Chanda Kochhar, Mumbai Sessions Court 
ಸುದ್ದಿಗಳು

ವಿಡಿಯೋಕಾನ್ ಸಾಲ ಹಗರಣ: ಚಂದಾ ಕೊಚ್ಚರ್ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಐಪಿಸಿ ಸೆಕ್ಷನ್ 409 ಸೇರಿಸಲು ಅವಕಾಶ

ಮುಂಬೈ ನ್ಯಾಯಾಲಯವು ಶುಕ್ರವಾರ ಐಸಿಐಸಿಐ ಮಾಜಿ ಸಿಇಒ ಚಂದಾ ಅವರ ವಿರುದ್ಧ ಕ್ರಿಮಿನಲ್ ವಿಶ್ವಾಸಘಾತುಕತನದ ಹೆಚ್ಚುವರಿ ಆರೋಪ ಸೇರಿಸಲು ಸಿಬಿಐಗೆ ಅನುಮತಿ ನೀಡಿದ್ದು, ಅರ್ಜಿಯಲ್ಲಿ ಚಂದಾ ಅವರ ವಿಚಾರಣೆ ಅಗತ್ಯವಿಲ್ಲ ಎಂದಿದೆ.

Bar & Bench

ವಿಡಿಯೋಕಾನ್‌ ಸಮೂಹಕ್ಕೆ ಅಕ್ರಮವಾಗಿ ಸಾಲ ನೀಡಿದ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದಾ ಕೊಚ್ಚರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409ರ (ಕ್ರಿಮಿನಲ್ ವಿಶ್ವಾಸ ಘಾತುಕತನ) ಅಡಿಯ ಆರೋಪ ಸೇರಿಸಲು ಸಿಬಿಐಗೆ ಮುಂಬೈ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.

ಸಾರ್ವಜನಿಕ ಸೇವಕ ಅಥವಾ ಬ್ಯಾಂಕರ್, ವ್ಯಾಪಾರಿ ಇಲ್ಲವೇಏಜೆಂಟ್ ಮಾಡಿದ ವಿಶ್ವಾಸಘಾತುಕತನವನ್ನು ಅಪರಾಧ ಎಂದು ಪರಿಗಣಿಸಿ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಈ ನಿಯಮಾವಳಿ ಅವಕಾಶ ನೀಡುತ್ತದೆ.

ತನಿಖೆಯ ಸಂದರ್ಭದಲ್ಲಿ, ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆಯೂ ಯಾವುದೇ ನಿರ್ದಿಷ್ಟ ನಿಯಮಾವಳಿ ಸೇರಿಸಬಹುದು ಅಥವಾ ತೆಗೆದುಹಾಕಬಹುದು ಎಂದು ವಿಶೇಷ ನ್ಯಾಯಾಧೀಶ ಎಂ ಆರ್ ಪುರವರ್ ಪ್ರಕರಣದ ಆದೇಶದ ವೇಳೆ ತಿಳಿಸಿದರು.

ಸಂಬಂಧಪಟ್ಟ ಸೆಕ್ಷನ್‌ ಅನ್ನು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಗಣನೆಗೆ ತೆಗೆದುಕೊಳ್ಳುವುದು ಸೇರಿದಂತೆ ನಂತರದ ಹಂತದಲ್ಲಿಯೂ ಸೇರಿಸಬಹುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಹೆಚ್ಚುವರಿ ಆರೋಪವನ್ನು ಸೇರಿಸಲು ಸಿಬಿಐ ಸಲ್ಲಿಸಿರುವ ಅರ್ಜಿಯ ಕುರಿತು ಕೊಚ್ಚರ್ ಅವರ ಆಕ್ಷೇಪವನ್ನು ಆಲಿಸುವ ಅಗತ್ಯವಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.