Justice M Nagaprasanna
Justice M Nagaprasanna 
ಸುದ್ದಿಗಳು

ವಿಚ್ಛೇದಿತ ಪತ್ನಿಗೆ ಶೇ. 75ರಷ್ಟು ಅಂಗವೈಕಲ್ಯ ಹೊಂದಿರುವ ಪತಿ ಜೀವನಾಂಶ ಪಾವತಿಸಲು ಆದೇಶಿಸಲಾಗದು: ಹೈಕೋರ್ಟ್‌

Bar & Bench

ಪಾರ್ಶವಾಯುವಿಗೆ ತುತ್ತಾಗಿ ಶೇ. 75ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಯು ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವಂತೆ ನಿರ್ದೇಶಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ. ಅಲ್ಲದೇ, ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.

ವಿಚ್ಚೇದನ ಕುರಿತಾಗಿ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಪತಿ ಸಲ್ಲಿಸಿದ ಹಾಗೂ ಮಾಸಿಕ ಜೀವನಾಂಶ ನಿರ್ವಹಣೆ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪತಿಯೂ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಮುಂದೆ ಉದ್ಯೋಗ ಹುಡುಕುಲು ಅವರು ಅಸಹಾಯಕರಾಗಿದ್ದಾರೆ. ಹೀಗಾಗಿ, ಜೀವನಾಂಶ ಪಾವತಿಸುವಂತೆ ಅವರಿಗೆ ನಿರ್ದೇಶನ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

ಪತ್ನಿ ಸಂಪಾದನೆಗೆ ಅರ್ಹಳು ಎನ್ನುವ ಅಂಶವನ್ನು ಪೀಠ ಗಮನಿಸಿತು. ಬಳಿಕ ಪತಿಗೆ ನೀಡಿದ ಅಂಗವೈಕಲ್ಯ ಪ್ರಮಾಣಪತ್ರವನ್ನು ಉಲ್ಲೇಖಿಸಿ, ಅಂಗವೈಕಲ್ಯದಿಂದಾಗಿ ಪತಿ ಸಂಪಾದಿಸಲು ಅಸಮರ್ಥನಾಗಿದ್ದರೂ ಗಂಡನ ಅಂಗವೈಕಲ್ಯ ಕಂಡು ಜೀವನಾಂಶ ಪಾವತಿಸಲು ಹೆಂಡತಿ ಏಕೆ? ಹೇಗೆ? ಒತ್ತಾಯಿಸುತ್ತಿದ್ದಾಳೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದೆ.

ಜೀವನಾಂಶ ನಿರ್ಧರಿಸುವ ವೇಳೆ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಪತಿ ಹೆಂಡತಿ ಅಥವಾ ಮಗು ಕಾಪಾಡಿಕೊಳ್ಳಲು ಸಮರ್ಥ ವ್ಯಕ್ತಿಯೇ ಎಂಬುದು ಪ್ರಾಥಮಿಕ ವಿಚಾರ. ಪತಿ ಆರೋಗ್ಯ ಸ್ಥಿತಿ ಸರಿಯಿಲ್ಲದಿರುವುದರಿಂದ ಮುಂದೆ ಉದ್ಯೋಗ ಹುಡುಕಲು ಮತ್ತು ಹೆಂಡತಿ ಮತ್ತು ಮಗುವಿಗೆ ಜೀವನಾಂಶ ಪಾವತಿಸಲು ಆತ ಶಕ್ತನಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಂದುವರಿದು, ಡಿಸೆಂಬರ್ 2013ರಂದು ಪತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಗಲೇ ಆತ ನ್ಯಾಯಾಲಯ ಸೂಚಿಸಿದ ಜೀವನಾಂಶ ಪಾವತಿಸಲು ಬಾಕಿ ಇತ್ತು.  ನ್ಯಾಯಾಲಯವು ಕನಿಷ್ಠ ಆ ದಿನಾಂಕವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಜೀವನಾಂಶಕ್ಕಾಗಿ ಆಪೇಕ್ಷಿಸುತ್ತಿದ್ದಾರೆ. ಆದರೆ ಪತಿಯೂ ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದಿದೆ.

ಪತಿಯಿಂದ ಭರಿಸಬೇಕಾದ ಜೀವನಾಂಶವು 19,04,000 ರೂಪಾಯಿ ಬಾಕಿ ಇದೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ. ಇದು ಗಂಡನ ಅಂಗವೈಕಲ್ಯದ ಅವಧಿಯನ್ನು ಒಳಗೊಳ್ಳುತ್ತದೆ. ಆದರೆ, ಈಗ ನ್ಯಾಯಾಲಯವು ಇದನ್ನು ಪಾವತಿಸಲು ನಿರ್ದೇಶಿಸಿದರೆ ಈಗಾಗಲೇ ಅನಾರೋಗ್ಯಕ್ಕೆದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ನೂಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ವಿಚ್ಛೇದಿತ ಪತಿಯ ತಂದೆ ಹಲವಾರು ಆಸ್ತಿಗಳನ್ನು ಹೊಂದಿದ್ದು, ಹೆಂಡತಿ ಮತ್ತು ಮಗುವಿನ ಜೀವನಾಂಶವನ್ನು ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮತ್ತು ಪ್ರತಿವಾದಿಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದರಿಂದ ವಿಚ್ಚೇದನಕ್ಕೆ ಮುಂದಾಗಿದ್ದರು. ಸದರಿ ಅರ್ಜಿಯಲ್ಲಿ ಪತ್ನಿ ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 24ರ ಅಡಿಯಲ್ಲಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 15,000 ರೂಪಾಯಿ ಮಧ್ಯಂತರ ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಿತ್ತು.

ಪತ್ನಿ ಜುಲೈ 2013 ರಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಪತಿಯಿಂದ ಜೀವನಾಂಶ ದೊರೆತ ಕುರಿತು ಮೆಮೊ ಸಲ್ಲಿಸಿದ್ದು, ಪತಿ ಜೀವನಾಂಶ ಪಾವತಿಸಲು ಬಾಕಿ ಇದೆ ಎಂದು ಹೇಳಿದ್ದರು. ಈ ಮೆಮೊವನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿ ವಿಚಾರಣೆ  ಬಾಕಿಯಿರುವಾಗಲೇ ಪತಿ ಪಾರ್ಶ್ವವಾಯುವಿಗೆ ತುತ್ತಾಗಿ ಶೇ 75ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಇದರಿಂದಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ಜೀವನಾಂಶ ಆದೇಶ ಕಾರ್ಯಗತಗೊಳಿಸುವಂತೆ ಕೋರಿ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಬಾಕಿ ಜೀವನಾಂಶ ಪಾವತಿಸುವಂತೆ ಪತಿಯ ತಂದೆಗೆ ಸೂಚಿಸಿತ್ತು. ಅದು ಪಾಲನೆಯಾಗದೇ ಇದ್ದಾಗ ಗಂಡನ ವಿರುದ್ಧ ವಾರಂಟ್ ಹೊರಡಿಸಿತ್ತು.  ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.