CJI NV Ramana
CJI NV Ramana 
ಸುದ್ದಿಗಳು

ಸಕ್ರಿಯ ರಾಜಕಾರಣ ಸೇರಲು ಉತ್ಸುಕನಾಗಿದ್ದೆ, ಆದರೆ ವಿಧಿ ಬೇರೇನೋ ಆಲೋಚಿಸಿತ್ತು: ಸಿಜೆಐ ರಮಣ

Bar & Bench

ವಕೀಲನಾಗಿದ್ದ ದಿನಗಳಲ್ಲಿ ತಮಗೆ ಸಕ್ರಿಯ ರಾಜಕಾರಣ ಸೇರಲು ಇಷ್ಟವಿತ್ತು. ಆದರೆ ವಿಧಿ ತಮ್ಮನ್ನು ನ್ಯಾಯಾಧೀಶನಾಗುವ ಹಾದಿಗೆ ಕರೆತಂದಿತು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದರು.

ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ 'ಜಸ್ಟೀಸ್ ಎಸ್ ಬಿ ಸಿನ್ಹಾ ಸ್ಮಾರಕ ಉಪನ್ಯಾಸ' ಕಾರ್ಯಕ್ರಮವನ್ನು ಉದ್ಘಾಟಿಸಿ 'ನ್ಯಾಯಾಧೀಶರ ಜೀವನʼ ವಿಷಯವಾಗಿ ಮಾತನಾಡಿದ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

"ನಾನು ಹಳ್ಳಿಯ ಕೃಷಿ ಕುಟುಂಬದಲ್ಲಿ ಜನಿಸಿದೆ. 7ನೇ ತರಗತಿಯಲ್ಲಿ ನಮಗೆ ಇಂಗ್ಲಿಷ್ ಕಲಿಸಲಾಯಿತು. ಬಿಎಸ್ಸಿ ನಂತರ, ನನ್ನ ತಂದೆ ಕಾನೂನು ಅಧ್ಯಯನ ಮಾಡುವಂತೆ ನನ್ನನ್ನು ಪ್ರೋತ್ಸಾಹಿಸಿದರು. ನಂತರ ನಾನು ವಿಜಯವಾಡದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಾಕ್ಟಿಸ್‌ ಮಾಡಿದೆ. ಮತ್ತೊಮ್ಮೆ ನನ್ನ ತಂದೆಯ ಪ್ರೋತ್ಸಾಹದಿಂದ ಆಂಧ್ರಪ್ರದೇಶ ಹೈಕೋರ್ಟಿನಲ್ಲಿ ಪ್ರಾಕ್ಟಿಸ್‌ ಮಾಡಲು ಹೈದರಾಬಾದ್‌ಗೆ ತೆರಳಿದೆ. ಆ ಹೊತ್ತಿಗೆ, ನ್ಯಾಯಾಧೀಶರಾಗುವಂತೆ ಪ್ರಸ್ತಾಪ ಬಂದಿತ್ತು, ತಾಲೂಕು ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೆ ನಾನು ಪ್ರಾಕ್ಟಿಸ್‌ ಮಾಡುತ್ತಿದ್ದೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡೆ. ನಾನು ಸಕ್ರಿಯ ರಾಜಕೀಯಕ್ಕೆ ತೆರಳಲು ಉತ್ಸುಕನಾಗಿದ್ದೆ. ಆದರೆ ವಿಧಿ ಬೇರೆಯದೇ ರೀತಿಯಲ್ಲಿ ಯೋಜಿಸಿತ್ತು” ಎಂದು ಅವರು ತಮ್ಮ ಕಾನೂನಿನ ಹಾದಿಯ ಪಯಣವನ್ನು ವಿವರಿಸಿದರು.

ನ್ಯಾಯಾಧೀಶರು ಎದುರಿಸುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದ ಅವರು ಹಲವು ವರ್ಷಗಳಿಂದ ತಾವು ರೂಪಿಸಿಕೊಂಡ ಸಾಮಾಜಿಕ ಸಂಬಂಧಗಳನ್ನು ನ್ಯಾಯಾಧೀಶರು ಕಡಿದುಕೊಳ್ಳಬೇಕಾಗುತ್ತದೆ ಎಂದರು. ಅಲ್ಲದೆ ನ್ಯಾಯಾಧೀಶರು ಆರಾಮದಾಯಕ ಜೀವನ ನಡೆಸುತ್ತಾರೆ ಎಂಬ ಮಿಥ್ಯೆ ಹರಡಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ಈ ವೃತ್ತಿಯೊಂದಿಗೆ ಯಾವುದೇ ಸಂಬಂಧ ಇಲ್ಲದವರಿಗೆ ಈ ವೃತ್ತಿಯ ತಯಾರಿಗೆ ಬೇಕಾದ ಗಂಟೆಗಳನ್ನು ಊಹಿಸಲು ಸಾಧ್ಯವಿಲ್ಲ. ನಾವು ಕಾಗದ ಪತ್ರ ಓದಲು ಮತ್ತು ನಾಳಿನ ಪ್ರಕರಣಗಳ ಬಗ್ಗೆ ಟಿಪ್ಪಣಿ ಬರೆದುಕೊಳ್ಳಲು ಅನೇಕ ಗಂಟೆಗಳನ್ನು ವ್ಯಯಿಸುತ್ತೇವೆ. ವಿಚಾರಣೆ ಮುಗಿದ ಕೂಡಲೇ ಮರುದಿನದ ತಯಾರಿ ಆರಂಭವಾಗಿಬಿಡುತ್ತದೆ ಮತ್ತು ಬಹಳ ದಿನ ಅಂತಹ ತಯಾರಿ ಮಧ್ಯರಾತ್ರಿಯನ್ನು ಮೀರುತ್ತದೆ. ನಾವು ವಾರಾಂತ್ಯದಲ್ಲೂ ಕೆಲಸ ಮಾಡಬೇಕಾಗುತ್ತದೆ. ನ್ಯಾಯಾಲಯದ ರಜಾಕಾಲೀನ ಅವಧಿಯನ್ನು ಸಂಶೋಧನೆ ಮತ್ತು ತೀರ್ಪುಗಳನ್ನು ಬರೆಯುವುದಕ್ಕೆ ಬಳಸಲಾಗುತ್ತದೆ. ಹೀಗೆ ಮಾಡುವಾಗ ನಾವು ನಮ್ಮ ಜೀವನದ ಅನೇಕ ಸಂತಸದ ಕ್ಷಣಗಳನ್ನು ಕಳೆದುಕೊಂಡಿರುತ್ತೇವೆ. ಕೆಲವೊಮ್ಮೆ ಪ್ರಮುಖ ಕೌಟುಂಬಿಕ ಕಾರ್ಯಕ್ರಮಗಳನ್ನೂ ಕಳೆದುಕೊಂಡಿರುತೇವೆ. ಒಮ್ಮೊಮ್ಮೆ, ನನ್ನ ಮೊಮ್ಮಕ್ಕಳನ್ನು ದಿನಗಟ್ಟಲೆ ನೋಡಲು ಸಾಧ್ಯವಾಗದೇ ಹೋದಾಗ ನನ್ನನ್ನು ಅವರು ಗುರುತಿಸಬಲ್ಲರೇ ಎಂದು ಅಚ್ಚರಿಯಾಗುತ್ತದೆ” ಎಂದು ಅವರು ಹೇಳಿದರು.