AAB facilitates Justice Dr. Sastry
AAB facilitates Justice Dr. Sastry  
ಸುದ್ದಿಗಳು

ನ್ಯಾಯಮೂರ್ತಿಯನ್ನು ಪರಿಹಾರವಾದಿ, ಉದಾರವಾದಿ ಎಂದು ಬ್ರ್ಯಾಂಡ್‌ ಮಾಡುವುದಕ್ಕೆ ನನ್ನ ಸಹಮತ ಇಲ್ಲ: ನ್ಯಾ. ಶಾಸ್ತ್ರಿ

Bar & Bench

“ಯಾವುದೇ ನ್ಯಾಯಮೂರ್ತಿಯನ್ನು ಪರಿಹಾರ ಒದಗಿಸುವ ಅಥವಾ ಉದಾರವಾದಿ ನ್ಯಾಯಮೂರ್ತಿ ಎಂದು ಬಿಂಬಿಸುವುದಕ್ಕೆ ನನ್ನ ಸಹಮತ ಇಲ್ಲ” ಎಂದು ನ್ಯಾಯಮೂರ್ತಿ ಡಾ. ಪ್ರಭಾಕರ್‌ ಶಾಸ್ತ್ರಿ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಪ್ರಾಧಿಕಾರದ ವತಿಯಿಂದ ಕೋರ್ಟ್‌ ಹಾಲ್‌ 1ರಲ್ಲಿ ಬುಧವಾರ ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ನ್ಯಾಯಮೂರ್ತಿಗಳನ್ನು ಪರಿಹಾರ ನೀಡುವ ನ್ಯಾಯಮೂರ್ತಿ ಅಥವಾ ಪ್ರಗತಿಪರ ನ್ಯಾಯಮೂರ್ತಿ ಇತ್ಯಾದಿ ಎಂದು ಬ್ರ್ಯಾಂಡ್‌ ಮಾಡಿ ಗುರುತಿಸುವುದನ್ನು ನಾನು ಗಮನಿಸಿದ್ದೇನೆ. ನನ್ನ ಪ್ರಕಾರ ನ್ಯಾಯಮೂರ್ತಿಯು ಎಲ್ಲಾ ವಿಧದಲ್ಲೂ ನ್ಯಾಯಮೂರ್ತಿಯಾಗಿರಬೇಕು. ಯಾವುದೇ ಪ್ರಭಾವಕ್ಕೆ ಅವರು ಒಳಗಾಗಬಾರದು. ಅವರ ಮುಂದಿರುವ ಪ್ರಕರಣ ಕಠಿಣವಾಗಿ ನಡೆದುಕೊಳ್ಳಬೇಕು ಎಂದು ಬಯಸಿದರೆ ಹಾಗೆ ನಡೆದುಕೊಳ್ಳಬೇಕಾಗುತ್ತದೆ. ಅಗತ್ಯ ಇರುವ ಪ್ರಕರಣಗಳಲ್ಲಿ ನ್ಯಾಯಮೂರ್ತಿಯು ಸಹಾನುಭೂತಿಯಿಂದ ಮತ್ತು ಹೂವಿನಂತೆ ಇರಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಪ್ರಕರಣದ ಅರ್ಹತೆಯಿಂದ ವಿಮುಖರಾಗಬಾರದು. ತನಗೆ ದೊರೆತಿರುವ ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಬಾರದು. ಎಲ್ಲಾ ಪ್ರಕರಣದಲ್ಲೂ ಪ್ರಗತಿಪರ ಮನೋಭಾವದಿಂದ ನೋಡುವುದು ಅಥವಾ ಅನಗತ್ಯವಾದ ಪ್ರಕರಣದಲ್ಲಿ ವಿಶೇಷ ಅಧಿಕಾರ ಬಳಕೆ ಮಾಡುವುದು ಒಳ್ಳೆಯ ನ್ಯಾಯಮೂರ್ತಿಯ ಲಕ್ಷಣವಲ್ಲ” ಎಂದರು.

“ಹೀಗೆ ಮಾಡುವುದರಿಂದ ಅವರು ಜನಪ್ರಿಯ ನ್ಯಾಯಮೂರ್ತಿಯಾಗಬಹುದು. ಆದರೆ, ಉತ್ತಮ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಎನಿಸಿಕೊಳ್ಳಲಾರರು. ಹೀಗಾಗಿ, ನಿಜ ದೃಷ್ಟಿಯಲ್ಲಿ ಉದಾರವಾದಿ ಅಥವಾ ಸಂಪ್ರದಾಯವಾದಿಯಾಗುವುದು ನ್ಯಾಯಮೂರ್ತಿಯ ದೋಷವಾಗಿದೆ” ಎಂದರು.

ಬೆಂಗಳೂರು ವಕೀಲರ ಸಂಘದ ವತಿಯಿಂದ ಸಂಜೆ ನ್ಯಾ. ಶಾಸ್ತ್ರಿ ಅವರನ್ನು ಗೌರವಿಸಿ, ಬೀಳ್ಕೊಡುಗೆ ನೀಡಲಾಯಿತು.