Dhanush and Nayanthara, Madras High Court facebook, Instagram
ಸುದ್ದಿಗಳು

ನಾನುಮ್ ರೌಡಿ ಧಾನ್ ಚಿತ್ರದ ನಯನತಾರಾ ಉಡುಗೆಯ ಮೇಲೂ ತನ್ನ ಹಕ್ಕುಸ್ವಾಮ್ಯವಿದೆ: ಮದ್ರಾಸ್ ಹೈಕೋರ್ಟ್‌ಗೆ ಧನುಷ್ ವಿವರಣೆ

ಧನುಷ್ ಒಡೆತನದ ವಂಡರ್‌ಬಾರ್‌ ತನ್ನ ಮತ್ತು ನಯನತಾರಾ ವಿರುದ್ಧ ಹೂಡಿರುವ ಮೊಕದ್ದಮೆ ತಿರಸ್ಕರಿಸುವಂತೆ ಕೋರಿ ನೆಟ್‌ಫ್ಲಿಕ್ಸ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಇದೇ ವೇಳೆ ನ್ಯಾಯಾಲಯ ಕಾಯ್ದಿರಿಸಿತು.

Bar & Bench

ʼನಾನುಮ್ ರೌಡಿ ಧಾನ್ʼ ಚಿತ್ರಕ್ಕೆ ಬಳಸಿದ ಎಲ್ಲಾ ಪಾತ್ರಗಳು ಮತ್ತು ವೇಷಭೂಷಣಗಳ ಮೇಲೆ ತನಗೆ ಹಕ್ಕುಸ್ವಾಮ್ಯ ಇದೆ ಎಂದು ನಟ ಧನುಷ್ ಅವರ ನಿರ್ಮಾಣ ಸಂಸ್ಥೆಯಾದ ವಂಡರ್‌ಬಾರ್‌ ಫಿಲ್ಮ್ಸ್ ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.

ಇಷ್ಟಾದರೂ ಚಿತ್ರದ ನಾಯಕನಟಿ ನಯನತಾರಾ ಅವರು ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಪ್ರಸಾರವಾದ 'ನಯನತಾರ: ಬಿಯಾಂಡ್ ದ ಫೇರಿಟೇಲ್ʼ ಸಾಕ್ಷ್ಯಚಿತ್ರದಲ್ಲಿ ಸಿನಿಮಾದ 28 ಸೆಕೆಂಡುಗಳ ತೆರೆ ಹಿಂದಿನ ತುಣುಕನ್ನು (ಬಿಹೈಂಡ್ ದ ಸೀನ್ಸ್) ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನಿರ್ಮಾಣ ಸಂಸ್ಥೆ ವಾದಿಸಿದೆ.

ಇಂತಹ ದೃಶ್ಯಗಳನ್ನು ಬಳಸುವ ಮೂಲಕ ನಯನತಾರಾ ಅವರು ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡುವಂತೆ ವಂಡರ್‌ಬಾರ್‌ ಫಿಲ್ಮ್ಸ್ ಪರ ವೈಯಕ್ತಿಕ ಸಾಮರ್ಥ್ಯದಲ್ಲಿ ಹಾಜರಾದ ಅಡ್ವೊಕೇಟ್ ಜನರಲ್ ಮತ್ತು ಹಿರಿಯ ಅಡ್ವೊಕೇಟ್ ಪಿ ಎಸ್ ರಾಮನ್ ಅವರು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರನ್ನು ಕೋರಿದರು.

ಧನುಷ್ ಒಡೆತನದ ವಂಡರ್‌ಬಾರ್‌ ತನ್ನ ಮತ್ತು ನಯನತಾರಾ ವಿರುದ್ಧ ಹೂಡಿರುವ ಮೊಕದ್ದಮೆ ತಿರಸ್ಕರಿಸುವಂತೆ ಕೋರಿ ನೆಟ್‌ಫ್ಲಿಕ್ಸ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತು.

ವಂಡರ್‌ಬಾರ್‌ ಹಾಗೂ ನಯನತಾರಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪ್ರತಿ ಪಾತ್ರ ಸೇರಿದಂತೆ ಚಿತ್ರದ ಎಲ್ಲದರ ಮೇಲೂ ತನಗೆ ಹಕ್ಕುಸ್ವಾಮ್ಯ ಇದೆ. ನಯನತಾರಾ ಅವರು ಚಿತ್ರದಲ್ಲಿ ಧರಿಸಿರುವ ಉಡುಗೆ-ತೊಡುಗೆಗಳ ಮೇಲೂ ನನಗೆ ಹಕ್ಕುಸ್ವಾಮ್ಯ ಇದೆ. ಹಾಗಾಗಿ ದಾವೆಯನ್ನು ನಿರ್ಬಂಧಿಸುವಂತಿಲ್ಲ. ಅದಕ್ಕೆ ವ್ಯಾಜ್ಯ ಕಾರಣವಿದ್ದು ವಿಚಾರಣೆ ನಡೆಸಬಹುದು ಎಂದು ರಾಮನ್ ವಾದ ಮುಂದಿಟ್ಟರು.

ನೆಟ್‌ಫ್ಲಿಕ್ಸ್‌ನ ಕಂಟೆಂಟ್ ಹೂಡಿಕೆಗಳನ್ನು ಭಾರತದಲ್ಲಿ ವರದಿ ಮಾಡುವ ಘಟಕವಾದ ಲಾಸ್ ಗ್ಯಾಟೋಸ್ ಪ್ರೊಡಕ್ಷನ್ ಸರ್ವಿಸಸ್ ಸಲ್ಲಿಸಿದ ಎರಡು ಅರ್ಜಿಗಳಿಗೆ ರಾಮನ್ ಪ್ರತಿಕ್ರಿಯಿಸಿದರು. ಅವುಗಳಲ್ಲಿ ಒಂದು ಅರ್ಜಿ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ನಯನತಾರಾ ವಿರುದ್ಧ ಮೊಕದ್ದಮೆ ಹೂಡಲು ವಂಡರ್‌ಬಾರ್‌ಗೆ ನ್ಯಾಯಾಲಯವು ಈ ಹಿಂದೆ ನೀಡಿದ್ದ ಅನುಮತಿಯನ್ನು ತಿರಸ್ಕರಿಸುವುದರ ಕುರಿತಾಗಿದ್ದರೆ ಮತ್ತೊಂದು ಇಡೀ ದಾವೆಯನ್ನೇ ತಿರಸ್ಕರಿಸುವುದಕ್ಕೆ ಸಂಬಂಧಿಸಿತ್ತು.

ಲಾಸ್ ಗಟೋಸ್ ಪರ ಹಾಜರಾದ ಹಿರಿಯ ವಕೀಲ ಆರ್ ಪಾರ್ಥಸಾರಥಿ ಅವರು ವಂಡರ್‌ಬಾರ್‌ ಸಲ್ಲಿಸಿರುವ ಮೊಕದ್ದಮೆಯನ್ನು ತಿರಸ್ಕರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ವಂಡರ್‌ಬಾರ್‌ನ ನೋಂದಾಯಿತ ಕಚೇರಿ ಚೆನ್ನೈನಲ್ಲಿ ಇರದೆ ಕಾಂಚೀಪುರಂ ಜಿಲ್ಲೆಯಲ್ಲಿ ಇರುವುದರಿಂದ ದಾವೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು.

ಆದ್ದರಿಂದ 1957 ರ ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 62 ಇಲ್ಲವೇ ನಿರ್ಮಾಣ ಕಂಪನಿ ಕಾಂಚೀಪುರಂ ಜಿಲ್ಲಾ ನ್ಯಾಯಾಲಯವನ್ನು ಅಥವಾ  ನೆಟ್‌ಫ್ಲಿಕ್ಸ್‌ ನೋಂದಾಯಿತ ಕಚೇರಿ ಇರುವ ಸ್ಥಳದ ನ್ಯಾಯವ್ಯಾಪ್ತಿ ಹೊಂದಿರುವ ಬಾಂಬೆ ಹೈಕೋರ್ಟ್‌ಅನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.  

ಆದರೆ ವಂಡರ್‌ಬಾರ್‌ ಫಿಲಮ್ಸ್‌ ಜೊತೆಗೆ ನಯನತಾರಾ ಒಪ್ಪಂದಕ್ಕೆ ಸಹಿ ಹಾಕಿದಾಗ ಆಕೆ ಮತ್ತು ವಂಡರ್‌ ಬಾರ್‌ ಚೆನ್ನೈನಲ್ಲಿ ತಮ್ಮ ನೋಂದಾಯಿತ ಕಚೇರಿ ಹೊಂದಿದ್ದರು ಎಂದು ರಾಮನ್ ನ್ಯಾಯಾಲಯಕ್ಕೆ ತಿಳಿಸಿದರು.

ಚಿತ್ರದ ಒಂದು ಭಾಗವನ್ನು ಚೆನ್ನೈನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ನೆಟ್‌ಫ್ಲಿಕ್ಸ್‌ ಸಾಕ್ಷ್ಯಚಿತ್ರವನ್ನು ಚೆನ್ನೈ ಸೇರಿದಂತೆ ಭಾರತದಾದ್ಯಂತ ವೀಕ್ಷಿಸಲು ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ವಂಡಬಾರ್‌ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಎಲ್ಲ ಹಕ್ಕಿದೆ ಎಂದು ಅವರು ಹೇಳಿದರು.

ತನ್ನ ಹಾಗೂ ತನ್ನ ಪತಿಯೊಂದಿಗೆ ಧನುಷ್‌ಗೆ ವೈಯಕ್ತಿಕ ದ್ವೇಷವಿದೆ ಎಂದು ನವೆಂಬರ್ 16 ರಂದು ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಸಾಕ್ಷ್ಯಚಿತ್ರ ಬಿಡುಗಡೆಯಾದ ಬಳಿಕ ಧನುಷ್‌ ₹ 10 ಕೋಟಿ ಪರಿಹಾರ ಕೇಳಿ ತನಗೆ ಲೀಗಲ್‌ ನೋಟಿಸ್‌ ನೀಡಿರುವುದು ಆಘಾತ ತಂದಿದೆ ಎಂದು ಆಕೆ ಹೇಳಿಕೊಂಡಿದ್ದರು.