Karnataka HC Justices Alok Aradhe and M G S Kamal

 
ಸುದ್ದಿಗಳು

ಲಂಕಾದ ಮಾನವ ಕಳ್ಳಸಾಗಣೆ ಜಾಲದ ಸೂತ್ರಧಾರಿಗಳಿಗೆ ಜಾಮೀನು ರದ್ದು ಕೋರಿದ ಎನ್‌ಐಎ: ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

ಎನ್‌ಐಎ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ಎಂ ಜಿ ಎಸ್‌ ಕಮಲ್‌ ನೇತತ್ವದ ವಿಭಾಗೀಯವು ಪೀಠವು ವಿಚಾರಣೆ ನಡೆಸಿತು.

Bar & Bench

ಶ್ರೀಲಂಕಾದ ಮುಗ್ಧ ಪ್ರಜೆಗಳನ್ನು ಭಾರತಕ್ಕೆ ಕರೆತಂದು ಇಲ್ಲಿಂದ ವಿದೇಶಗಳಿಗೆ ಕಳ್ಳಸಾಗಣೆ ಮಾಡುವ ಜಾಲದ ಸೂತ್ರಧಾರಿಗಳಿಗೆ ನೀಡಲಾದ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಎನ್‌ಐಎ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ಎಂ ಜಿ ಎಸ್‌ ಕಮಲ್‌ ನೇತತ್ವದ ವಿಭಾಗೀಯವು ಪೀಠವು ವಿಚಾರಣೆ ನಡೆಸಿತು.

ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು ಸಲ್ಲಿಸಿದ ಆಕ್ಷೇಪಣೆ ಪರಿಗಣಿಸಿದ ನ್ಯಾಯಾಲಯವು ಪ್ರತಿವಾದಿ ಆರೋಪಿಗಳಾದ ತಮಿಳುನಾಡಿನ ರಸೂಲ್‌, ಸದ್ದಾಂ ಹುಸೇನ್‌, ಅಬ್ದುಲ್‌ ಮಹೀತು ಮತ್ತು ಸಾಕ್ರೆಟೀಸ್‌ಗೆ ನೋಟಿಸ್‌ ಜಾರಿ ಮಾಡಿತು.

’ಶ್ರೀಲಂಕಾದ ಪ್ರಜೆಗಳನ್ನು ತಮಿಳುನಾಡಿನ ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಭಾರತಕ್ಕೆ ಕರೆತರಲಾಗುತ್ತದೆ. ನಂತರ ಅವರನ್ನು ಇಲ್ಲಿಂದ ಕೆನಡಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ’ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

’ಇಲ್ಲಿಂದ ಸಾಗಣೆ ಮಾಡಲಾಗುವ ಶ್ರೀಲಂಕಾ ಪ್ರಜೆಗಳಿಗೆ ತಲಾ ₹ 3 ರಿಂದ ₹ 10 ಲಕ್ಷ ಪಡೆಯಲಾಗುತ್ತಿದೆ. ಪ್ರಕರಣದ ನಾಲ್ವರು ಆರೋಪಿಗಳು ತಮಿಳುನಾಡಿನವರಾಗಿದ್ದು ಅವರಿಗೆ ಶ್ರೀಲಂಕಾಕ್ಕೆ ಹೋಗಿ ಬರುವ ಸಮುದ್ರ ಮಾರ್ಗಗಳ ಪರಿಚಯ ಚೆನ್ನಾಗಿದೆ. ಒಂದು ವೇಳೆ ಅವರಿಗೆ ಜಾಮೀನು ನೀಡಿದರೆ ಅವರೆಲ್ಲಾ ಪರಾರಿಯಾಗುವ ಸಾಧ್ಯತೆಗಳಿವೆ’ ಎಂದು ಎನ್‌ಐಎ ಆಕ್ಷೇಪಿಸಿದೆ.

ಜಾಮೀನಿನ ಮೇಲಿರುವ ಆರೋಪಿಗಳನ್ನು ಮಂಗಳೂರಿನಲ್ಲಿ 2021ರ ಜೂನ್‌ 10ರಂದು ಬಂಧಿಸಲಾಗಿತ್ತು. ಇವರ ಜೊತೆ ಒಟ್ಟು 13 ಆರೋಪಿಗಳನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಂತೆಯೇ ಶ್ರೀಲಂಕಾದ 38 ಮುಗ್ಧ ಪ್ರಜೆಗಳನ್ನೂ ವಶಕ್ಕೆ ಪಡೆಯಲಾಗಿದ್ದು ಅವರನ್ನೆಲ್ಲಾ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.

ತಾತ್ಕಾಲಿಕ ಕೇಂದ್ರದಲ್ಲಿ ಸ್ಥಳವಿಲ್ಲದಿರುವ ಕಾರಣ 38 ಶ್ರೀಲಂಕಾ ಪ್ರಜೆಗಳಿಗೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860, ವಿದೇಶಿಯರ ಕಾಯಿದೆ–1946, ಪಾಸ್‌ಪೋರ್ಟ್‌ ಕಾಯಿದೆ–1967ರ ವಿವಿಧ ಸೆಕ್ಷನ್‌ಗಳ ಅಡಿ ಎನ್‌ಐಎ ಪ್ರಕರಣ ದಾಖಲಿಸಿದೆ.