-
ಭಾರತೀಯ ವಾಯುಪಡೆ (ಐಎಎಫ್) ತನ್ನ ಮಾಜಿ ಉದ್ಯೋಗಿಯ ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್) ಸಮಸ್ಯೆಯನ್ನು ಕೇವಲ ಜೀವನಶೈಲಿ ಸಂಬಂಧಿತ ಕಾಯಿಲೆ ಎಂದು ಹೇಳಿ ಅಂಗವೈಕಲ್ಯ ಪಿಂಚಣಿ ನಿರಾಕರಿಸುವಂತಿಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಭಾರತ ಒಕ್ಕೂಟ ಮತ್ತು627281 ಮಾಜಿ ಎಂಡಬ್ಲ್ಯೂಒ (ಎಚ್‌ಎಫ್‌ಒ) ತೇಜ್‌ಪಾಲ್ ಸಿಂಗ್ ನಡುವಣ ಪ್ರಕರಣ].
ಜೀವನಶೈಲಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದುನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಮನ್‌ಮೀತ್ ಪ್ರೀತಂ ಸಿಂಗ್ ಅರೋರಾ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿದೆ.
ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್)ದಿಂದ ಬಳಲುತ್ತಿರುವ ವ್ಯಕ್ತಿಯನ್ನು ವೈದ್ಯಕೀಯ ಮಂಡಳಿ ಮೂಲಕ ಸರಿಯಾಗಿ ಪರಾಮರ್ಶಿಸದೆ ಕೇವಲ ಆ ವ್ಯಕ್ತಿಯ ಜೀವನ ಶೈಲಿ ಕುರಿತು ಊಹೆ ಮಾಡುತ್ತಾ ಅವರನ್ನು ಅಂಗವೈಕಲ್ಯ ಪಿಂಚಣಿ ಸೌಲಭ್ಯದಿಂಧ ಹೊರಗಿಡುವಂತಿಲ್ಲ. ವೈದ್ಯಕೀಯ ಮಂಡಳಿ ತನ್ನ ನಿರ್ಣಯಗಳಿಗೆ ಸ್ಪಷ್ಟ ಕಾರಣಗಳನ್ನು ದಾಖಲಿಸಬೇಕು ಎಂದು ಅದು ವಿವರಿಸಿದೆ.
“ಜೀವನಶೈಲಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬುದು ಗಮನಾರ್ಹ. ಆದ್ದರಿಂದ, ವೈದ್ಯಕೀಯ ಮಂಡಳಿ ಸಂಬಂಧಿತ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಸೂಕ್ತವಾಗಿ ಪರಿಶೀಲಿಸಿ ದಾಖಲಿಸದೆ, ಕೇವಲ ಇದೊಂದು ಜೀವನಶೈಲಿ ಸಂಬಂಧಿತ ಕಾಯಿಲೆ ಎಂಬ ಅದರ ಹೇಳಿಕೆ ಆಧರಿಸಿ ಅಂಗವೈಕಲ್ಯ ಪಿಂಚಣಿಯನ್ನು ನಿರಾಕರಿಸುವುದು ಸಮಂಜಸವಲ್ಲ” ಎಂದು ಜನವರಿ 19ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಿವೃತ್ತ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ ನೀಡುವಂತೆ ಆದೇಶಿಸಿದ್ದ ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ತೀರ್ಪನ್ನು ಎತ್ತಿಹಿಡಿದು ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1981ರಿಂದ 2019ರವರೆಗೆ ಸುಮಾರು 37 ವರ್ಷಕ್ಕೂ ಹೆಚ್ಚು ಕಾಲ ಐಎಎಫ್‌ನಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸಿಬ್ಬಂದಿ ತೇಜ್‌ಪಾಲ್ ಸಿಂಗ್ ಅವರಿಗೆ 2018ರಲ್ಲಿ ವೈದ್ಯಕೀಯ ಮಂಡಳಿ ಅಧಿಕ ರಕ್ತದೊತ್ತಡವಿದೆ ಎಂದು ಗುರುತಿಸಿತ್ತು. ಆದರೆ, ಆ ಕಾಯಿಲೆ ಸೈನ್ಯ ಸೇವೆಗೆ ಸಂಬಂಧಪಟ್ಟದ್ದಲ್ಲ ಎಂದು ಯಾವುದೇ ಸ್ಪಷ್ಟ ಕಾರಣವಿಲ್ಲದೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
2023ರಲ್ಲಿ ‘ಪ್ರಾಥಮಿಕ ಅಧಿಕ ರಕ್ತದೊತ್ತಡ ಅಂಗವೈಕಲ್ಯಕ್ಕೆ ಸಂಬಂಧಿಸಿದೆ ಎಂದು ಎಎಫ್‌ಟಿ ಹೇಳಿತು. ನಿವೃತ್ತಿಯ ದಿನದಿಂದಲೇ ಅನ್ವಯವಾಗುವಂತೆ ಬಾಕಿ ಹಣ ಸಹಿತ ಅಂಗವೈಕಲ್ಯ ಪಿಂಚಣಿ ನೀಡಬೇಕೆಂದು ಆದೇಶಿಸಿತ್ತು. ತೀಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಕೇಂದ್ರ ಸರ್ಕಾರ ಅಧಿಕ ರಕ್ತದೊತ್ತಡ ಜೀವನಶೈಲಿ ಸಂಬಂಧಿತ ರೋಗವಾಗಿದ್ದು ಸಿಂಗ್ ಅವರು ಯುದ್ಧರಹಿತ ಶಾಂತಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಜೊತೆಗೆ, 2008ರ ಅರ್ಹತಾ ನಿಯಮಗಳನ್ನು ಎಎಫ್‌ಟಿ ಪರಿಗಣಿಸಿಲ್ಲ ಎಂದಿತು.
ಆದರೆ ಐಎಎಫ್‌ಗೆ ಸೇರ್ಪಡೆಗೊಂಡ ವೇಳೆ ಸಿಂಗ್ ಅವರಿಗೆ ಯಾವುದೇ ಅಂಗವೈಕಲ್ಯ ಇರಲಿಲ್ಲ ಹಾಗೂ ವೈದ್ಯಕೀಯ ಮಂಡಳಿ ತನ್ನ ನಿರ್ಣಯಕ್ಕೆ ಸೂಕ್ತ ಕಾರಣಗಳನ್ನು ದಾಖಲಿಸಿಲ್ಲ ಎಂದ ಹೈಕೋರ್ಟ್ ಕೇಂದ್ರ ಸರ್ಕಾರದ ವಾದ ತಿರಸ್ಕರಿಸಿದೆ. ಜೀವನಶೈಲಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ; ಆದ್ದರಿಂದ ಕೇವಲ ಊಹೆಗಳ ಆಧಾರದಲ್ಲಿ ಪಿಂಚಣಿ ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತೆಯೇ ಎಎಫ್‌ಟಿ ತೀರ್ಪನ್ನು ಎತ್ತಿಹಿಡಿದಿದೆ.
[ತೀರ್ಪಿನ ಪ್ರತಿ]