ಜಾತಿ ನಿಂದನೆ ಪ್ರಕರಣವೊಂದರ ತನಿಖೆಯಲ್ಲಿ ರಾಜ್ಯ ಸರ್ಕಾರದ ಲೋಪ, ವಿರೋಧಭಾಸ, ತನಿಖಾ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಎಂಟು ಮಂದಿಯನ್ನು ಖುಲಾಸೆಗೊಳಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಈಚೆಗೆ ಎತ್ತಿ ಹಿಡಿದಿದೆ. ಇದರಿಂದ ವಿಚಾರಣಾಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಯ (ಎಸ್‌ಸಿ/ಎಸ್‌ಟಿ (ಪಿಒಎ)ಕಾಯಿದೆ) ವಿವಿಧ ಸೆಕ್ಷನ್ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಂಡಿದ್ದ ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ರಮೇಶ್, ಪರಶುರಾಮ್, ಪಾಂಡು, ಮಲ್ಲಪ್ಪ, ಶ್ರೀಶೈಲ್, ಮಲ್ಲಪ್ಪ ಪೂಜಾರಿ, ಸಯ್ಯದ್ ನದಾಫ್ ಮತ್ತು ಅಶೋಕ್ ಗೂಳಿ ಅವರು ನಿರಪರಾಧಿಗಳು ಎಂಬ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ಮತ್ತು ಜಿ ಬಸವರಾಜ ಅವರ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
“ಜಾತಿ ನಿಂದನೆ ಪ್ರಕರಣವನ್ನು ಸಂಪೂರ್ಣವಾಗಿ ಮರು ಪರಿಗಣಿಸಿದ್ದು, ಮೌಖಿಕ ಮತ್ತು ಲಿಖಿತವಾಗಿ ಲಭ್ಯವಿರುವ ದಾಖಲೆಗಳ ವಿಶ್ಲೇಷಣೆ ಮತ್ತು ಪರಿಶೀಲನೆ ಹಾಗೂ ಸುಪ್ರೀಂ ಕೋರ್ಟ್ ರೂಪಿಸಿರುವ ಕಾನೂನಾತ್ಮಕ ತತ್ವ ಹಾಗೂ ಎಸ್‌ಸಿ/ಎಸ್‌ಟಿ (ಪಿಒಎ) ಕಾಯಿದೆ ಮತ್ತು ನಿಯಮಗಳಲ್ಲಿ ಉಲ್ಲೇಖಿಸಿರುವ ಕಡ್ಡಾಯ ಪ್ರಕ್ರಿಯಾತ್ಮಕ ರಕ್ಷಣೆಗಳನ್ನು ಪರಿಶೀಲಿಸಿದ ಬಳಿಕ ಅನುಮಾನಕ್ಕೆ ಆಸ್ಪದವಿಲ್ಲದಂತೆ ಪ್ರಾಸಿಕ್ಯೂಷನ್ ಆರೋಪಿಗಳ ದೋಷವನ್ನು ಸಾಬೀತುಪಡಿಸಲು ವಿಫಲವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ತನಿಖಾಧಿಕಾರಿಯು ಸಾಕ್ಷಿಗಳ ಹೇಳಿಕೆ ಮತ್ತು ಹೆಚ್ಚುವರಿ ಹೇಳಿಕೆ ದಾಖಲಿಸಿದ ಬಳಿಕ ಅದನ್ನು ಸಾಕ್ಷಿಗಳಿಗೆ ಓದಿ ಅಥವಾ ವಿವರಿಸಿ ತಿಳಿಸಿಲ್ಲ ಎಂದು ದಾಖಲೆಗಳು ಹೇಳುತ್ತವೆ. ಸಾಕ್ಷಿಗಳ ಹೇಳಿಕೆಯನ್ನು ಪ್ರಮಾಣೀಕರಿಸದೇ ಸಮಕ್ಷಮ ಎಂದು ಉಲ್ಲೇಖಿಸಿ ತಮ್ಮ ಸಹಿ ಹಾಕಿದ್ದಾರೆ. ಹೇಳಿಕೆಗಳನ್ನು ಕಂಪ್ಯೂಟರ್ ದಾಖಲೆ ರೂಪದಲ್ಲಿ ಸಲ್ಲಿಸಲಾಗಿದ್ದು, ಯಾರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಮತ್ತು ಅದನ್ನು ಯಾರಾದರೂ ಸಾಕ್ಷಿಗಳಿಗೆ ಓದಿ ತಿಳಿಸಿದ್ದಾರೆಯೇ ಎಂಬುದನ್ನು ಉಲ್ಲೇಖಿಸಿಲ್ಲ. ಇದು ಪ್ರಕ್ರಿಯೆಯ ಪಾವಿತ್ರ್ಯ ಮತ್ತು ಸಾಕ್ಷಿಗಳ ಹೇಳಿಕೆಗಳ ಸಾಕ್ಷ್ಯ ನಂಬಲರ್ಹತೆಯ ಬಗ್ಗೆ ಗಂಭೀರ ಅನುಮಾನ ಹುಟ್ಟುಹಾಕುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.
“ಎಸ್‌ಸಿ/ಎಸ್‌ಟಿ (ಪಿಒಎ) ನಿಯಮಗಳ ನಿಯಮ 7ರ ಉಪನಿಯಮದಡಿ 60 ದಿನಗಳ ಒಳಗೆ ತನಿಖೆ ನಡೆಸಿ ಸಕ್ಷಮ ನ್ಯಾಯಾಲಯಕ್ಕೆ ಡಿವೈಎಸ್‌ಪಿಯು ಆರೋಪ ಪಟ್ಟಿ ಸಲ್ಲಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಅದು ಮಾಡಲಾಗಿಲ್ಲ ಮತ್ತು ವಿಳಂಬಕ್ಕೆ ವಿವರಣೆ ಒದಗಿಸಲಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್ 102ರ ಅಡಿ ತನಿಖಾಧಿಕಾರಿಯು ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ಗೆ ಜಫ್ತಿ ಮಾಡಿದ ವರದಿಯನ್ನು ಸಲ್ಲಿಸಬೇಕು. ಅದನ್ನೂ ಪಾಲಿಸಲಾಗಿಲ್ಲ. ಇದಕ್ಕೆ ಯಾವುದೇ ಕಾರಣವನ್ನೂ ನೀಡಲಾಗಿಲ್ಲ. ಇದು ಶಾಸನಬದ್ಧ ಕಾನೂನಿಗೆ ವಿರುದ್ಧವಾದ ಕ್ರಮವಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.
“ಈ ರೀತಿಯಾದ ವ್ಯತ್ಯಾಸಗಳು, ನಿಯಮದಲ್ಲಿನ ಕಾನೂನುಬಾಹಿರ ನಡೆಯ ಜೊತೆಗೆ ಲೋಪ, ವಿರೋಧಭಾಸ, ತನಿಖಾ ಪ್ರಕ್ರಿಯೆಯಲ್ಲಿ ಇರುವ ಸಾಕಷ್ಟು ವ್ಯತ್ಯಾಸಗಳನ್ನು ಅನುಮಾನರಹಿತವಾಗಿ ರುಜುವಾತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಈ ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯದ ತೀರ್ಪು ಸರಿಯಾಗಿದೆ” ಎಂದು ಹೈಕೋರ್ಟ್ ಸಮರ್ಥಿಸಿದೆ.
ಪ್ರಕರಣದ ಹಿನ್ನೆಲೆ: 2012ರ ಮಾರ್ಚ್ 8ರಂದು ಸಂಜೆ ವೇಳೆಗೆ ಅಮೋಘಸಿದ್ಧ ದೇವಾಲಯದ ಹಿಂದಿರುವ ಮೊದಲನೇ ಆರೋಪಿ ರಮೇಶ್ ಮನೆ ಮುಂದೆ ದೂರುದಾರ ಮತ್ತು ಇತರೆ ಸಂತ್ರಸ್ತರು ಬೈಕ್‌ನಲ್ಲಿ ಹೋಗುತ್ತಿದ್ದರು. ಇದನ್ನು ನೋಡಿದ ಎಂಟು ಮಂದಿ ಆರೋಪಿಗಳು ಸಂತ್ರಸ್ತರ ಜಾತಿಯನ್ನು ಉಲ್ಲೇಖಿಸಿ ಅವಮಾನ ಮಾಡಿ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನು ಕೇಳಿಸಿಕೊಂಡ ದೂರುದಾರ ಏಕೆ ತಮ್ಮನ್ನು ನಿಂದಿಸಲಾಗುತ್ತಿದೆ ಎಂದು ಬೈಕ್ ನಿಲ್ಲಿಸಿ ಪ್ರಶ್ನಿಸಿದ್ದನು. ಆಗ ಆರೋಪಿಗಳು ಮಾರಕಾಸ್ತ್ರಗಳಿಂದ ದೂರುದಾರ ಮತ್ತು ಇತರರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ, ದೂರುದಾರರ ಬೈಕ್‌ಗೆ ಹಾನಿ ಮಾಡಿ, ಅದನ್ನು ಚರಂಡಿಗೆ ನೂಕಿದ್ದರು ಎಂದು ಆರೋಪಿಸಲಾಗಿತ್ತು.
ಈ ಆರೋಪದ ಮೇಲೆ ಎಂಟು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 147, 148, 323, 324, 307, 427, 504 ಹಾಗೂ ಎಸ್‌ಸಿ/ಎಸ್‌ಟಿ (ಪಿಒಎ) ಕಾಯಿದೆ ಸೆಕ್ಷನ್‌ಗಳಾದ 3(1)(x) ಮತ್ತು 3(2)(v)ರ ಅಡಿ ಪ್ರಕರಣ ದಾಖಲಿಸಲಾಗಿತ್ತು.