ಮುಸ್ಲಿಂ ವಿವಾಹಕ್ಕೆ ಅಂತ್ಯಹಾಡಲು ಅಥವಾ ಪತ್ನಿಗೆ ಜೀವನಾಂಶ ನೀಡುವ ಕರ್ತವ್ಯದಂತಹ ಹೊಣೆಗಾರಿಕೆಯಿಂದ ಬಿಡುಗಡೆಯಾಗಲು ಪತಿ ಮೂರು ಬಾರಿ ತಲಾಖ್ ಹೇಳುವುದಷ್ಟೇ ಸಾಕಾಗುವುದಿಲ್ಲ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತಿಳಿಸಿದೆ.
ತಲಾಖ್ (ವಿಚ್ಛೇದನ) ಘೋಷಣೆ ಮಾನ್ಯವಾಗಬೇಕಾದರೆ, ಅದನ್ನು ನಿರ್ದಿಷ್ಟ ಅಂತರದಲ್ಲಿ, ರಾಜಿ ಯತ್ನ ಫಲ ನೀಡುವುದೇ ಇಲ್ಲ ಎನ್ನುವಂತಹ ಸಂದರ್ಭಗಳಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಉಚ್ಚರಿಸಿರಬೇಕು ಎಂದು ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ತಿಳಿಸಿದ್ದಾರೆ.
ತಲಾಖ್ ಮಾನ್ಯ ಮಾಡಲು ಇಬ್ಬರ ಸಾಕ್ಷಿಗಳ ಸಮ್ಮುಖದಲ್ಲಿ ಉಚ್ಚರಿಸಿದ್ದರಷ್ಟೇ ಸಾಕಾಗುವುದಿಲ್ಲ. ಶಾಂತಿಯುತ ವೈವಾಹಿಕ ಜೀವನಕ್ಕಾಗಿ ಪತಿ ಮತ್ತು ಪತ್ನಿಯನ್ನು ಸಾಕ್ಷಿಗಳು ಮನವೊಲಿಸಿರಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮೊಹಮ್ಮದ್ ನಸೀಮ್ ಭಟ್ ಮತ್ತು ಬಿಲ್ಕ್ವೀಸ್ ಅಖ್ತರ್ ಇನ್ನಿತರರ ನಡುವಣ ಪ್ರಕರಣದಲ್ಲಿ ಕಾಶ್ಮೀರ ಹೈಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪುನ್ನು ಆಧರಿಸಿ ಅದು ಈ ತೀರ್ಪು ನೀಡಿದೆ.
ತಲಾಖ್ ಜಾರಿಯಾಗಬೇಕಾದರೆ ಪತಿ ಮತ್ತು ಪತ್ನಿಯ ಪ್ರತಿನಿಧಿಗಳು ವೈವಾಹಿಕ ವಿವಾದ ಬಗೆಹರಿಸಲು ಯತ್ನಿಸಿದರೂ ಅದು ಫಲಪ್ರದವಾಗಿಲ್ಲ; ವಿಚ್ಛೇದನಕ್ಕೆ ಕಾರಣಗಳು ಮೌಲ್ಯಯುತವಾಗಿದ್ದು ನೈಜವಾಗಿರಬೇಕು; ತಲಾಖನ್ನು ನ್ಯಾಯಸಮ್ಮತವಾದ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಉಚ್ಚರಿಸಿರಬೇಕು. ವಿಚ್ಛೇದನ ಪಡೆಯಬಯುವವರು ತುಹ್ರ್ ಸಮಯದಲ್ಲಿ (ಎರಡು ಋತುಸ್ರಾವದ ಅವಧಿಯ ನಡುವೆ ) ಪರಸ್ಪರ ಸಂಭೋಗದಲ್ಲಿ ತೊಡಗಿರಬಾರದು ಎಂಬ ನಿಯಮಗಳನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.
ಈ ಎಲ್ಲಾ ಅಂಶಗಳನ್ನು ಪತಿ ಈಡೇರಿದ್ದರೆ ಮಾತ್ರ ತಲಾಖ್ ಜಾರಿಯಾಗಿ ವಿವಾಹ ಅಂತ್ಯಗೊಳ್ಳುತ್ತದೆ. ಆಗ ಪತಿ ತನ್ನ ಹೆಂಡತಿಯೊಂದಿಗಿನ ವಿವಾಹ ಒಪ್ಪಂದದಡಿಯ ಕಟ್ಟುಪಾಡುಗಳಿಂದ ವಿಮುಖನಾಗುತ್ತಾನೆ ಎಂದು ಜುಲೈ 4ರ ಆದೇಶದಲ್ಲಿ ತಿಳಿಸಲಾಗಿದೆ.
ವ್ಯಕ್ತಿಯೊಬ್ಬರ ಪತ್ನಿಗೆ ಜೀವನಾಂಶ ನೀಡುವಂತೆ 2009 ರಲ್ಲಿ ಏಕಪಕ್ಷೀಯ ಆದೇಶ ನೀಡಲಾಗಿತ್ತು. ಇದನ್ನು ಆತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು 2013ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಮರಳಿಸಿತ್ತು. ಇಬ್ಬರೂ ಬೇರೆಯವರನ್ನು ವಿವಾಹವಾಗಿಲ್ಲ ಎಂಬುದನ್ನು ಅರಿತ ವಿಚಾರಣಾ ನ್ಯಾಯಾಲಯ ಪತಿಯ ಪರವಾಗಿ ಆದೇಶ ನೀಡಿತ್ತು. ಆದರೆ ಇದನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯ ಪತ್ನಿಗೆ ಮಾಸಿಕ ₹ 3,000 ಜೀವನಾಂಶ ನೀಡುವಂತೆ ತಾಕೀತು ಮಾಡಿತ್ತು. 2018ರಲ್ಲಿ ಪುನಃ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರ ಈ ಆದೇಶವನ್ನು ಪ್ರಶ್ನಿಸಿದ್ದರು.
ತಾನು ನೀಡಿರುವುದು ಶಾಯರೋ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ರದ್ದುಗೊಳಿಸಿರುವ ತ್ವರಿತ ತ್ರಿವಳಿ ತಲಾಖ್ ಅಲ್ಲ ಎಂದು ಅರ್ಜಿದಾರ ವಾದಿಸಿದ್ದರು. ಇದರಿಂದ ಪ್ರಭಾವಿತವಾಗದ ನ್ಯಾಯಾಲಯ ಅರ್ಜಿದಾರ ಹೇಳಿರುವ ವಿಚ್ಛೇದನ ವಿಧಾನವನ್ನು ಕಾನೂನಿನಡಿ ಅಸಮ್ಮತಿಗೊಳಿಸಲಾಗಿದೆ ಎಂದಿತು.
ಅಂತೆಯೇ ಜೀವನಾಂಶ ನೀಡುವಂತೆ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ಸೂಕ್ತವಾಗಿಯೇ ಇದೆ. ವೈವಾಹಿಕ ಭಿನ್ನಾಭಿಪ್ರಾಯ ಪರಿಹರಿಸಲು ಪತಿ ಸೂಕ್ತ ರೀತಿಯಲ್ಲಿ ಯತ್ನಿಸಿದ್ದರು ಎಂಬುದಕ್ಕೆ ದಾಖಲೆಗಳಿಲ್ಲ ಎಂದ ನ್ಯಾಯಾಲಯ ಮೇಲ್ಮನವಿ ವಜಾಗೊಳಿಸಿತು.