Supreme Court, Bihar SIR 
ಸುದ್ದಿಗಳು

ಎಸ್‌ಐಆರ್‌: ಇಡೀ ಪ್ರಕಿಯೆಯನ್ನು ಚುನಾವಣಾ ಆಯೋಗ ಸಮರ್ಥಿಸಬೇಕಿದೆ ಎಂದ ಸುಪ್ರೀಂ ಕೋರ್ಟ್‌

ಕೇವಲ ಸಂವಿಧಾನಬದ್ಧವಾದ ಸಂಸ್ಥೆಯೆನ್ನುವ ಒಂದೇ ಕಾರಣದಿಂದ ಆಯೋಗವು ಶಾಸಕಾಂಗದ ಶಾಸನದ ಬಲವಿಲ್ಲದೆ ನಿರಂಕುಶ ಅಧಿಕಾರವನ್ನು ಚಲಾಯಿಸಲಾಗದು ಎಂದು ಸಿಂಘ್ವಿ ವಾದ.

Bar & Bench

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಅಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗವು ಸಮರ್ಥಿಸುವುದು ಅಗತ್ಯವಾಗಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರ ಪೀಠವು ಎಸ್‌ಐಆರ್‌ನ ಸಿಂಧುತ್ವವನ್ನು ಪ್ರಶ್ನಿಸಿರುವ ಹಾಗೂ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡಲು ಕೋರಿದ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಮತ್ತು ಏಳು ರಾಜಕೀಯ ಪಕ್ಷಗಳ ಪರವಾಗಿ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಎಸ್‌ಐಆರ್‌ ಅರ್ಜಿ ಪ್ರಕ್ರಿಯೆ ಮತ್ತು ನಿಯಮಾವಳಿ ನಿಯೋಜಿತ ಶಾಸನದಿಂದ ಮಾತ್ರ ಬರಬಹುದು ಎಂದು ವಾದಿಸಿದರು.

"ಚುನಾವಣಾ ಆಯೋಗವು ಸಂವಿಧಾನದ ವಿಧಿ 324ರ ಬಲವನ್ನು ಬಳಸುವ ಮೂಲಕ ನಡೆಸುತ್ತಿರುವ ಸಾಮೂಹಿಕ ಪ್ರಕ್ರಿಯೆಯು ಇದಾಗಿದ್ದು, ಇದನ್ನು ಅನುಮತಿಸಲಾಗದು. ಇದು ಅಧಿಕಾರವ್ಯಾಪ್ತಿಯ ಹೊರಗಿದೆ. ಹಾಗಾಗಿ, ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸುವುಸು ಸಮಸ್ಯೆಯನ್ನು ನಿವಾರಿಸುವುದಿಲ್ಲ," ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್ ಅವರು, "ನಿಮ್ಮ ವಾದದ ಪ್ರಕಾರ, ಚುನಾವಣಾ ಆಯೋಗಕ್ಕೆ ಎಂದಿಗೂ ಎಸ್‌ಐಆರ್ ಅಧಿಕಾರವಿರುವುದಿಲ್ಲ ಎಂದಾಗುತ್ತದೆ... ಇದು ನಿಯಮಿತ ನವೀಕರಣವಲ್ಲ... ಆದರೆ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದ್ದರೆ... ಬಹುಶಃ ಈ ಪ್ರಕ್ರಿಯೆಯನ್ನು ಆಯೋಗವು ಸಮರ್ಥಿಸಬೇಕಾಗಬಹುದು" ಎಂದರು.

ಈ ವೇಳೆ ಸಿಂಘ್ವಿ ಅವರು, "ಈ ನ್ಯಾಯಾಲಯವು ಕಳೆದ 6 ತಿಂಗಳುಗಳಲ್ಲಿ ಸಾಕಷ್ಟು ಸುಧಾರಣಾತ್ಮಕ ಆದೇಶಗಳನ್ನು ನೀಡಿದೆ. ಆದರೆ ಯಾವುದು ಕಾನೂನು ಅಲ್ಲವೋ, ಅದು ಕಾನೂನಾಗಿ ಉಳಿಯದು," ಎಂದು ಎಸ್‌ಐಆರ್‌ನ ಸಿಂಧುತ್ವವನ್ನು ಪ್ರಶ್ನಿಸಿದರು.

ತಮ್ಮ ವಾದದ ವೇಳೆ, ಸಿಂಘ್ವಿ ಅವರು, ಎಸ್‌ಐಆರ್‌ ನಂತಹ ಯಾವುದೇ ಪ್ರಕ್ರಿಯೆಯನ್ನು ನಡೆಸುವ ಮೊದಲು ಸಾಂವಿಧಾನಿಕ ಕ್ರಮವನ್ನು ಅನುಸರಿಸಬೇಕು ಎಂದು ವಾದಿಸಿದರು.

"ಚುನಾವಣೆಗಳನ್ನು ನಡೆಸುವುದರ ನಿಯಂತ್ರಣದ ನೆಪದಲ್ಲಿ ಆಯೋಗವು ಸಂಸತ್ತು ಮತ್ತು ವಿಧಾನಸಭೆಗಳಿಗೆ ಮಾತ್ರವೇ ಸೀಮಿತವಾದ ಸಂಪೂರ್ಣ ಶಾಸನಾತ್ಮಕವಾದ ಕ್ರಿಯೆಯನ್ನು ತಾನು ನಡೆಸಲು ಮುಂದಾಗುವಂತಿಲ್ಲ. ಸಂವಿಧಾನದ ಅಡಿಯಲ್ಲಿ ಯಾವುದೇ ಮಾನದಂಡದಿಂದ ನೋಡಿದರೂ ಚುನಾವಣಾ ಆಯೋಗವನ್ನು ಶಾಸನಾತ್ಮಕ ಪ್ರಕ್ರಿಯೆಯ ಮತ್ತೊಂದು ಭಾಗ ಎಂದು ಎಣಿಸಲಾಗದು. ಕೇವಲ ಸಂವಿಧಾನಬದ್ಧವಾದ ಸಂಸ್ಥೆಯೆನ್ನುವ ಒಂದೇ ಕಾರಣದಿಂದ ಅದು ಶಾಸಕಾಂಗದ ಶಾಸನದ ಬಲವಿಲ್ಲದೆ ನಿರಂಕುಶ ಅಧಿಕಾರವನ್ನು ಚಲಾಯಿಸಲಾಗದು" ಎಂದು ವಾದಿಸಿದರು.

ಪ್ರಕರಣದ ಮುಂದಿನ ವಿಚಾರಣೆ ಡಿ. 2ಕ್ಕೆ ನಡೆಯಲಿದೆ.

ಹಿನ್ನೆಲೆ: ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಈ ವರ್ಷದ ಜೂನ್‌ನಲ್ಲಿ ಬಿಹಾರದಲ್ಲಿ ಮೊದಲಿಗೆ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪ್ರಕ್ರಿಯೆಯು ನ್ಯಾಯಾಲಯದಲ್ಲಿರುವಾಗಲೇ ಆಯೋಗವು ದೇಶಾದ್ಯಂತ ವಿವಿಧೆಡೆ ಎಸ್‌ಐಆರ್‌ ನಡೆಸಲು ಮುಂದಾಗಿತ್ತು. ಈ ಕುರಿತು ಅಕ್ಟೋಬರ್ 27 ರಂದು ಅದು ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ವಿಸ್ತರಿಸಿರುವುದಾಗಿ ತಿಳಿಸಿತ್ತು.

ಇದರ ಬೆನ್ನಿಗೇ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಎಸ್‌ಐಆರ್‌ ಪ್ರಶ್ನಿಸಿ ಅರ್ಜಿ ದಾಖಲಿಸಿವೆ. ತದನಂತರ ಕೇರಳ ಸರ್ಕಾರವು ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿಯುವವರೆಗೆ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಅರ್ಜಿ ಸಲ್ಲಿಸಿದೆ. ಇದಲ್ಲದೆ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)], ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಿಕೆ ಕುನ್ಹಾಲಿಕುಟ್ಟಿ ಸಹ ಎಸ್‌ಐಆರ್‌ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.