Justice M I Arun and Karnataka HC 
ಸುದ್ದಿಗಳು

ನಿರ್ದಿಷ್ಟ ದಿನದೊಳಗೆ ಮೀಸಲಾತಿ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್‌ ಪ್ರಕಾರ ಸ್ಥಳೀಯ ಸಂಸ್ಥೆ ಚುನಾವಣೆ: ಹೈಕೋರ್ಟ್‌

"ನಿಮ್ಮದೇ ಸರ್ಕಾರವಿದೆ, ಪುರಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಗಾಳಿ ನಿಮ್ಮ ಪರವಾಗಿಯೇ ಇರುತ್ತದೆಲ್ಲವೇ?" ಎಂದು ಸರ್ಕಾರದ ವಕೀಲರನ್ನು ಪ್ರಶ್ನಿಸಿದ ನ್ಯಾಯಾಲಯ.

Bar & Bench

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮವಾಗಿ ಸೀಟುಗಳ ಮೀಸಲಾತಿಯನ್ನು ರಾಜ್ಯ ಸರ್ಕಾರವು ನಿರ್ದಿಷ್ಟ ದಿನದಲ್ಲಿ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್‌ ಪ್ರಕಾರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಎಚ್ಚರಿಸಿದ್ದು, ಕೊನೆಯ ಬಾರಿಗೆ 11 ದಿನಗಳ ಕಾಲಾವಕಾಶ ನೀಡಿದೆ.

ಕರ್ನಾಟಕ ಮಹಾನಗರ ಪಾಲಿಕೆ, ನರಗಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಮತ್ತು ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ, ಅತ್ತಿಬೆಲೆ, ಬೊಮ್ಮಸಂದ್ರ, ಕಮಲಾಪುರ ನಗರಸಭೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿಲು ನಿರ್ದೇಶನ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು "ಹಲವು ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2023ರಲ್ಲಿ ಮುಗಿದಿದ್ದು, ಸಾಕಷ್ಟು ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದರೂ ಯಾವುದೇ ಪ್ರತಿಕ್ರಿಯೆಯನ್ನು ಸರ್ಕಾರ ನೀಡಿಲ್ಲ. ಇದು ಸಾಂವಿಧಾನಿಕ ಆದೇಶ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ. ಇಷ್ಟು ಸಮಯದ ಒಳಗೆ ಮೀಸಲಾತಿ ನಿಗದಿಪಡಿಸಲಾಗುವುದು ಎಂದು ಸರ್ಕಾರ ಹೇಳಬೇಕು. ಈ ವಿಚಾರದಲ್ಲಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಲಾಗದು. ಶಿವಮೊಗ್ಗ, ಮೈಸೂರು ನಗರಸಭೆಗಳ ಅವಧಿಯು 2023ರ ನವೆಂಬರ್‌ನಲ್ಲೇ ಮುಗಿದಿದೆ. ಅಲ್ಲಿ ಚುನಾವಣೆ ನಡೆದಿಲ್ಲ” ಎಂದರು.

ಆಗ ಪೀಠವು “ಚುನಾವಣೆ ನಡೆಯಬೇಕಲ್ಲವೇ? ನಿಮ್ಮದೇ ಸರ್ಕಾರವಿದೆ, ಪುರಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಗಾಳಿ ನಿಮ್ಮ ಪರವಾಗಿಯೇ ಇರುತ್ತದೆಲ್ಲವೇ? ಅವಧಿ ಮುಗಿಯುವುದರೊಳಗೆ ಮೀಸಲಾತಿ ಸೇರಿದಂತೆ ಎಲ್ಲವನ್ನೂ ಪೂರ್ಣಗೊಳಿಸಬೇಕು. ಅವಧಿ ಮುಗಿದು ಎರಡು ವರ್ಷಗಳಾದ ಮೇಲೆ ಏನಿದು? ಮೀಸಲಾತಿ ಅಧಿಸೂಚನೆಯನ್ನು ನಿರ್ದಿಷ್ಟ ದಿನಾಂಕದಲ್ಲಿ ಪ್ರಕಟಿಸಲು ಮುಂದಾಗದಿದ್ದರೆ ಹಾಲಿ ಇರುವ ರೋಸ್ಟರ್‌ ಪ್ರಕಾರ ಚುನಾವಣೆ ನಡೆಸಲು ಆಯೋಗಕ್ಕೆ ನಿರ್ದೇಶಿಸಲಾಗುವುದು. ಚುನಾವಣೆ ವಿಳಂಬವು ಸಾಂವಿಧಾನಿಕ ಆಡಳಿತ ಮುರಿದು ಬಿದ್ದಿರುವುದಕ್ಕೆ ಸಮನಾಗುತ್ತದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಉಲ್ಲೇಖ ಬೇಕೆ?” ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ಅಂತಿಮವಾಗಿ ಸರ್ಕಾರದ ವಕೀಲರ ಕೋರಿಕೆಯ ಮೇರೆಗೆ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ ಎಂದ ಪೀಠವು ಸೆಪ್ಟೆಂಬರ್‌ 11ಕ್ಕೆ ವಿಚಾರಣೆ ಮುಂದೂಡಿತು.