Chief Justice N V Anjaria and K V Aravind, Karnataka HC 
ಸುದ್ದಿಗಳು

'ಹೈಕೋರ್ಟ್‌ ಕಾನೂನು ಸೇವಾ ಸಮಿತಿಯೇಕೆ ಇಷ್ಟು ಪಿಐಎಲ್‌ ದಾಖಲಿಸುತ್ತಿದೆ?' ಹೈಕೋರ್ಟ್‌ ಪ್ರಶ್ನೆ

ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವಾಸದಲ್ಲಿ ಅರೆಕಾಲಿಕ ದಿನಗೂಲಿಗೆ ನೇಮಕವಾಗಿರುವವರಿಗೆ ಕಡಿಮೆ ವೇತನ ಪಾವತಿಸುತ್ತಿರುವುದು, ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್‌ಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿತು.

Bar & Bench

ಹೈಕೋರ್ಟ್‌ ಕಾನೂನು ಸೇವಾ ಸಮಿತಿಯು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಆಕ್ಷೇಪಿಸಿದೆ.

ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವಾಸದಲ್ಲಿ ಅರೆಕಾಲಿಕ ದಿನಗೂಲಿಗೆ ನೇಮಕವಾಗಿರುವವರಿಗೆ ಕಡಿಮೆ ವೇತನ ಪಾವತಿಸುತ್ತಿರುವುದು ಮತ್ತು ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿ ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠವು ಅತೃಪ್ತಿ ವ್ಯಕ್ತಪಡಿಸಿದೆ.

“ಇಲ್ಲಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಪಿಐಎಲ್‌ಗಳನ್ನು ದಾಖಲಿಸುತ್ತಿದೆಯಲ್ಲಾ? ಅವರು ಪಿಐಎಲ್‌ ಸಲ್ಲಿಸುವುದನ್ನು ಸ್ವಾಗತಿಸುತ್ತೇನೆ. ಆದರೆ, ಅದು ಕೆಲವೊಮ್ಮೆ ಅಹಿತಕರವಾಗಿರುತ್ತದೆ ಎನ್ನುವುದು ನನ್ನ ಗ್ರಹಿಕೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಧಾರವಾಡ ಮತ್ತು ಕಲಬುರ್ಗಿ ಪೀಠದ ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವಾಸದಲ್ಲಿ ಮನೆಕೆಲಸ ಮಾಡುತ್ತಿರುವ 71 ಅರೆಕಾಲಿಕ ಡಿ ಗ್ರೂಪ್‌ ಉದ್ಯೋಗಿಗಳಿಗೆ ಸೌಲಭ್ಯ ಕಲ್ಪಿಸಲು ಕೋರಿ 2014ರಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‌ ಅನ್ನು ಪೀಠ ವಿಚಾರಣೆ ನಡೆಸಿತು.

ಕೆಎಚ್‌ಎಲ್‌ಎಸ್‌ಸಿ ಪ್ರತಿನಿಧಿಸಿದ್ದ ವಕೀಲರು “ದಿನಗೂಲಿ ನೌಕಕರಿಗೆ ಮಾಸಿಕ ₹3,000 ವೇತನ ಪಾವತಿಸುತ್ತಿದ್ದ ಹಿನ್ನೆಲೆಯಲ್ಲಿ ಪಿಐಎಲ್‌ ಸಲ್ಲಿಕೆ ಮಾಡಲಾಗಿದೆ. ನ್ಯಾಯಾಲಯ ಮಧ್ಯಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಕಾಯಂ ಡಿ ಗ್ರೂಪ್‌ ನೌಕಕರಿಗೆ ಸಿಗುವ ವೇತನ ದೊರೆಯುವಂತಾಗಿದೆ. ನಗದುರಹಿತ ಮತ್ತು ನಗದುಸಹಿತ ರಜೆಗೆ ಸಂಬಂಧಿಸಿದಂತೆ ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ ಕಾಯಿದೆ 2012ರ ಅನ್ವಯ ಅವರಿಗೆ ಸೌಲಭ್ಯ ವಿಸ್ತರಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿತ್ತು” ಎಂದರು.

ಮುಂದುವರಿದು, “ಸಿಬ್ಬಂದಿಯ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಾದಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅಗತ್ಯ ಹುದ್ದೆಗಳನ್ನು ಸೃಷ್ಟಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿತ್ತು” ಎಂದರು.

ಹೈಕೋರ್ಟ್‌ ರಿಜಿಸ್ಟ್ರಾರ್‌ ಪ್ರತಿನಿಧಿಸಿದ್ದ ವಕೀಲರು “ಹುದ್ದೆ ಸೃಷ್ಟಿಸುವುದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಹಾಗಾದಲ್ಲಿ ಹಾಲಿ ಇರುವ ಸಿಬ್ಬಂದಿಯನ್ನು ಕಾಯಂಗೊಳಿಸಬಹುದು” ಎಂದಿತು.

ಆಗ ಪೀಠವು “ಈ ದಿನಗೂಲಿ ನೌಕರರು ಹೈಕೋರ್ಟ್‌ಗೆ ಕೆಲಸ ಮಾಡುತ್ತಿದ್ದಾರೆ. ಅವರು ದಿನಗೂಲಿ ನೌಕರರ ದೊಡ್ಡ ಗುಂಪಿನ ಭಾಗವಾಗಿದ್ದಾರೆ. ಈ ಪೈಕಿ ಉಪ ಗುಂಪು ರಚಿಸಿ, ವಿಶೇಷ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಕಷ್ಟವಾಗಬಹುದು” ಎಂದಿತು.

ಆಗ ಅರ್ಜಿದಾರರ ಪರ ವಕೀಲರು “ಹಾಗೆಂದು ಈಗಾಗಲೇ ಹೈಕೋರ್ಟ್‌ಗೆ ನೇಮಕವಾಗಿರುವ ಸಿಬ್ಬಂದಿಯನ್ನು ಕನಿಷ್ಠ ವೇತನ ಇಲ್ಲದೆ ಕೆಲಸ ಮಾಡುವಂತೆ ಸೂಚಿಸಲಾಗದು” ಎಂದರು.

ಆರಂಭದಲ್ಲಿ ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲ ನಿಲೋಫರ್‌ ಅಕ್ಬರ್‌ ಅವರು ನ್ಯಾಯಾಲಯದ ಹಿಂದಿನ ಆದೇಶದ ಅನ್ವಯ ದಾಖಲೆಯನ್ನು ಪೀಠದ ಮುಂದೆ ಇಡಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದಿದ್ದರು. ಆನಂತರ ಅರೆಕಾಲಿಕ ಡಿ ಗುಂಪಿನ ನೌಕರರಿಗೆ ಸೌಲಭ್ಯ ಕಲ್ಪಿಸಿದರೆ ಉಳಿದವರೆಲ್ಲರೂ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಪಿಐಎಲ್‌ಗೆ ಆಕ್ಷೇಪಿಸಿದರು.

ಅಂತಿಮವಾಗಿ ಪೀಠವು ಅರ್ಜಿದಾರರ ಮನವಿ ಮತ್ತು ನ್ಯಾಯಾಲಯದ ಹಿಂದಿನ ಆದೇಶವನ್ನು ಪರಿಗಣಿಸಿ ಡಿಸೆಂಬರ್‌ 5ರೊಳಗೆ ಸೂಕ್ತ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.