Rouse Avenue Courts 
ಸುದ್ದಿಗಳು

ಯುಪಿಎಸ್‌ಸಿ ಆಕಾಂಕ್ಷಿಗಳ ಸಾವು: ಕೋಚಿಂಗ್ ಕೇಂದ್ರದ ಸಿಇಒಗೆ ಜಾಮೀನು; ₹2.5 ಕೋಟಿ ಠೇವಣಿ ಇರಿಸಲು ಷರತ್ತು

ತನಿಖೆ ಬಹುತೇಕ ಪೂರ್ಣಗೊಂಡಿರುವಾಗ ಜಾಮೀನು ನಿರಾಕರಿಸಿದರೆ ಅದು ವಿಚಾರಣೆಗೆ ಮುನ್ನವೇ ಶಿಕ್ಷೆ ವಿಧಿಸಿದಂತೆ ಎಂದು ನ್ಯಾಯಾಲಯ ಈ ವೇಳೆ ಅಭಿಪ್ರಾಯಪಟ್ಟಿತು.

Bar & Bench

ದೆಹಲಿಯ ರಾವ್ಸ್‌ ಕೋಚಿಂಗ್ ಕೇಂದ್ರದಲ್ಲಿ ಮಳೆ ನೀರು ನುಗ್ಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್‌ ಕೇಂದ್ರದ ಸಿಇಒ ಅಭಿಷೇಕ್ ಗುಪ್ತಾ ಮತ್ತು ಸಂಯೋಜಕ ದೇಶಪಾಲ್ ಸಿಂಗ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಡಿಸೆಂಬರ್ 7 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ಆದರೆ ಜಾಮೀನು ಷರತ್ತಿನ ರೂಪದಲ್ಲಿ ನವೆಂಬರ್ 30ರೊಳಗೆ ₹2.5 ಕೋಟಿ ಮೊತ್ತವನ್ನು ರೆಡ್‌ ಕ್ರಾಸ್‌ ಸೊಸೈಟಿಗೆ ಠೇವಣಿ ಇಡಬೇಕು ಎಂದು ಅದು ಕೋಚಿಂಗ್‌ ಕೇಂದ್ರದ ಸಿಇಒಗೆ ಸೂಚಿಸಿದೆ.

ತನಿಖೆ ಬಹುತೇಕ ಪೂರ್ಣಗೊಂಡಿರುವಾಗ ಜಾಮೀನು ನಿರಾಕರಿಸಿದರೆ ಅದು ವಿಚಾರಣೆಗೆ ಮುನ್ನವೇ ಶಿಕ್ಷೆ ವಿಧಿಸಿದಂತೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಶೇಷ ನ್ಯಾಯಾಧೀಶರೂ ಆದ ಅಂಜು ಬಜಾಜ್ ಚಂದನಾ ಅವರು ಈ ವೇಳೆ ಅಭಿಪ್ರಾಯಪಟ್ಟರು.

ಜುಲೈ 25ರಂದು ಸುರಿದ ಭಾರೀ ಮಳೆಗೆ ರಾಜೇಂದ್ರ ನಗರದ ʼರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ʼ ಕೋಚಿಂಗ್‌ ಕೇಂದ್ರದ ನೆಲಮಾಳಿಯ ಗ್ರಂಥಾಲಯಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಘಟನೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳಾದ ತೆಲಂಗಾಣದ ತಾನಿಯಾ ಸೋನಿ (25 ವರ್ಷ), ಉತ್ತರಪ್ರದೇಶದ ಶ್ರೇಯಾ ಯಾದವ್ (25) ಮತ್ತು ಕೇರಳದ ನವೀನ್ ಡೆಲ್ವಿನ್ (28) ಮೃತಪಟ್ಟಿದ್ದರು.

ಘಟನೆಗೆ  ಭಾರೀ ಮಳೆ, ಒಳಚರಂಡಿ ವ್ಯವಸ್ಥೆ ವೈಫಲ್ಯ ಮತ್ತು ನಾಗರಿಕ ಅಧಿಕಾರಿಗಳ ನಿರಾಸಕ್ತಿ ಪ್ರಮುಖ ಕಾರಣ ಎಂದು ಆರೋಪಿಗಳು ವಾದಿಸಿದ್ದರು. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ನಗರದ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಅವರು ಪ್ರಸ್ತಾಪಿಸಿದ್ದರು. ಕೋಚಿಂಗ್ ಕೇಂದ್ರವನ್ನು ಈಗ ಮುಚ್ಚಲಾಗಿದ್ದು ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುತ್ತಿದೆ ಎಂದಿದ್ದರು.

ನಿಯಮಾವಳಿ ಉಲ್ಲಂಘಿಸಿ ಕೋಚಿಂಗ್‌ ಕೇಂದ್ರದಲ್ಲಿ ನೆಲಮಾಳಿಗೆಯನ್ನು ಬಳಸಲಾಗಿತ್ತು ಎಂದ ನ್ಯಾಯಾಲಯ ಅಧಿಕಾರಿಗಳ ವೈಫಲ್ಯವನ್ನು ನಿರ್ಲಕ್ಷಿಸಲಾಗದು ಎಂದಿತು. ಅಂತೆಯೇ ಆರೋಪಿಗಳಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿತು.