B S Yediyurappa and Karnataka HC 
ಸುದ್ದಿಗಳು

[ಬಿಎಸ್‌ವೈ ಪೋಕ್ಸೋ ಪ್ರಕರಣ] ಸಂತ್ರಸ್ತೆ ಹೇಳಿಕೆ ಸತ್ಯವಲ್ಲ ಎಂದಾದರೆ ಸಾಕ್ಷಿಗಳ ಹೇಳಿಕೆಯೂ ಸತ್ಯವಾಗದು: ಹೈಕೋರ್ಟ್‌

ಯಡಿಯೂರಪ್ಪನವರ ವಿರುದ್ಧ ಆರೋಪಿಸಿರುವ ವಿಚಾರಗಳು ನಿಜವಿದ್ದಿದ್ದರೆ ಸಂತ್ರಸ್ತೆಯು ಪೊಲೀಸ್‌ ಆಯುಕ್ತರ ಬಳಿ ಹೋಗಿದ್ದಾಗ ಅದನ್ನು ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸಿದ ಬಿಎಸ್‌ವೈ ಪರ ವಕೀಲರು.

Bar & Bench

“ಸಂತ್ರಸ್ತೆಯ ಹೇಳಿಕೆಯನ್ನು ಪರಮ ಸತ್ಯ ಎಂದು ಪರಿಗಣಿಸುವುದು ಬೇಡ ಎಂದಾದರೆ ನೀವು ಈಗ ಆಧರಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನೂ ಪರಮ ಸತ್ಯ ಎಂದು ಪರಿಗಣಿಸಲಾಗದು” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಪರ ವಕೀಲರನ್ನು ಕುರಿತು ಮೌಖಿಕವಾಗಿ ಹೇಳಿತು.

ಪೋಕ್ಸೊ ಪ್ರಕರಣ ರದ್ದತಿ ಕೋರಿ ಬಿಜೆಪಿಯ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಬಿಎಸ್‌ವೈ ಪರವಾಗಿ ಇಂದು ವಾದ ಮುಂದುವರಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಸಿಎಂ ಹುದ್ದೆ ತೊರೆದು ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನ ಬಳಿಗೆ ದೂರುದಾರೆ ಬಂದು ನೆರವು ಕೋರಿದರು. ಅದಕ್ಕೆ ನಾನು ಪೊಲೀಸ್‌ ಆಯುಕ್ತರ ಬಳಿ ಹೋಗುವಂತೆ ಸೂಚಿಸಿದ್ದೆ. ಈಗ ಆಕೆ ನನ್ನ ವಿರುದ್ಧ ಆರೋಪಿಸಿರುವ ವಿಚಾರಗಳು ನಿಜವಿದ್ದಿದ್ದರೆ ಪೊಲೀಸ್‌ ಆಯುಕ್ತರ ಬಳಿ ಹೋಗಿದ್ದಾಗ ಹೇಳಬಹುದಿತ್ತಲ್ಲ” ಎಂದು ಪ್ರಶ್ನಿಸಿದರು.

“ದೂರುದಾರೆಯು ರಾಜಕಾರಣಿಗಳು, ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಿಗೆ ದೂರು ನೀಡುವುದು ಹವ್ಯಾಸವಾಗಿತ್ತು. ಸಂತ್ರಸ್ತೆಯನ್ನು ಅನುಚಿತವಾಗಿ ಮುಟ್ಟಿದ್ದೇನೆ ಎಂಬ ಆರೋಪದ ಕುರಿತು ತನಿಖೆ ಮಾಡಿ, ಸಾಕ್ಷಿ ಸಂಗ್ರಹಿಸಲಾಗಿದೆ. ನನ್ನ (ಬಿಎಸ್‌ವೈ) ವಿರುದ್ಧದ ಆರೋಪಗಳನ್ನು ನಿರಾಕರಿಸಲು ನಾನು ಸಂತ್ರಸ್ತೆಯ ಹೇಳಿಕೆಯನ್ನು ನಿರಾಕರಿಸಿರುವ ಸಾಕ್ಷಿಗಳ ಹೇಳಿಕೆಯನ್ನೇ ಆಧರಿಸುತ್ತೇನೆ. ಇನ್ನು ಐಪಿಸಿ ಸೆಕ್ಷನ್‌ 204 ಮತ್ತು 214 ಅಡಿ ನನ್ನ ವಿರುದ್ಧದ ಆರೋಪಗಳು ಊರ್ಜಿತವಾಗುವುದಿಲ್ಲ” ಎಂದರು.

ವಾದ ಆಲಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ಅರ್ಜಿಯ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿತು.