Home Minister G Parameshwar 
ಸುದ್ದಿಗಳು

ಗೃಹ ಸಚಿವರೇ ಅಸಹಾಯಕರಾದರೆ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ತಡೆಯಲಿದೆ ಎಂಬ ಯಾವುದೇ ಭರವಸೆ ಹೊಂದಲಾಗದು: ಹೈಕೋರ್ಟ್‌

ನ್ಯಾಯಾಲಯದ ನಿಗಾದಲ್ಲಿ ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಒಲವು. ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದ ನ್ಯಾಯಾಲಯ.

Bar & Bench

“ಮರಳು ಅಕ್ರಮ ದಂಧೆಗೆ ತಡೆ ಹಾಕಲು ರಾಜ್ಯದ ಗೃಹ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರವು ಅದಕ್ಕೆ ಕಡಿವಾಣ ಹಾಕಲಿದೆ ಎನ್ನುವ ಭರವಸೆ ಹೊಂದಲಾಗದು” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, “ಇದೊಂದು ಗಂಭೀರ ವಿಚಾರವಾಗಿರುವುದರಿಂದ ನ್ಯಾಯಾಲಯದ ನಿಗಾದಲ್ಲಿ ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆ (ಎಸ್‌ಐಟಿ) ನಡೆಸಬೇಕಾದ ಅಗತ್ಯವಿದೆ” ಎಂದು ಪ್ರತಿಪಾದಿಸಿದೆ.

ಗೃಹ ಸಚಿವ ಜಿ ಪರಮೇಶ್ವರ್‌ ಅವರು 28.1.2026ರಂದು ಅಧಿವೇಶನದಲ್ಲಿ ಮಾತನಾಡುತ್ತಾ “ರಾಜ್ಯದಲ್ಲಿ ಪಕ್ಷಾತೀತವಾಗಿ ಹಲವು ಪ್ರಭಾವಿಗಳು ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ” ಎಂದು ನೀಡಿರುವ ಹೇಳಿಕೆಯನ್ನಾಧಿರಿಸಿದ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

Justices DK Singh & Tara Vitasta Ganju

ಅಲ್ಲದೇ, ಸರ್ಕಾರದ ವಕೀಲ ಮೊಹಮ್ಮದ್‌ ಜಾಫರ್‌ ಶಾ ಅವರಿಗೆ ಗೃಹ, ಗಣಿ ಮತ್ತು ಭೂ ವಿಜ್ಞಾನ  ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳ ಪರವಾಗಿ ನೋಟಿಸ್‌ ಪಡೆಯಲು ಸೂಚಿಸಿದ್ದು, ಪ್ರತಿವಾದಿಗಳಿಗೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ. ಇದರ ಜೊತೆಗೆ ಪ್ರಕರಣ ದಾಖಲಿಸಿದ ಬಳಿಕ ಸ್ವಯಂಪ್ರೇರಿತ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಪೀಠ ವಿಚಾರಣೆ ನಡೆಸಲು ನಿರ್ದೇಶನಕ್ಕೆ ಅವರ ಮುಂದಿಡುವಂತೆ ನಿರ್ದೇಶಿಸಿದೆ.

ಗೃಹ ಸಚಿವ ಜಿ ಪರಮೇಶ್ವರ್‌ ಅವರು “ಮರಳು ಅಕ್ರಮ ಸಾಗಣೆಯು ದೊಡ್ಡ ರಾಕೆಟ್‌ ಆಗಿದ್ದು, ಅದರಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ. ಇಲ್ಲಿ ನಾನು ಯಾರ ಹೆಸರನ್ನೂ ಹೇಳುತ್ತಿಲ್ಲ. ಏಕೆಂದರೆ ಅದು ಮುಜುಗರ ಉಂಟು ಮಾಡುತ್ತದೆ. ಸೀಮಿತ ಉತ್ತರ ನೀಡಿದ್ದು, ಈ ದಂಧೆಯಲ್ಲಿ ಹಲವು ಪ್ರಭಾವಿಗಳಿದ್ದಾರೆ. ಈ ಕುರಿತು ಚರ್ಚಿಸಲು ಸಭೆ ನಡೆಸಲಾಗುವುದು” ಎಂದು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

“ಮರಳು ಗಣಿಗಾರಿಕೆ ನಡೆಸಲು ಬಿಡ್‌ ಆಹ್ವಾನಿಸಲಾಗಿದೆ. ಆದರೆ ಅವುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹಣದ ಹೊಳೆ ಹರಿಸುವ ಈ ರಾಕೆಟ್‌ನಲ್ಲಿ ದೊಡ್ಡ ತಿಮಿಂಗಿಲಗಳು ಭಾಗಿಯಾಗಿದ್ದು, ಮರಳು ಗಣಿಗಾರಿಕೆಯನ್ನು ಕಾನೂನಾತ್ಮಕಗೊಳಿಸುವುದು ಅವರಿಗೆ ಇಷ್ಟವಿಲ್ಲ. ಮರಳು ಗಣಿಗಾರಿಕೆಯ ಗುತ್ತಿಗೆದಾರರಿಗೆ ನೀಡಿದರೆ, ಹಣವು ಸರ್ಕಾರದ ಬೊಕ್ಕಸಕ್ಕೆ ಹೋಗಲಿದ್ದು, ಮಾಫಿಯಾಗಳಿಗೆ ಅಕ್ರಮ ಹಣ ಸಂದಾಯವಾಗುವುದು ನಿಂತು ಹೋಗಲಿದೆ ಎಂದು ವರದಿ ಮಾಡಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

“ರಾತ್ರಿ ವೇಳೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ಇದರಿಂದ ಬೆಳೆಗಳ ಮೇಲೆ ಧೂಳು ಕುಳಿತು ಫಸಲಿಗೆ ಹಾನಿಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ವಿಶೇಷ ಕಾರ್ಯಾಚರಣಾ ದಳವು (ಎಸ್‌ಟಿಎಫ್‌) ನೆಪಮಾತ್ರಕ್ಕೆ ಉಳಿದಿದೆ. ಮರಳು ಅಕ್ರಮ ಗಣಿಗಾರಿಕೆ ನಡೆಯುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಮತ್ತು ಚೆಕ್‌ ಪೋಸ್ಟ್‌ಗಳು ಇಲ್ಲದೇ ಇರುವುದರಿಂದ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ವಾಹನಗಳಿಂದ ಹಲವು ಸಾವುಗಳು ಸಂಭವಿಸಿವೆ. ರಾಯಚೂರು ಜಿಲ್ಲೆಯ ಮಹಿಳಾ ವಿಧಾನಸಭಾ ಸದಸ್ಯರೊಬ್ಬರು ಮರಳು ಮಾಫಿಯಾ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ತಮಗೆ ಜೀವ ಬೆದರಿಕೆ ಇರುವುದರ ಕುರಿತು ದೂರಿದ್ದಾರೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ. 

Suo motu PIL Vs State of Karnataka.pdf
Preview