Parents of the Chawwla gangrape and murder victim at their home in Delhi. Shashi Shekhar Kashyap
ಸುದ್ದಿಗಳು

ಛಾವಲಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ದೋಷಿಗಳನ್ನು ಸುಪ್ರೀಂ ಖುಲಾಸೆಗೊಳಿಸಿದ ಬಗ್ಗೆ ಪೋಷಕರ ತೀವ್ರ ಬೇಸರ

ಅಪರಾಧಿಗಳನ್ನು ಖುಲಾಸೆ ಗೊಳಿಸಿದ ತೀರ್ಪನ್ನು ಪ್ರಶ್ನಿಸಲು ನಿರ್ಧರಿಸಿದೆ ಕುಟುಂಬ.

Bar & Bench

ದೆಹಲಿಯ ಛಾವಲಾದಲ್ಲಿ 2012ರಲ್ಲಿ ನಡೆದ ತಮ್ಮ ಮಗಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ ಬಗ್ಗೆ ಸಂತ್ರಸ್ತೆಯ ಪೋಷಕರಾದ  ಕೈಲಾಶ್ ಮತ್ತು ಅವರ ಪತ್ನಿ ರಾಜೇಶ್ವರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಂಘಟನೆಗಳು, ಮಾಧ್ಯಮಗಳ ಬೆಂಬಲ ದೊರೆಯುತ್ತಿದ್ದರೂ ತೀರ್ಪು ಅವರನ್ನು ಒಂಟಿಯಾಗಿಸಿದೆ.

ವಿಚಾರಣಾ ನ್ಯಾಯಾಲಯವೊಂದು ಆರೋಪಿಗಳಾದ ರಾಹುಲ್, ರವಿಕುಮಾರ್ ಮತ್ತು ವಿನೋದ್ ಅವರಿಗೆ 2014ರಲ್ಲಿ ಮರಣದಂಡನೆ ವಿಧಿಸಿತ್ತು. ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿತ್ತು. ಆದರೆ ಕಳೆದ ನವೆಂಬರ್ 7ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುವಾಗ ಪೊಲೀಸರ ವಾದದಲ್ಲಿ ಹಲವು ಹುಳುಕುಗಳನ್ನು ಪತ್ತೆಹಚ್ಚಿತು. ಪರಿಣಾಮ ಮೂವರೂ ಅಪರಾಧಿಗಳು ಖುಲಾಸೆಗೊಂಡರು.  

ಪೋಷಕರ ಅಳಲು:

  • ಕೆಳ ನ್ಯಾಯಾಲಯಗಳ ತೀರ್ಪಿನಲ್ಲಿ ಯಾವುದೇ ತಪ್ಪು ಇರಲಿಲ್ಲ. ದೆಹಲಿ ಹೈಕೋರ್ಟ್‌ ಕೂಡ ಪ್ರಕರಣವನ್ನು ಪರಿಶೀಲಿಸಿದ ಬಳಿಕವೇ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ ತೀರ್ಪು ದಿಗ್ಭ್ರಮೆ ಹುಟ್ಟಿಸಿದೆ.

  • ಸಾಕ್ಷ್ಯಾಧಾರಗಳನ್ನು ಅವಲಂಬಿಸಿ ಅಪರಾಧಿಗಳನ್ನು ಖುಲಾಸೆಗೊಳಿಸಿರುವುದನ್ನು  ಒಪ್ಪುವುದಿಲ್ಲ.  ಇಷ್ಟು ವರ್ಷ ಸಾಕ್ಷಿ ಎಲ್ಲಿತ್ತು? …ಈ ಸ್ಥಿತಿ ಯಾರಿಗೂ ಬಾರದಿರಲಿ.   

  • ಹೀಗೆ ಖುಲಾಸೆಗೊಳಿಸುವುದರಿಂದ ಕಾನೂನಿನ ಭಯ ಇಲ್ಲದಂತಾಗಿ ಅಪರಾಧಗಳು ಹೆಚ್ಚಳವಾಗುವ ಸಾಧ್ಯತೆ ಇದೆ.

  • ಅಪರಾಧಿಗಳಿಗೆ ಮರಣದಂಡನೆ ನೀಡಬಾರದು ಅನ್ನಿಸಿದ್ದರೆ ಆಜೀವಪರ್ಯಂತ ಬಂಧನದಲ್ಲಿರಿಸುವ ಶಿಕ್ಷೆಯನ್ನಾದರೂ ಸುಪ್ರೀಂ ಕೋರ್ಟ್‌ ನೀಡಬಹುದಿತ್ತು. ಅವರನ್ನು ಖುಲಾಸೆಗೊಳಿಸಬಾರದಿತ್ತು. ಪ್ರಕರಣದಲ್ಲಿ ಸಾಕ್ಷ್ಯಧಾರಗಳ ತಪ್ಪು ಇಲ್ಲ.

  • ನಮ್ಮ ಮಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುತ್ತಾ ಮೂರ್ಛೆ ಹೋದರು. ಇದು ಪ್ರಕರಣದ ಭೀಕರತೆಯನ್ನು ಸಾರುತ್ತದೆ.

  • ಯಾವ ಪೋಷಕರು ತಾನೇ ತಮ್ಮ ಮಗು ಯಶಸ್ವಿಯಾಗುವುದನ್ನು ಕಂಡು ಹೆಮ್ಮೆ ಪಡುವುದಿಲ್ಲ? ದುಷ್ಕರ್ಮಿಗಳು ಪ್ರತಿಭಾನ್ವಿತ ಜೀವವೊಂದಕ್ಕೆ ಕೊಡಲಿಪೆಟ್ಟು ನೀಡಿದರು.

  • ಮಗಳು ಹೋದ ನಂತರ, ಅವಳ ನೆನಪುಗಳೇ ನಮಗೆ ಕಾನೂನು ಹೋರಾಟ ನಡೆಸಲು ಶಕ್ತಿ ತುಂಬುತ್ತಿವೆ.   

  • ನಾವು ಕೇವಲ ಉಸಿರಾಡುತ್ತಿದ್ದೇವೆ ಬದುಕಿಲ್ಲ.

  • ಅಪರಾಧಿಗಳನ್ನು ಖುಲಾಸೆಗೊಳಿಸಿದ್ದು ವಿಧಿಯಾಟವೇ ಇರಬೇಕು.

  •  ನಾವು ಖುಲಾಸೆ ಮಾಡಿರುವ ತೀರ್ಪನ್ನು ಪ್ರಶ್ನಿಸುತ್ತೇವೆ.

ಛಾಯಾಚಿತ್ರಗಳು: ಶಶಿ ಶೇಖರ್‌ ಕಶ್ಯಪ್‌