IBC and Karnataka HC 
ಸುದ್ದಿಗಳು

ರಾಜ್ಯ ಕಾಯಿದೆ ಮೇಲೆ ಐಬಿಸಿ ಅತಿಕ್ರಮಣ: ಡಿಐಐ ವಿರುದ್ದ ರಾಜ್ಯ ಸರ್ಕಾರದ ಸಮಾನಾಂತರ ವಿಚಾರಣೆ ರದ್ದುಪಡಿಸಿದ ಹೈಕೋರ್ಟ್

ಕಾಯಿದೆಯಂತೆ ರಾಜ್ಯ ಸರ್ಕಾರ ಪ್ರಾರಂಭಿಸಿದ ಸಮಾನಾಂತರ ವಿಚಾರಣೆಯ ಕಾನೂನುಬದ್ಧತೆ ಪ್ರಶ್ನಿಸಿ ದಿವಾಳಿತನ ನಿರ್ಣಯ ವೃತ್ತಿಪರರು (ಐಆರ್‌ಪಿ) ಸಲ್ಲಿಸಿದ್ದ ಅರ್ಜಿಗೆ ಅನುಮತಿ ನೀಡುವಾಗ ನ್ಯಾ. ಎಚ್ ಪಿ ಸಂದೇಶ್ ಈ ಆದೇಶ ಜಾರಿಗೊಳಿಸಿದರು.

Bar & Bench

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯಿದೆ -2004ರ ಮೇಲೆ ಸಾಲ ವಸೂಲಾತಿ ಮತ್ತು ದಿವಾಳಿತನ ಸಂಹಿತೆ- 2016 (ಐಬಿಸಿ) ಅತಿಕ್ರಮಣ ನಡೆಸುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದು ಡ್ರೀಮ್ಜ್‌ ಇನ್ಫ್ರಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ವಿರುದ್ಧ ರಾಜ್ಯ ಸರ್ಕಾರ ಪ್ರಾರಂಭಿಸಿದ್ದ ಸಮಾನಾಂತರ ವಿಚಾರಣೆಯನ್ನು ರದ್ದುಪಡಿಸಿದೆ.

ಕಾಯಿದೆಯಂತೆ ರಾಜ್ಯ ಸರ್ಕಾರ ಪ್ರಾರಂಭಿಸಿದ ಸಮಾನಾಂತರ ವಿಚಾರಣೆಯ ಕಾನೂನುಬದ್ಧತೆ ಪ್ರಶ್ನಿಸಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನೇಮಿಸಿದ್ದ ದಿವಾಳಿತನ ನಿರ್ಣಯ ವೃತ್ತಿಪರರೊಬ್ಬರು (ಐಆರ್‌ಪಿ) ಸಲ್ಲಿಸಿದ್ದ ಅರ್ಜಿಗೆ ಅನುಮತಿ ನೀಡುವಾಗ ನ್ಯಾ. ಎಚ್‌ ಪಿ ಸಂದೇಶ್‌ ಈ ಆದೇಶ ಜಾರಿಗೊಳಿಸಿದರು.

ಐಬಿಸಿ ಇತರ ಕಾನೂನುಗಳನ್ನು ಅತಿಕ್ರಮಿಸುವಂತೆ ಪರಿಣಾಮ ಬೀರುತ್ತಿದ್ದು ಸಂಹಿತೆಯ ಸೆಕ್ಷನ್ 238 ರ ದೃಷ್ಟಿಯಿಂದಲೂ ಇದು ಮೇಲುಗೈ ಸಾಧಿಸುತ್ತದೆ ಎಂಬ ಅರ್ಜಿದಾರರ ಪರ ವಕೀಲರ ವಾದದಲ್ಲಿ ಹುರುಳಿದೆ ಎಂದು ನಾನು ಭಾವಿಸುತ್ತೇನೆ. 2004ರ ಕಾಯಿದೆಯ ಸೆಕ್ಷನ್ 7 (1)ರ ಅಡಿಯಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ಅರ್ಜಿದಾರರು ಆಧಾರಗಳನ್ನು ನೀಡಿದ್ದಾರೆ " ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಫ್ಲಾಟ್‌ ನೀಡುವುದಾಗಿ ಭರವಸೆಯಿತ್ತು ಸುಮಾರು 3,600 ಮನೆ ಖರೀದಿದಾರರಿಂದ ರೂ 385 ಕೋಟಿ ರೂಪಾಯಿಗಳನ್ನು ಕಂಪೆನಿ ಸಂಗ್ರಹಿಸಿತ್ತು. ಆದರೆ ಅದು ಫ್ಲಾಟ್‌ ಒದಗಿಸಲು ವಿಫಲವಾಗಿತ್ತು. ಪರಿಣಾಮ ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯಿದೆಯ ಸೆಕ್ಷನ್ 5 (1) ರ ಅಡಿಯಲ್ಲಿ ಕರ್ನಾಟಕ ಸರ್ಕಾರ ನೇಮಿಸಿದ ದಿವಾಳಿತನ ನಿರ್ಣಯ ವೃತ್ತಿಪರರು ಅರ್ಜಿದಾರರ ವಿರುದ್ಧ ಕ್ರಮ ಆರಂಭಿಸಿದ್ದು ಅದನ್ನು ಜನವರಿ 9, 2020ರಂದು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶ (ವಿಶೇಷ ನ್ಯಾಯಾಧೀಶ) ಅಂಗೀಕರಿಸಿದ್ದರು.

ಈ ಮಧ್ಯೆ ಅರ್ಜಿದಾರ-ಕಂಪನಿಯ ಕ್ರಮಗಳಿಂದ ಬೇಸರಗೊಂಡ ಮೂವರು ಗೃಹಬಳಕೆದಾರರು ಐಬಿಸಿ ಸೆಕ್ಷನ್ 7 ರ ಅಡಿಯಲ್ಲಿ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿದ್ದರು. 2019ರ ಆಗಸ್ಟ್‌ನಲ್ಲಿ ಅರ್ಜಿಯನ್ನು ಅಂಗೀಕರಿಸಲು ಮುಂದಾದ ಎನ್‌ಸಿಎಲ್‌ಟಿ ಸಂಹಿತೆಯಲ್ಲಿ ನೀಡಲಾಗಿರುವ ಅವಕಾಶಗಳಂತೆ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ ಪ್ರಾರಂಭಿಸಲು ನಿರ್ದೇಶಿಸಿತು.

ಅದೇ ಆದೇಶದ ಮೂಲಕ, ಅರ್ಜಿದಾರ-ಕಂಪನಿಯ ಚಟುವಟಿಕೆಗಳನ್ನು ಗಮನಿಸಲು ಅಶೋಕ್ ಕೃಪಲಾನಿ ಎಂಬುವವರನ್ನು ಮಧ್ಯಂತರ ನಿರ್ಣಯ ವೃತ್ತಿಪರರನ್ನಾಗಿ ನೇಮಿಸಲಾಯಿತು.

ಅರ್ಜಿದಾರ-ಕಂಪನಿಯ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ವಿವಿಧ ದೂರುಗಳು ಬಂದ ಕಾರಣದಿಂದಾಗಿ, ಪ್ರತಿವಾದಿ- ಅಧಿಕಾರಿ ಈ ಕಾಯಿದೆಯ ಮೊರೆ ಹೋಗಿ ಅರ್ಜಿದಾರ-ಕಂಪನಿಯ ಎಲ್ಲಾ ಆಸ್ತಿಗಳನ್ನು 2018 ರಿಂದ ಮುಟ್ಟುಗೋಲು ಹಾಕಿಕೊಂಡಿತು ಎಂದು ಅರ್ಜಿದಾರರು ವಾದಿಸಿದರು.

ಐಬಿಸಿ- 2016 ರ ಸೆಕ್ಷನ್ 14ರ ಕಾರಣದಿಂದಾಗಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ತಡೆಹಿಡಿಯಲಾಗಿದೆ ಎಂದು ಪ್ರತಿವಾದಿಗೆ ತಿಳಿಸಲಾಯಿತು. ಇದಲ್ಲದೆ, ಅರ್ಜಿದಾರರಿಂದ ಹಣ ವಸೂಲಿ ಮಾಡುವ ಪ್ರಯತ್ನದಲ್ಲಿ ಸಾಲಗಾರರು / ಗೃಹಬಳಕೆದಾರರ ಹಿತಾಸಕ್ತಿಗೆ ಅಡ್ಡಿಯುಂಟುಮಾಡುವ ಬೇರೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ಪ್ರತಿವಾದಿಯನ್ನು ಐಆರ್‌ಪಿ ಕೋರಿದರು. ಇಷ್ಟಾದರೂ ಪ್ರತಿವಾದಿ ವಿವಿಧ ಪಕ್ಷಗಳ ಹಿತಾಸಕ್ತಿ ಬಗ್ಗೆ ಯಾವುದೇ ಆಸ್ಥೆ ವಹಿಸದೆ ಏಕಪಕ್ಷೀಯವಾಗಿ ನಡೆದುಕೊಂಡಿತು ಎಂದು ಆರೋಪಿಸಲಾಗಿದೆ.

ಪ್ರತಿವಾದಿಯು ಆಸ್ತಿ ವಹಿವಾಟುಗಳನ್ನು ಮತ್ತು ನ್ಯಾಯಾಲಯದ ವರ್ಗಾವಣೆಯನ್ನು ಆಸ್ತಿಗಳ ನಿರ್ಬಂಧವಿಲ್ಲದೆ ಅನುಮತಿಸಿದ್ದರಿಂದ ಕೆಲವು ಸ್ವ-ಹಿತಾಸಕ್ತಿಯ ಜನರ ಕೈಯಲ್ಲಿ ಅವಿಭಾಜ್ಯ ಆಸ್ತಿಗಳ ನಷ್ಟ ಉಂಟಾಯಿತು ಎಂದು ಬೇಸರಗೊಂಡ ಅರ್ಜಿದಾರರು ಅಧೀನ ನ್ಯಾಯಾಲಯದಲ್ಲಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.