ಸುದ್ದಿಗಳು

“ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರತಿಯೊಂದು ಪ್ರಕರಣದ ವಿಚಾರಣೆ ನಡೆಸಿದ್ದೇನೆ” ಸುಪ್ರೀಂಕೋರ್ಟ್‌ಗೆ ನ್ಯಾ.ಮಿಶ್ರಾ ವಿದಾಯ

Bar & Bench

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೊಬ್ಡೆ ನಂತರದ ಸ್ಥಾನದಲ್ಲಿದ್ದ ಹಿರಿಯ ನ್ಯಾಯಮೂರ್ತಿ ಹಾಗೂ ಹಲವು ರಾಜಕೀಯ ಮಹತ್ವದ ತೀರ್ಪು ಪ್ರಕಟಿಸಿದ ಅರುಣ್ ಮಿಶ್ರಾ ಅವರು ಇಂದು ನಿವೃತ್ತಿ ಹೊಂದಿದ್ದು, ಅವರನ್ನು ಬುಧವಾರ ಸಿಜೆಐ ಮತ್ತು ವಕೀಲರ ವೃಂದದ ಹಿರಿಯ ಸದಸ್ಯರು ಬೀಳ್ಕೊಟ್ಟರು.

ಸಂಪ್ರದಾಯದ ಪ್ರಕಾರ ಕೊನೆಯ ಕರ್ತವ್ಯದ ದಿನವಾದ ಇಂದು ನ್ಯಾಯಮೂರ್ತಿ ಮಿಶ್ರಾ ಅವರು ಸಿಜೆಐ ಬೊಬ್ಡೆ ಅವರೊಂದಿಗೆ ಪೀಠ ಹಂಚಿಕೊಂಡರು.

ಚುಟುಕು ವಿದಾಯ ಭಾಷಣ ಮಾಡಿದ ನ್ಯಾ. ಮಿಶ್ರಾ ಅವರು ತಾನು ಏನು ಮಾಡಿದ್ದೇನೋ ಅದು “ಈ ನ್ಯಾಯಾಲಯದ ಸರ್ವೋಚ್ಚ ಅಧಿಕಾರದಿಂದ ದೊರೆತಿದ್ದಾಗಿದೆ” ಎಂದು ವಿನಮ್ರವಾಗಿ ನುಡಿದರು.

“ನನ್ನ ಪಾಂಡಿತ್ಯಪೂರ್ಣ ಸಹೋದರರಿಂದ ಅಧಿಕಾರದ ಆಯುಧವನ್ನು ಎರವಲು ಪಡೆಯುವ ಪ್ರಯತ್ನವನ್ನು ನಾನು ಯಾವಾಗಲೂ ಮಾಡಿದೆ. ನಾನೇನು ಮಾಡಿದ್ದೇನೋ ಅದರ ಹಿಂದಿನ ಶಕ್ತಿ ನೀವು” ಎಂದು ಅವರು ನ್ಯಾಯವಾದಿ ವರ್ಗವನ್ನು ನೆನೆದರು.

ವಕೀಲ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ ನ್ಯಾ. ಮಿಶ್ರಾ ಅವರು ಹೀಗೆ ಹೇಳಿದರು,

“ವಕೀಲ ವೃಂದದಿಂದ ನಾನು ಅಪಾರವಾಗಿ ಕಲಿತೆ. ಕಾನೂನಿನ ಹಲವು ವಿಭಾಗಗಳನ್ನು ವಕೀಲರ ವೃಂದದ ಸದಸ್ಯರಿಂದ ತಿಳಿದುಕೊಂಡೆ. ಸತ್ಯವನ್ನು ನೀವು ಕರಗತ ಮಾಡಿಕೊಳ್ಳಬಹುದು ಆದರೆ ಎಷ್ಟೆಲ್ಲಾ ಸ್ಥಳೀಯ ಕಾನೂನುಗಳು... ಮತ್ತು ಅವುಗಳ ಬಗ್ಗೆ ವಕೀಲರ ವ್ಯಾಖ್ಯಾನಗಳಿವೆ.”
ನ್ಯಾಯಮೂರ್ತಿ ಅರುಣ್ ಮಿಶ್ರಾ

ನ್ಯಾಯಮೂರ್ತಿಯಾಗಿ ವೃತ್ತಿ ಬದುಕು ಆರಂಭಿಸಿದಾಗಿನಿಂದಲೂ ತಾನು “ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರತಿ ಪ್ರಕರಣದ ವಿಚಾರಣೆ ನಡೆಸಿರುವುದಾಗಿ” ನ್ಯಾ. ಮಿಶ್ರಾ ಹೇಳಿದರು.

“ಕೆಲವು ಸಂದರ್ಭದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅತ್ಯಂತ ಕಠಿಣವಾಗಿ ನಡೆದುಕೊಂಡಿರಬಹುದು. ಅದಕ್ಕಾಗಿ ಯಾರೂ ನೊಂದುಕೊಳ್ಳಬಾರದು. ಪ್ರತಿಯೊಂದು ತೀರ್ಪನ್ನೂ ವಿಶ್ಲೇಷಿಸಿ, ಆದರೆ ಅದಕ್ಕೆ ಈ ತರಹ ಅಥವಾ ಆ ತರಹ ಎಂದು ಬಣ್ಣ ಹಚ್ಚಬೇಡಿ. ಯಾರನ್ನಾದರೂ ನಾನು ನೋಯಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ.”
ನ್ಯಾಯಮೂರ್ತಿ ಅರುಣ್ ಮಿಶ್ರಾ

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆ ಕೈಗೊಂಡು, ತೀರ್ಪು ಪ್ರಕಟಿಸಿದ ಪ್ರಕರಣದ ಬಗ್ಗೆ ನ್ಯಾ. ಮಿಶ್ರಾ,

“...ಕೊನೆಯ ನ್ಯಾಯಾಂಗ ನಿಂದನಾ ಪ್ರಕರಣದಲ್ಲೂ ಅಟಾರ್ನಿ ಜನರಲ್ ಯಾವುದೇ ಶಿಕ್ಷೆ ನೀಡಬಾರದು ಎಂದರು (ಪ್ರಶಾಂತ್ ಭೂಷಣ್ ಗೆ) ಆದರೆ….” ಎಂದು ಮೌನಕ್ಕೆ ಶರಣಾದರು.

ಇದೇ ಮೊದಲ ಬಾರಿಗೆ ನ್ಯಾ. ಮಿಶ್ರಾ ಮತ್ತು ತಾನು ನ್ಯಾಯಪೀಠ ಹಂಚಿಕೊಳ್ಳುತ್ತಿದ್ದೇವೆ. ಇದೇ ಕೊನೆಯ ಬಾರಿಯೂ ಹೌದು ಎಂದು ಸಿಜೆಐ ಬೊಬ್ಡೆ ಹೇಳಿದರು.

“ನ್ಯಾ. ಅರುಣ್ ಮಿಶ್ರಾ ಅವರನ್ನು ಸಹೋದ್ಯೋಗಿಯಾಗಿ ಪಡೆದಿದ್ದು ನಮ್ಮ ಸುಯೋಗ. ವಿಶಿಷ್ಟವೆಂದರೆ ಇದೇ ಮೊದಲ ಬಾರಿಗೆ ನ್ಯಾಯಪೀಠದಲ್ಲಿ ಅವರ ಜೊತೆ ಕುಳಿತಿದ್ದೇನೆ. ಇದು ಕೊನೆಯ ಬಾರಿಯೂ ಹೌದು. ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನೀವು ಧೈರ್ಯ ಮತ್ತು ದೃಢ ಚಿತ್ತದ ಸಂಕೇತವಾಗಿದ್ದಿರಿ."
ಸಿಜೆಐ ಎಸ್ ಎ ಬೊಬ್ಡೆ

ನ್ಯಾ. ಮಿಶ್ರಾ ಅವರ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿದ್ದ ನ್ಯಾಯಾಲಯದ ಮೊದಲ ಕೊಠಡಿಯಲ್ಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತಿನ ಅಧ್ಯಕ್ಷ ದುಷ್ಯಂತ್ ಧವೆ ಮತ್ತು ಸುಪ್ರೀಂ ಕೋರ್ಟ್ ನೋಂದಾಯಿತ ವಕೀಲರ ಸಂಸ್ಥೆಯ ಅಧ್ಯಕ್ಷ ಶಿವಾಜಿ ಜಾಧವ್ ಸೇರಿದಂತೆ ಹಲವು ವಕೀಲರು ಪಾಲ್ಗೊಂಡಿದ್ದರು.

ಅಟಾರ್ಜಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ನ್ಯಾ. ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್‌ನ ಉಕ್ಕಿನ ನ್ಯಾಯಮೂರ್ತಿ ಎಂದು ಬಣ್ಣಿಸಿದರು. ನೆರೆದಿದ್ದ ಕಾನೂನು ಅಧಿಕಾರಿಗಳು ನ್ಯಾ. ಮಿಶ್ರಾ ಅವರ ದ್ವಿತೀಯ ಇನಿಂಗ್ಸ್ ಗೆ ಶುಭಕೋರಿದರು.

“ವಿಡಿಯೋ ಕಾನ್ಫೆರೆನ್ಸ್ ಮೂಲಕ ಬೀಳ್ಕೊಡುಗೆ ಸಮಾರಂಭ ನಡೆಸುತ್ತಿರುವುದು ಬೇಸರ ಮೂಡಿಸಿದೆ. ಕಳೆದ 30 ವರ್ಷಗಳಿಂದಲೂ ನ್ಯಾ. ಮಿಶ್ರಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ಸುಪ್ರೀಂ ಕೋರ್ಟ್‌ನ ಉಕ್ಕಿನ ನ್ಯಾಯಮೂರ್ತಿ. ಸರ್ವೋಚ್ಚ ನ್ಯಾಯಾಲಯದಲ್ಲಿ ಅವರ ಅನುಪಸ್ಥಿತಿಯನ್ನು ನಾವು ಕಾಣಲಿದ್ದೇವೆ. ಅವರು ಸದಾಕಾಲ ಆರೋಗ್ಯದಿಂದಿರಲಿ ಎಂದು ಆಶಿಸುತ್ತೇವೆ."
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್