿಬರ್ಟೀಸ್​ ಕರ್ನಾಟಕ (ಪಿಯುಸಿಎಲ್​) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ  ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ಸೋಮವಾರ ನಡೆಸಿತು.

ಸುದೀರ್ಘ ವಾದ ಆಲಿಸಿದ ಬಳಿಕ ಪೀಠವು ಅರ್ಜಿಗೆ ಸಂಬಂಧಿಸಿದಂತೆ ಲಿಖಿತ ವಾದಾಂಶ ಸಲ್ಲಿಸುವಂತೆ ಸೂಚನೆ ನೀಡಿ ಶುಕ್ರವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ, ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ ಅವರು “ಅರ್ಜಿಯಲ್ಲಿ ಎನ್​ಕೌಂಟರ್​ ಮಾಡಿದ ಪೊಲೀಸ್​ ಅಧಿಕಾರಿಗಳ ವಿರುದ್ಧ ಎಫ್ಐಆರ್​ ದಾಖಲಿಸಿ ತನಿಖೆ ನಡೆಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ. ಆದರೆ, ಇದೇ ರೀತಿಯ ಆರೋಪವೊಂದರ ಪ್ರಕರಣದಲ್ಲಿ ಪ್ರತ್ಯೇಕ ಎಫ್​ಐಆರ್​ ದಾಖಲಿಸಬೇಕು ಎಂದು ಬಾಂಬೆ ಹೈಕೋರ್ಟ್​ ಆದೇಶಿಸಿತ್ತು. ಆದರೆ, ಆ ಆದೇಶವನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್​, ಪ್ರತ್ಯೇಕ ಎಫ್​ಐಆರ್​ ದಾಖಲಿಸಬೇಕಾದ ಅಗತ್ಯವಿಲ್ಲ. ಒಂದೇ ಆರೋಪಕ್ಕೆ ಎರಡು ಎಫ್​ಐಆರ್ ದಾಖಲಿಸಬೇಕಾದ ಅಗತ್ಯವಿಲ್ಲ ಎಂದಿದೆ” ಎಂದರು.

“ಸುಪ್ರೀಂ ಕೋರ್ಟ್​ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋದ ನೀಡಿರುವ ಮಾರ್ಗಸೂಚಿಗಳ ಅನುಸಾರವಾಗಿ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಕಾರಣದಿಂದ ಸಿಐಡಿಗೆ ವಹಿಸಲಾಗಿದೆ. ಹೈಕೋರ್ಟ್​ ನಿರ್ದೇಶನ ನೀಡಿದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲಾಗುವುದು” ಎಂದರು.

“ಆರೋಪಿಯನ್ನು ಆಧಾರ್​ ಕಾರ್ಡ್​ ತರುವುದಕ್ಕೆ ಮನೆಗೆ ಹೋಗಲು ಹೇಳಿ ಮೂರು ಗುಂಡು ಹಾರಿಸಲಾಗಿದೆ.  ಮೃತ ಆರೋಪಿ ಕಲ್ಲು ತೂರಾಟ ನಡೆಸಿದ ಆರೋಪವಿದೆ. ಪೊಲೀಸ್​ ವಶದಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಎಷ್ಟು ಮಂದಿ ಪೊಲೀಸ್​ ಸಿಬ್ಬಂದಿ ಇದ್ದರು ಎಂಬ ಅಂಶ ಗೊತ್ತಾಗಬೇಕಾಗಿದೆ” ಎಂದು ಪೀಠ ಹೇಳಿತು.

ಆಗ ಎಜಿ ಅವರು “ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಸರ್ಕಾರ ಸಿದ್ದವಿದೆ” ಎಂದರು.

ಈ ವೇಳೆ ಪೀಠವು “ಪೊಲೀಸ್​ ವಶದಲ್ಲಿರುವ ಕ್ರಿಮಿನಲ್​ ಅಸಹಜ ಸಾವು ಆಗಿರುವ ಅಂಶ ನಿಜವಾಗಿದೆ. ಘಟನೆ ಸಂಬಂಧ ಜನರ ಭಾವನೆ ಪರಿಗಣಿಸಿ ಈ ಕೃತ್ಯ ನಡೆಸಲಾಗಿದೆ. ಮೃತ ಆರೋಪಿಯ ಫಿಂಗರ್ ಫ್ರಿಂಟ್‌​ ತೆಗೆದುಕೊಳ್ಳಲಾಗಿದೆ. ಯಾರು ಶೂಟ್​ ಮಾಡಿದರು, ಈ ಫಿಂಗರ್​ ಪ್ರಿಂಟ್​ ಯಾರು ತೆಗೆದುಕೊಂಡರು ಎಂಬ ಅಂಶ ಗೊತ್ತಾಗಬೇಕಿದೆ. ತನಿಖೆ ನಡೆಸಬಾರದೇ?" ಎಂದು ಪ್ರಶ್ನಿಸಿತು.

ಇದಕ್ಕೆ ಎಜಿ ಅವರು “ಐದು ವರ್ಷದ ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಇಲ್ಲಿ ಆರೋಪಿಯಾಗಿರುವ ಅಪರಾಧಿಯ ಹಕ್ಕುಗಳೇ ಹೆಚ್ಚಾಗಿ ಪರಿಗಣಿಸಬೇಕಿದೆ. ಈ ರೀತಿ ಆದಲ್ಲಿ ಪೊಲೀಸರು ತನ್ನ ಕರ್ತ್ಯವ ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪೀಠ, ಅಂತಹ ಆರೋಪಿಯನ್ನು ಕಾನೂನು ಬಲೆಯಲ್ಲಿ ಸಿಲುಕಿಸಬೇಕಾಗಿದೆ. ಮೃತ ಆರೋಪಿಯನ್ನು ವಿಚಾರಣೆಗೊಳಪಡಿಸಿಲ್ಲ, ಅಪರಾಧಿ ಎಂದು ಸಾಭೀತಾಗಿ ಶಿಕ್ಷೆ ವಿಧಿಸಿಲ್ಲ. ಈ ಕುರಿತು  ತನಿಖೆ ಬೇಡವೇ ಎಂದು ಪ್ರಶ್ನಿಸಿತು.

ಇದಕ್ಕೆ ಶೆಟ್ಟಿ, ಆರೋಪಿಗಿರುವ ರೀತಿಯ ಹಕ್ಕುಗಳನ್ನು ಎನ್​ಕೌಂಟರ್​ ಮಾಡಿರುವ ಅಧಿಕಾರಿಗಳಿಗೂ ನೀಡಬೇಕಾಗಿದೆ. ನ್ಯಾಯಾಂದ ತನಿಖೆಯಾಗಲಿ, ವರದಿ ಬಂದ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಪೀಠಕ್ಕೆ ಮನವಿ ಮಾಡಿದರು.

ಹೌದು, ಅದೂ ಆಗಬೇಕಾಗಿದೆ ಎಂದು ತಿಳಿಸಿದ ಪೀಠ, ಲಿಖಿತ ವಾದಾಂಶಗಳನ್ನು ಸಲ್ಲಿಸುವಂತೆ ಸೂಚನೆ ನೀಡಿ ಶುಕ್ರವಾರ ಆದೇಶ ಮಾಡಲಾಗುವುದು ಎಂದು ತಿಳಿಸಿತು.