Karnataka High Court
Karnataka High Court 
ಸುದ್ದಿಗಳು

ಕೆಲಸದ ವೇಳೆ ಗಾಯಗೊಂಡರೆ ಪರಿಹಾರ ಆಯುಕ್ತರಿಗೆ ಮನವಿ ಸಲ್ಲಿಸಬೇಕೆ ವಿನಾ ಕಾರ್ಮಿಕ ನ್ಯಾಯಾಲಯಕ್ಕಲ್ಲ: ಹೈಕೋರ್ಟ್‌

Bar & Bench

ಕೆಲಸದ ವೇಳೆ ಉದ್ಯೋಗಿ ಗಾಯಗೊಂಡರೆ ಆತ ಪರಿಹಾರ ಪಡೆಯಲು ನೌಕರರ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕೆ ವಿನಾ ಕಾರ್ಮಿಕ ನ್ಯಾಯಾಲಯದಲ್ಲಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ್ದ ನ್ಯಾಯಮೂರ್ತಿ ಕೆ ಎಸ್ ಮುದ್ಗಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ನೌಕರರ ಪರಿಹಾರ ಕಾಯಿದೆ 1923ರ ಅಡಿ ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವ ಅಧಿಕಾರ ಕಾರ್ಮಿಕ ನ್ಯಾಯಾಲಯಕ್ಕೆ ಇಲ್ಲ. ಸಿಬ್ಬಂದಿ ಅಥವಾ ನೌಕರನಿಗೆ ಅಂಗಾಗಗಳ ಗಾಯ ಅಥವಾ ಊನವಾದರೆ ಅಂತಹ ವೇಳೆ ಕಾರ್ಮಿಕ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬಹುದು. ಆದ್ದರಿಂದ, ಕಾಯಿದೆ ಪ್ರಕಾರ ಉದ್ಯೋಗಿ ಆಯುಕ್ತರ ಮುಂದೆ ಪರಿಹಾರದ ಮನವಿ ಸಲ್ಲಿಸಬೇಕು. ಅವರು ಅದನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಉದ್ಯೋಗಿ ಕೆಲಸದ ವೇಳೆ ಗಾಯಗೊಂಡಿರುವುದರಿಂದ ಆತ ನೌಕರರ ಪರಿಹಾರ ಕಾಯಿದೆ 1923ರ ಅಡಿ ಮಾತ್ರ ಅರ್ಜಿ ಸಲ್ಲಿಸಬಹುದು. ಕಾರ್ಮಿಕ ನ್ಯಾಯಾಲಯಕ್ಕೆ ಕೈಗಾರಿಕಾ ವ್ಯಾಜ್ಯ ಕಾಯಿದೆ ಸೆಕ್ಷನ್ 33(2)ರ ಅನ್ವಯ ಕಾರ್ಮಿಕರ ಪರಿಹಾರ ಅರ್ಜಿಯನ್ನು ಪರಿಹರಿಸುವ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಘಟನೆ ಹಿನ್ನೆಲೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೆ ಶಿವರಾಂ ಬಸ್ ಚಾಲನೆ ಮಾಡುತ್ತಿದ್ದಾಗ ಅಪಘಾತವಾಗಿ ಗಾಯಗೊಂಡಿದ್ದರು. ಆತ ಮಂಗಳೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಕೈಗಾರಿಕಾ ವ್ಯಾಜ್ಯ ಕಾಯಿದೆ 1947ರ ಸೆಕ್ಷನ್ 33ಸಿ(2) ಅಡಿ ವಾರ್ಷಿಕ ಶೇ 18ರ ಬಡ್ಡಿ ಸಹಿತ 5.50,000 ರೂಪಾಯಿ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಸಾರಿಗೆ ನಿಗಮವು ಸಿಬ್ಬಂದಿ ಈಗಾಗಲೇ ಮೋಟಾರು ವಾಹನ ಕಾಯಿದೆಯಡಿ ಪರಿಹಾರವನ್ನು ಪಡೆದಿದ್ದಾರೆ. ಮತ್ತೆ ಪರಿಹಾರ ಪಡೆಯುವ ಹಕ್ಕಿಲ್ಲ ಎಂದು ವಾದಿಸಿತ್ತು.

ವಾದ-ಪ್ರತಿವಾದ ಆಲಿಸಿದ್ದ ಕಾರ್ಮಿಕ ನ್ಯಾಯಾಲಯವು ಸಿಬ್ಬಂದಿ ಮೋಟಾರು ವಾಹನ ಕಾಯಿದೆ ಮತ್ತು ನೌಕರರ ಪರಿಹಾರ ಕಾಯಿದೆ ಎರಡರಡಿಯೂ ಪರಿಹಾರ ಪಡೆಯಬಹುದು ಎಂದು ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.