Supreme Court 
ಸುದ್ದಿಗಳು

ಐಪಿಎಸ್, ಐಎಫ್ಎಸ್‌ಗಿಂತಲೂ ಶ್ರೇಷ್ಠರೆಂದು ಬಿಂಬಿಸಿಕೊಳ್ಳಲು ಐಎಎಸ್ ಅಧಿಕಾರಿಗಳು ಸದಾ ಬಯಸುತ್ತಾರೆ: ಸುಪ್ರೀಂ

ಈ ಸಂಘರ್ಷ ಎಲ್ಲಾ ರಾಜ್ಯಗಳಲ್ಲೂ ಇದ್ದು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಲ್ಲಿ ಈ ಬಗ್ಗೆ ಈರ್ಷ್ಯೆ ಇದೆ ಎಂದಿದೆ ಪೀಠ.

Bar & Bench

ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಗಳ ನಡುವೆ ನಡೆಯುತ್ತಿರುವ ಅಹಮಿಕೆಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಸ್ತಾಪಿಸಿದೆ.

ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗಿಂತಲೂ ತಾವು ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಐಎಎಸ್ ಅಧಿಕಾರಿಗಳು ಸದಾ ಬಯಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿತು.

"ಐಎಎಸ್ ಅಧಿಕಾರಿ ಯಾವಾಗಲೂ ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿಗಳ ಮೇಲೆ ತಮ್ಮ ಪ್ರಾಬಲ್ಯ ತೋರಿಸಲು ಬಯಸುತ್ತಾರೆ. ಸರ್ಕಾರಿ ವಕೀಲ ಮತ್ತು ನ್ಯಾಯಾಧೀಶನಾಗಿ ನನಗೆ ಇದರ ಅನುಭವ ಇದೆ. ಈ ಸಂಘರ್ಷ ಎಲ್ಲಾ ರಾಜ್ಯಗಳಲ್ಲಿಯೂ ಇದ್ದು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಲ್ಲಿ 'ತಾವು ಒಂದೇ ಕೇಡರ್‌ನವರಾಗಿದ್ದರೂ ಐಎಎಸ್ ಅಧಿಕಾರಿಗಳು ಹೇಳುವ ಮಾತನ್ನು ಏಕೆ ಕೇಳಬೇಕು' ಎಂಬ ಬಗ್ಗೆ ಈರ್ಷೆ ಇದೆ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಪರಿಸರಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಪೀಠ ಅರಣ್ಯ ಅಧಿಕಾರಿಗಳು ತಮ್ಮ ಆದೇಶ ಪಾಲಿಸಬೇಕೆಂದು ಐಎಎಸ್ ಅಧಿಕಾರಿಗಳು ತಾಕೀತು ಮಾಡುವ ವಿಚಾರವಾಗಿ ಈ ಮಾತುಗಳನ್ನು ಹೇಳಿತು.

ಅಧಿಕಾರಿಗಳ ನಡುವಿನ ಇಂತಹ ಆಂತರಿಕ ಸಂಘರ್ಷಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದರು.