Justice M Nagaprasanna 
ಸುದ್ದಿಗಳು

ಪತ್ನಿಯ ಮಾನಸಿಕ ಆರೋಗ್ಯ ಪರೀಕ್ಷೆ ಕೋರಿದ್ದ ಪತಿಯ ಅರ್ಜಿ ವಜಾ; ₹ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ಪತಿ ವಿವಾಹವನ್ನು ಅನೂರ್ಜಿತಗೊಳಿಸಲು ನ್ಯಾಯಾಲಯದಲ್ಲಿ ತನ್ನ ಪರ ಸಾಕ್ಷ್ಯ ಹೆಣೆಯಲು ವೇದಿಕೆಯನ್ನು ಸಿದ್ಧಪಡಿಸುತ್ತಿರುವುದು ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್.‌

Bar & Bench

ಕೌಟುಂಬಿಕ ವ್ಯಾಜ್ಯಗಳಲ್ಲಿ ಪತ್ನಿಯ ಮಾನಸಿಕ ಸ್ಥಿತಿಯ ಬಗ್ಗೆ ಆರೋಪ ಮಾಡಿ ಮನಃಶಾಸ್ತ್ರಜ್ಞರಿಂದ ಪರೀಕ್ಷೆಗೊಳಪಡಿಸಬೇಕು ಎಂದು ಪತಿ ಮಾಡುವ ಮನವಿಯನ್ನು ಪುರಸ್ಕರಿಸಬೇಕಾದರೆ ಮೇಲ್ನೋಟಕ್ಕೆ ಪತಿಯ ಆರೋಪಗಳಲ್ಲಿ ಬಲವಾದ ಸಾಕ್ಷ್ಯ ಇರಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಪತ್ನಿಯನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್‌) ಮನಃಶಾಸ್ತ್ರಜ್ಞರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂಬ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸುವ ವೇಳೆ ಮೇಲಿನ ಅವಲೋಕನ ಮಾಡಿತು.

“ತನ್ನ ಪತ್ನಿಯನ್ನು ಮಾನಸಿಕ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ ತಕ್ಷಣವೇ ಅದನ್ನು ಪರಿಗಣಿಸಲಾಗದು. ಮೇಲ್ನೋಟಕ್ಕೆ ಆರೋಪ ಪುಷ್ಟೀಕರಿಸುವಂತಹ ಬಲವಾದ ಸಾಕ್ಷ್ಯ ಮತ್ತು ಆಧಾರ ಇರಬೇಕಾಗುತ್ತದೆ” ಎಂದಿರುವ ಪೀಠವು ಪತಿ ಅನಗತ್ಯ ದಾವೆ ಹೂಡಿದ್ದಾರೆ ಎಂದು ಅವರಿಗೆ ₹50 ಸಾವಿರ ದಂಡ ವಿಧಿಸಿದ್ದು, ಅದನ್ನು ಪತ್ನಿಗೆ ನೀಡುವಂತೆ ನಿರ್ದೇಶಿಸಿದೆ.

“ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಹೇಳಿಕೆ ಕೇವಲ ಊಹೆ ಎನಿಸುತ್ತದೆ. ಏಕೆಂದರೆ, ಪತ್ನಿ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದರೆ ಆಕೆ ಪ್ರತಿಭಾವಂತೆ ಮತ್ತು ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದಿರುವುದು ತಿಳಿಯುತ್ತದೆ. ಹೀಗಾಗಿ, ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದರೆ ಪತಿ ವಿವಾಹವನ್ನು ಅನೂರ್ಜಿತಗೊಳಿಸಲು ನ್ಯಾಯಾಲಯದಲ್ಲಿ ತನ್ನ ಪರ ಸಾಕ್ಷ್ಯ ಹೆಣೆಯಲು ವೇದಿಕೆಯನ್ನು ಸಿದ್ಧಪಡಿಸುತ್ತಿರುವುದು ಕಂಡು ಬರುತ್ತದೆ. ಆದ್ದರಿಂದ ಈ ಅರ್ಜಿಯನ್ನು ಪರಿಗಣಿಸಲಾಗದು” ಎಂದು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: 2020ರ ನವೆಂಬರ್ 26ರಂದು ದಂಪತಿಗೆ ಮದುವೆಯಾಗಿದ್ದು, ಇಬ್ಬರ ನಡುವಿನ ಮನಸ್ತಾಪ ನ್ಯಾಯಾಲಯದ ಮೆಟ್ಟಿಲೇರಿತ್ತು.

ಪತ್ನಿ 2021ರ ಜನವರಿ 28ರಂದು ತವರಿಗೆ ಹೋದವಳು ವಾಪಸ್ ಬಂದಿಲ್ಲ ಎಂದು ಪತಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪತ್ನಿಯು ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498ಎ ಅಡಿಯಲ್ಲಿ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯಿದೆ-1961ರ ಸೆಕ್ಷನ್ 3 ಮತ್ತು 4ರ ಅಡಿ 2022ರ ಏಪ್ರಿಲ್‌ 14ರಂದು ಬೆಂಗಳೂರಿನ ಕೆ ಪಿ‌ ಅಗ್ರಹಾರ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಪತಿಯ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಇದರ ನಂತರ ಪತಿ, ಮಾನಸಿಕ ಕ್ರೌರ್ಯದ ಆಧಾರದಡಿ ವಿವಾಹ ರದ್ದುಗೊಳಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬಾಕಿ ಇರುವಾಗಲೇ ಹೆಂಡತಿಯ ಮಾನಸಿಕ ಸ್ಥಿತಿ ಸರಿ ಇಲ್ಲ. ಹೀಗಾಗಿ, ಆಕೆಯನ್ನು ನಿಮ್ಹಾನ್ಸ್‌ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ತೋರಿಸಲಾಗಿತ್ತು, ಆಗ ವೈದ್ಯರು ಆಕೆಯ ಮಾನಸಿಕ ಸ್ಥಿತಿ 11 ವರ್ಷ 8 ತಿಂಗಳ ಬಾಲಕಿಯ ಹಂತದ್ದಿದೆ. ಆಕೆಯ ಮನಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಮದುವೆ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಪತ್ನಿಯು ನಾನು ಓರ್ವ ಸಂಗೀತಗಾರ್ತಿ, ಶಿಕ್ಷಕಿ ಮತ್ತು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ಹಲವು ತಾಂತ್ರಿಕ ಪರೀಕ್ಷೆಗಳನ್ನು ಪಾಸು ಮಾಡಿದ್ದೇನೆ ಎಂದು ದಾಖಲೆಗಳ ಸಹಿತ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದರು. ನನ್ನ ಮಾನಸಿಕ ವಯಸ್ಸು ಬರೀ 11 ವರ್ಷ 8 ತಿಂಗಳು ಆಗಿದೆ ಎಂದು ಪತಿ ಆರೋಪಿಸಿರುವುದನ್ನು ಗಮನಿಸಿದರೆ, ನನ್ನ ಮಾನಸಿಕ ಸ್ಥಿತಿ ಸರಿ ಇಲ್ಲದೆ ಇಷ್ಟೆಲ್ಲಾ ಓದಲು ಸಾಧ್ಯವಿತ್ತೇ, ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಆಗುತ್ತಿತ್ತೇ’ ಎಂದು ಪ್ರಶ್ನಿಸಿದ್ದರು.