Orissa High Court 
ಸುದ್ದಿಗಳು

ಪಂಚಾಯತ್ ಸದಸ್ಯೆಯರ ಕೆಲಸದಲ್ಲಿ ಮೂಗು ತೂರಿಸುವ ಗಂಡಂದಿರು ಮಹಿಳಾ ಮೀಸಲಾತಿ ಆಶಯಗಳಿಗೆ ಮಾರಕ: ಒರಿಸ್ಸಾ ಹೈಕೋರ್ಟ್

ಇಂತಹ ನಡವಳಿಕೆಯಿಂದ ಮಹಿಳೆಯರು ತಳಮಟ್ಟದ ರಾಜಕಾರಣದಲ್ಲಿ ʼಮುಖರಹಿತ ಪಂಚಾಯತ್ ಸದಸ್ಯರಾಗಿʼ ಬಿಡುತ್ತಾರೆ ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿ ಅಂತಹ ಮಹಿಳೆಯರ ಪ್ರಾತಿನಿಧ್ಯ, ಸ್ವಾಯತ್ತತೆ ಹಾಗೂ ಧ್ವನಿಯನ್ನು ಕಿತ್ತುಕೊಂಡಂತಾಗುತ್ತದೆ ಎಂದ ಪೀಠ.

Bar & Bench

ಪತ್ನಿಯರ ಬದಲಿಗೆ ಗಂಡಂದಿರೇ ಪಂಚಾಯತ್‌ ಸದಸ್ಯರಾಗಿ ಕೆಲಸ ಮಾಡುವ ಪರಿಪಾಠವು, ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಆಶಯಗಳನ್ನು ಮಣಿಸುತ್ತದೆ ಎಂದು ಒರಿಸ್ಸಾ ಹೈಕೋರ್ಟ್‌ ಈಚೆಗೆ ಹೇಳಿದೆ [ಮನೋಜ್ ಕುಮಾರ್ ಮಂಗರಾಜ್ ಮತ್ತು ಕಲಹಂಡಿ ಜಿಲ್ಲಾಧಿಕಾ ಇನ್ನಿತರರ ನಡುವಣ ಪ್ರಕರಣ].

ಅಂತಹ ಬದಲಿ ಪಂಚಾಯತ್‌ ಸದಸ್ಯರ ವಿರುದ್ಧ ಕೈಗೊಂಡ ಕ್ರಮ ಮತ್ತು ಮಹಿಳಾ ಸದಸ್ಯೆಯರಿಗೆ ಸೂಕ್ತ ಸಾಮರ್ಥ್ಯ ವೃದ್ಧಿ ತರಬೇತಿ ನೀಡಲು ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಡಾ. ಎಸ್ ಕೆ ಪಾಣಿಗ್ರಾಹಿ ಅವರು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದರು.

ಹಾಗೆ ತಪ್ಪೆಸಗುತ್ತಿರುವ ಬದಲಿ ಪಂಚಾಯತ್‌ ಸದಸ್ಯರ ವಿರುದ್ಧ ಜಿಲ್ಲಾಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಕುಂದುಕೊರತೆ ನಿವಾರಣಾ ವ್ಯವಸ್ಥೆ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೇಳಿದೆ.

ಪಂಚಾಯತ್‌ ಸದಸ್ಯೆಯ ಪತಿ ತನ್ನ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯತ್‌ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯಡಿ ಕೆಲಸ ಮಾಡದೆ ಗೈರಾಗುತ್ತಿದ್ದ 30 ಉದ್ಯೋಗ ಕಾರ್ಡ್‌ದಾರರು ಹಾಜರಾಗಿದ್ದಾರೆ ಎಂದು ದಾಖಲೆ ಸೃಷ್ಟಿಸುವಂತೆ ಪಂಚಾಯತ್‌ ಸದಸ್ಯೆಯ ಪತಿ ಅರ್ಜಿದಾರರಿಗೆ ತಾಕೀತು ಮಾಡಿದ್ದ. ಇದಕ್ಕೆ ಅರ್ಜಿದಾರರು ಮಣಿದಿರಲಿಲ್ಲ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ʼದೇಶದ ತಳಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ಬದಲಿ ಪಂಚಾಯತ್‌ ಸದಸ್ಯರ ಹಾವಳಿ ಸಾಕಷ್ಟು ಬೇರೂರಿದೆʼ ಎಂದರು.