Former CJI DY Chandrachud 
ಸುದ್ದಿಗಳು

ಸಂಪೂರ್ಣ ವಾಕ್ ಸ್ವಾತಂತ್ರ್ಯಇದ್ದರೆ ಉಳ್ಳವರು ಇತರರ ದನಿ ಅಡಗಿಸುತ್ತಾರೆ: ನಿವೃತ್ತ ಸಿಜೆಐ ಚಂದ್ರಚೂಡ್

ಅಸಮಾನತೆ ಇರುವ ಸಮಾಜದಲ್ಲಿ ಸಂಪತ್ತು, ಪ್ರಭಾವ ಮತ್ತು ವೇದಿಕೆಗಳ ಅವಕಾಶ ಉಳ್ಳವರು ಸಾರ್ವಜನಿಕ ಸಂಕಥನದಲ್ಲಿ ಮೇಲುಗೈ ಸಾಧಿಸಿ ಸಮಾಜದಂಚಿನಲ್ಲಿರುವವರ ದನಿಗಳನ್ನು ಹತ್ತಿಕ್ಕಬಹುದು ಎಂದು ಅವರು ಹೇಳಿದರು.

Bar & Bench

ಅನಿಯಂತ್ರಿತ ವಾಕ್ ಸ್ವಾತಂತ್ರ್ಯದ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ಇದು ಯಥೇಚ್ಛ ಸಂಪನ್ಮೂಲ ಮತ್ತು ಅಧಿಕಾರ ಇರುವರ ಪಾಲಿಗೆ ಅಸಮಾನವಾಗಿ ಅನುಕೂಲಕರವಾಗಬಹುದು ಎಂದು ಹೇಳಿದರು.

ಸಂವಿಧಾನ ದಿನದ ಅಂಗವಾಗಿ ಕೇರಳ ಹೈಕೋರ್ಟ್‌ ವಕೀಲರ ಸಂಘ ಕೊಚ್ಚಿಯ ಕೇರಳ ಹೈಕೋರ್ಟ್‌ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ "ಸಂವಿಧಾನದ ವಾಪ್ತಿಯಲ್ಲಿ ಭ್ರಾತೃತ್ವ-ಒಳಗೊಳ್ಳುವಿಕೆಯ ಸಮಾಜಕ್ಕಾಗಿ ನಮ್ಮ ಅನ್ವೇಷಣೆ" ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಅಸಮಾನತೆ ಇರುವ ಸಮಾಜದಲ್ಲಿ ಸಂಪತ್ತು, ಪ್ರಭಾವ ಮತ್ತು ವೇದಿಕೆಗಳ ಅವಕಾಶವುಳ್ಳವರು ಸಾರ್ವಜನಿಕ ಸಂಕಥನದಲ್ಲಿ ಮೇಲುಗೈ ಸಾಧಿಸಿ ಸಮಾಜದಂಚಿನಲ್ಲಿರುವವರ ದನಿಗಳನ್ನು ಹತ್ತಿಕ್ಕಬಹುದು ಎಂದು ಅವರು ಹೇಳಿದರು.

 ನ್ಯಾ. ಡಿ ವೈ ಚಂದ್ರಚೂಡ್‌ ಅವರ ಭಾಷಣದ ಪ್ರಮುಖಾಂಶಗಳು

  • ಅಸಮಾನತೆ ಇರುವ ಸಮಾಜದಲ್ಲಿ ಅಧಿಕಾರ ಹೊಂದಿರುವವರು ತಮಗೆ ದೊರೆತಿರುವ ಸ್ವಾತಂತ್ರ್ಯವನ್ನು ದುರ್ಬಲರಿಗೆ ಹಾನಿಕಾರಕವಾಗುವಂತಹ ಚಟುವಟಿಕೆಗಳನ್ನು ಉದ್ದೀಪಿಸಲು ಬಳಸಬಹುದು.

  • ವಾಕ್‌ ಸ್ವಾತಂತ್ರ್ಯ ಸಂಪೂರ್ಣ ಮುಕ್ತವಾಗಿದ್ದರೆ, ಸಂಪತ್ತು, ಪ್ರಭಾವ ಮತ್ತು ವೇದಿಕೆಗಳಿಗೆ ವಿಫುಲ ಅವಕಾಶವಿರುವವರು ಸಾರ್ವಜನಿಕ ಸಂಕಥನದಲ್ಲಿ ಮೇಲುಗೈ ಸಾಧಿಸಿ ಉಳಿದವರ ದನಿಯನ್ನು ಅಡಗಿಸುತ್ತಾರೆ.

  • ವಾಕ್ ಸ್ವಾತಂತ್ರ್ಯವು ಸಾಂವಿಧಾನಿಕ ಭರವಸೆ ಮತ್ತು ಆಶಯವಾಗಿದ್ದರೂ, ಅದು ಅನಿಯಂತ್ರಿತವಾದರೆ ತ್ವೇಷಮಯ ಸಂಕಥನಗಳನ್ನು ಬೆಳೆಸುತ್ತದೆ. ಇಂತಹ ನಿರೂಪಣೆಗಳು ಸಾಮಾಜಿಕ ಸಮಾನತೆಗೆ ಭಂಗ ತರುತ್ತವೆ.

  • ಅದೇ ರೀತಿ ಸಮಾಜದ ಸಂಪನ್ಮೂಲಗಳ ಅಸಮರ್ಪಕ ಹಂಚಿಕೆ ಮತ್ತು ಅಂತರ್ಗತ ವ್ಯತ್ತಾಸ ಗುರುತಿಸದೆ ಎಲ್ಲರನ್ನೂ ಸಮನಾಗಿ ಪರಿಗಣಿಸಿದರೆ ಆಗ ಅದು ಉಳ್ಳವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳ ಇಲ್ಲದವರಿಗಿಂತಲೂ ಹೆಚ್ಚಿನ ಪ್ರಯೋಜನ ಪಡೆಯುವ ಸಾಮರ್ಥ್ಯ  ಒದಗಿಸುತ್ತದೆ.

  • ಸಮಾನತೆ ಎಂಬುದು ಕಡಿಮೆ ಸಮಾನತೆ ಇರುವವರ ಸ್ವಾತಂತ್ರ್ಯವನ್ನು ನಾಶಪಡಿಸುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ಭ್ರಾತೃತ್ವ ಎನ್ನುವುದು ಹೆಚ್ಚಿನ ಸಂತುಲನ ಮೂಡಿಸುವ ಶಕ್ತಿಯಾಗಿದೆ.