Lucknow Bench, Allahabad High Court 
ಸುದ್ದಿಗಳು

ಸಮನ್ಸ್ ಪಡೆದವರಿಗೆ ಇಸಿಐಆರ್ ಕೊಡದಿದ್ದರೆ ಕನಿಷ್ಠ ಆರೋಪಗಳ ವಿವರವನ್ನಾದರೂ ಇ ಡಿ ನೀಡಬೇಕು: ಅಲಾಹಾಬಾದ್ ಹೈಕೋರ್ಟ್

Bar & Bench

ಸಮನ್ಸ್ ಪಡೆದ ವ್ಯಕ್ತಿಗೆ ಜಾರಿ ನಿರ್ದೇಶನಾಲಯ (ಇ ಡಿ) ಪ್ರಕರಣದ ಮಾಹಿತಿ ವರದಿಯ (ಇಸಿಐಆರ್‌) ನಕಲನ್ನು ಒದಗಿಸದಿದ್ದಲ್ಲಿ, ತನ್ನ ವಿರುದ್ಧದ ಆರೋಪ ಏನು ಎನ್ನುವ ಬಗ್ಗೆಯಾದರೂ ಆತನಿಗೆ ತಿಳಿಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ [ಸೌರಭ್ ಮುಕುಂದ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಪ್ರಕರಣದ ಎಲ್ಲಾ ಭಾಗಿದಾರರಿಗೆ ಅದರಲ್ಲಿಯೂ ಪಿಎಂಎಲ್‌ಎ ಸೆಕ್ಷನ್ 50ರ ಅಡಿಯಲ್ಲಿ ಇ ಡಿಯಿಂದ ಸಮನ್ಸ್ ಪಡೆದ ವ್ಯಕ್ತಿಯ ಬಗ್ಗೆ ತಿಳಿಯದೇ ಇದ್ದಾಗ ಪ್ರಕರಣದ ಎಲ್ಲಾ ಭಾಗಿದಾರರಿಗೂ ನ್ಯಾಯ ಒದಗಿಸಬೇಕಾದರೆ ವಿಚಾರಣೆ ಅಥವಾ ತನಿಖೆ ನಡೆಸಲೇಬೇಕಿದೆ ಎಂದು ನ್ಯಾ. ಮೊಹಮ್ಮದ್ ಫೈಜ್ ಆಲಂ ಖಾನ್ ಅವರು ತಿಳಿಸಿದರು.

ಸಮನ್ಸ್ ಪಡೆದ ವ್ಯಕ್ತಿಗೆ ಇ ಡಿ ಕಡ್ಡಾಯವಾಗಿ ಇಸಿಐಆರ್‌ ನೀಡಬೇಕೆಂದೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು “ಅಸಾಧಾರಣ ಅಥವಾ ವಿಶೇಷವಾದದ್ದೇನೂ ಇಲ್ಲದಿದ್ದರೆ ಸಾಮಾನ್ಯ ಪ್ರಕರಣಗಳಲ್ಲಿ ಇಸಿಐಆರ್‌ನ ಪ್ರತಿ ನೀಡದೆ ಹೋದಲ್ಲಿ ತನ್ನ ವಿರುದ್ಧದ ಆರೋಪ ಏನೆಂಬುದನ್ನು ವ್ಯಕ್ತಿ ಅರಿಯಲು ಮತ್ತು  ಇ ಡಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಸಂಬಂಧಿತ ದಾಖಲೆಗಳನ್ನಾದರೂ ಆತ ಪಡೆಯಲು ಅರ್ಹ ಎಂದು ನುಡಿದಿದ್ದಾರೆ.

ಭವಿಷ್ಯದಲ್ಲಿ ತನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕಾಗಿ ಇ ಡಿ ನೀಡಿರುವ ಸಮನ್ಸ್‌ನಿಂದ ತಪ್ಪಿಸಿಕೊಳ್ಳಲು ಯಾವುದೇ ವ್ಯಕ್ತಿಗೆ ಕಾನೂನಿನಡಿ ಅವಕಾಶವಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.

ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌದಲ್ಲಿ ಇಡಿ ದಾಖಲಿಸಿರುವ ಎರಡು ಇಸಿಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸೌರಭ್‌ ಮುಕುಂದ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾದಗಳನ್ನು ಆಲಿಸಿದ ನ್ಯಾಯಾಲಯ ಸಮನ್ಸ್ ಪಡೆದ ವ್ಯಕ್ತಿಗಳು ಇ ಡಿ ಮುಂದೆ ಹಾಜರಾಗಬೇಕಾಗುತ್ತದೆ. ಆದರೆ ಅಂತಹ ತನಿಖೆಯ ಸಮಯದಲ್ಲಿ ಅವರು ಆರೋಪಿಯಾಗಬಹುದು ಅಥವಾ ಇಲ್ಲದೇ ಇರಬಹುದು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಬಳಿ ಇರುವ ಕೆಲವು ದಾಖಲೆಗಳನ್ನು ಸಲ್ಲಿಸಲಷ್ಟೇ ಸಮನ್ಸ್ ನೀಡಿರಬಹುದು ಎಂದು ಅದು ಹೇಳಿದೆ.

ಹೀಗಾಗಿ ಅರ್ಜಿಯನ್ನು ಕೇವಲ ಆತಂಕಕ್ಕೊಳಗಾಗಿ ಸಲ್ಲಿಸಲಾಗಿದ್ದು ಆರೋಪಿಯಾಗಿ ಇಲ್ಲವೇ ಸಾಕ್ಷಿಯಾಗಿ ತನಗೆ ಸಮನ್ಸ್‌ ನೀಡಲಾಗಿದೆಯೇ ಎಂಬುದು ಅರ್ಜಿದಾರರಿಗೆ ತಿಳಿದಿಲ್ಲ ಎಂದ ನ್ಯಾಯಾಲಯ ಆರಂಭಿಕ ಹಂತದಲ್ಲಿರುವ ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂದು ತಿಳಿಸಿ ಅರ್ಜಿದಾರರಿಗೆ ನೀಡಲಾಗಿದ್ದ ಇಸಿಐಆರ್‌ ಮತ್ತು ಸಮನ್ಸ್‌ ರದ್ದುಗೊಳಿಸಲು ನಿರಾಕರಿಸಿತು.