Karnataka High Court 
ಸುದ್ದಿಗಳು

ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ಜಾತಿ ನಿಂದನೆ ಮಾಡಿದರೆ ಮಾತ್ರ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧ: ಹೈಕೋರ್ಟ್‌

ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ಜಾತಿ ನಿಂದನೆ ಮಾಡಿದರೆ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ಗಳಾದ 3(1)(ಆರ್‌) ಮತ್ತು 3(1)(ಎಸ್‌) ಅನ್ವಯಿಸುತ್ತವೆ ಎಂದ ನ್ಯಾಯಾಲಯ ಹೇಳಿದೆ.

Bar & Bench

ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ಜಾತಿ ನಿಂದನೆ ಮಾಡಿದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ನಿಯಂತ್ರಣ) ತಿದ್ದುಪಡಿ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ಜಾತಿ ನಿಂದನೆ ಮಾಡಿದರೆ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ಗಳಾದ 3(1)(ಆರ್‌) ಮತ್ತು 3(1)(ಎಸ್‌) ಅನ್ವಯಿಸುತ್ತವೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಆದೇಶಿಸಿದೆ.

ಕಟ್ಟಡದ ನೆಲಮಾಳಿಗೆಯಲ್ಲಿ ಮೋಹನ್‌ ಎಂಬವರಿಗೆ ಜಾತಿ ನಿಂದನೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ರಿತೇಶ್‌ ಪೈಸ್‌ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿದೆ.

ಕಟ್ಟಡದ ನೆಲಮಾಳಿಗೆಯು ಸಾರ್ವಜನಿಕ ಸ್ಥಳ ಅಥವಾ ಸಾರ್ವಜನಿಕ ದೃಷ್ಟಿಗೆ ಒಳಪಟ್ಟಿಲ್ಲ. ಪ್ರಕರಣದ ಎಲ್ಲ ಸಾಕ್ಷ್ಯಗಳು ಮತ್ತು ದೂರುದಾರರು ಜಯಕುಮಾರ್‌ ಆರ್‌ ನಾಯರ್‌ ಅವರ ಸಹ ನೌಕರರಾಗಿದ್ದಾರೆ. ಹೀಗಾಗಿ, ನಿಂದನೆಯು ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಎಸ್‌ಸಿ/ಎಸ್‌ಟಿ ಕಾಯಿದೆಯ ನಿಬಂಧನೆ ಅನ್ವಯಿಸಬೇಕಾದರೆ ಅದು ಸಾರ್ವಜನಿಕವಾಗಿ ನಡೆದಿರಬೇಕು ಎಂದು ಪೀಠ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟಾ ಮತ್ತು ವಕೀಲ ಲಕ್ಷ್ಮಿಕಾಂತ್‌ ಜಿ ಅವರು “ನಾಯರ್‌ ವಿರುದ್ಧ ಅರ್ಜಿದಾರ ರಿತೇಶ್‌ ಪೈಸ್‌ ಅವರು ಹಿಂದೆ ಸಿವಿಲ್‌ ದಾವೆ ಹೂಡಿದ್ದರು. ಆ ಪ್ರಕರಣದಲ್ಲಿ ನಾಯರ್‌ ವಿರುದ್ಧ ಪ್ರತಿಬಂಧಕಾದೇಶವಿದೆ. ಅರ್ಜಿದಾರ ರಿತೇಶ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ತನ್ನ ಉದ್ಯೋಗಿ ಮೋಹನ್‌ ಅವರನ್ನು ನಾಯರ್‌ ಬಳಸಿಕೊಂಡಿದ್ದಾರೆ. ನೆಲಮಾಳಿಗೆಯಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅಲ್ಲಿ ಯಾರೂ ಓಡಾಡುತ್ತಿರಲಿಲ್ಲ” ಎಂದು ವಾದಿಸಿದ್ದರು.

ಮೋಹನ್‌ ಅವರನ್ನು ವಕೀಲರಾದ ಅಜಯ್‌ ಪ್ರಭು, ಬಿ ಎಸ್‌ ಸಚಿನ್‌ ಮತ್ತು ಹೈಕೋರ್ಟ್‌ ವಕೀಲರಾದ ಕೆ ಎಸ್‌ ಅಭಿಜಿತ್‌ ಅವರು “ಸಹೋದ್ಯೋಗಿಗಳ ಎದುರಿಗೆ ಘಟನೆ ನಡೆದಿದ್ದು, ಅವರು ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದಾರೆ” ಎಂದು ವಾದಿಸಿದ್ದರು.

ಘಟನೆ ಹಿನ್ನೆಲೆ: ಕಟ್ಟಡದ ನೆಲಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ದೂರುದಾರರ ಜಾತಿ ನಿಂದನೆಯನ್ನು ಅರ್ಜಿದಾರ ಮಾಡಿದ್ದರು. ದೂರುದಾರರಿಗೆ ಬೆದರಿಕೆ ಹಾಕಿದ್ದಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ದೂರುದಾರ ಸೇರಿದಂತೆ ಸಾಕ್ಷಿಗಳೆಲ್ಲರೂ ಜಯಕುಮಾರ್‌ ಆರ್‌ ನಾಯರ್‌ ಅವರ ಸಹ ಉದ್ಯೋಗಿಗಳಾಗಿದ್ದರು.

ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ಗಳಾದ 3(1)(ಆರ್‌), 3(1)(ಎಸ್‌), 3(2)(ವಿಎ) ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿ, ಮಂಗಳೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.