IPS D Roopa and IAS Rohini Sindhuri and Karnataka HC 
ಸುದ್ದಿಗಳು

ರೂಪಾ ವರ್ಸಸ್‌ ರೋಹಿಣಿ: ಮ್ಯಾಜಿಸ್ಟ್ರೇಟ್‌ ನಡೆಗೆ ಹೈಕೋರ್ಟ್‌ನಲ್ಲಿ ಅತೃಪ್ತಿ ದಾಖಲಿಸಿದ ಸಿಂಧೂರಿ

ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್‌ ಪ್ರತಿದಿನ ಪ್ರಕ್ರಿಯೆ ನಡೆಸಿ, ಸಂಜ್ಞೇ ಪರಿಗಣಿಸಿದ್ದಾರೆ. ಇಷ್ಟು ತುರ್ತು ಏನಿದೆ? ಮ್ಯಾಜಿಸ್ಟ್ರೇಟ್‌ ಅವರ ಈ ನಡೆಯ ಕುರಿತು ಗಮನಹರಿಸಬೇಕು ಎಂದು ಕೋರಿದ ವಕೀಲ ಬೆಳ್ಳಿಯಪ್ಪ.

Bar & Bench

“ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ತಿಮಿತ ಕಳೆದುಕೊಂಡಿರುವವರ ರೀತಿಯಲ್ಲಿ ಐಪಿಎಸ್‌ ಅಧಿಕಾರಿ ರೂಪಾ ವರ್ತಿಸುತ್ತಿದ್ದಾರೆ” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಶರವೇಗದಲ್ಲಿ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್‌ ಕುರಿತು ನ್ಯಾಯಾಂಗ ಪರಿಗಣಿಬೇಕು” ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದರು.

ರೂಪಾ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ಜನವರಿ 13ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ರೋಹಿಣಿ ಸಿಂಧೂರಿ ಪರ ವಕೀಲ ಬಿ ಎ ಬೆಳ್ಳಿಯಪ್ಪ ಅವರು “ರೋಹಿಣಿ ಸಿಂಧೂರಿ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿದ್ದ ರೂಪಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸಹ ವಜಾ ಮಾಡಿದೆ. ಹೀಗಾಗಿ, 2023ರಲ್ಲಿ ರೋಹಿಣಿ ವಿರುದ್ಧ ರೂಪಾ ಮಾನಹಾನಿ ದಾವೆ ಹೂಡಿದ್ದಾರೆ. ರೋಹಿಣಿ ಮಾಧ್ಯಮ ಹೇಳಿಕೆಯನ್ನು ಆಧರಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್‌ ಪ್ರತಿದಿನ ಪ್ರಕ್ರಿಯೆ ನಡೆಸಿ, ಸಂಜ್ಞೇ ಪರಿಗಣಿಸಿದ್ದಾರೆ. ಇಷ್ಟು ತುರ್ತು ಏನಿದೆ. ಮ್ಯಾಜಿಸ್ಟ್ರೇಟ್‌ ಅವರ ಈ ನಡೆಯ ಕುರಿತು ಗಮನಹರಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ರೂಪಾ ಪರ ವಕೀಲರು “ವಿಚಾರಣಾಧೀನ ನ್ಯಾಯಾಲಯದ ಮುಂದಿರುವ ದಾಖಲೆಗಳನ್ನು ಅರ್ಜಿದಾರರು ಹೈಕೋರ್ಟ್‌ಗೆ ಒದಗಿಸಿಲ್ಲ. ಸಾರ್ವಜನಿಕ ಅಧಿಕಾರಿಯಾಗಿ ನ್ಯಾಯಾಂಗ ಅಧಿಕಾರಿಯ ಮೇಲೆ ಆರೋಪ ಮಾಡುವುದು ಸಲ್ಲದು. ಸ್ಥಾಪಿತ ಕಾನೂನನ್ನು ನ್ಯಾಯಾಂಗ ಅಧಿಕಾರಿ ಪಾಲಿಸಿದ್ದಾರೆ. ನಮ್ಮ ಕೋರಿಕೆಯ ಹಿನ್ನೆಲೆಯಲ್ಲಿ ತುರ್ತಾಗಿ ದಾವೆ ವಿಚಾರಣೆ ನಡೆಸುತ್ತಿದ್ದಾರೆ” ಎಂದು ಸಮರ್ಥಿಸಿದರು.

ಅಲ್ಲದೇ, “ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 22ಕ್ಕೆ ನಿಗದಿಯಾಗಿದೆ. ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಶುಕ್ರವಾರಕ್ಕೆ (ಫೆಬ್ರವರಿ 21) ಮುಂದೂಡಬೇಕು” ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿತು.