“ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಲಾಗದು” ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ ಈಚೆಗೆ ಪುನುರುಚ್ಚರಿಸಿದೆ.
ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 6ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿರುವ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ 26 ವರ್ಷದ ಯುವತಿ (ಪತಿಯ ಪ್ರೇಯಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಕುರಿತಂತೆ ಆದೇಶಿಸಿದೆ.
ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದಿಂದ ಮಾತ್ರ ಸಂಬಂಧಿಯ ಸ್ಥಾನಮಾನ ಸಿಗುತ್ತದೆ. ವಿವಾಹೇತರ ಸಂಬಂಧ ಹೊಂದಿರುವ ಪ್ರೇಯಸಿ ಅಥವಾ ಮಹಿಳೆಯನ್ನು ಪತಿಯ ಸಂಬಂಧಿ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ” ಎಂಬುದನ್ನು ಪೀಠ ಉಲ್ಲೇಖಿಸಿದೆ.
ಪತ್ನಿಯ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 85ರ ಅಡಿಯಲ್ಲಿ ಪತಿಯ ಪ್ರೇಯಸಿಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಅರ್ಜಿದಾರ ಯುವತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 85 (ಪತಿ ಅಥವಾ ಪತಿಯ ಸಂಬಂಧಿಕರು ನೀಡುವ ಕ್ರೌರ್ಯ ಮತ್ತು ಕಿರುಕುಳ), 74 (ಯಾವುದೇ ಮಹಿಳೆಯ ಘನತೆ ಅಥವಾ ಶೀಲಕ್ಕೆ ಭಂಗ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ), 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಮಾಡಲಾಗುವ ಉದ್ದೇಶಪೂರ್ವಕ ಅವಮಾನ), 351(2) (ಕ್ರಿಮಿನಲ್ ಬೆದರಿಕೆ) ಹಾಗೂ 3(5) (ಸಮಾನ ಉದ್ದೇಶ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ–1961ರ ಕಲಂ 3 ಮತ್ತು 4ರ (ವರದಕ್ಷಿಣೆ ನೀಡುವುದು, ತೆಗೆದುಕೊಳ್ಳುವುದು ಅಥವಾ ಅದಕ್ಕಾಗಿ ಬೇಡಿಕೆ ಇಡುವುದು ಕಾನೂನುಬಾಹಿರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.