ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸಲು ಅಗತ್ಯ ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಕರ್ನಾಟಕ ಹೈಕೋರ್ಟ್ ಶನಿವಾರ ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನ ಆಲಂ ಪಾಷಾ ಎಂಬವರು ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯ ವೇಳೆ ಪೀಠವು “ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲು ಸರ್ಕಾರಕ್ಕೆ ಇಷ್ಟೊಂದು ತಕರಾರು ಏಕೆ? ಆರೋಪಿಯೇನು ದೇಶ ಕಾಯುತ್ತಿದ್ದಾನೇ?” ಎಂದು ಮೌಖಿಕವಾಗಿ ಪ್ರಶ್ನಿಸಿತು.
“ತನಿಖೆಗೆ ಅನುಮತಿ ನೀಡುವುದಿಲ್ಲ ಎಂದಾದರೆ ಅದಕ್ಕೆ ಕಾರಣ ನೀಡಿ. ಆದರೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇಂತಹ ಕ್ರಮಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತವೆ” ಎಂದು ಪೀಠ ಅಸಮಾಧಾನವನ್ನು ಹೊರ ಹಾಕಿತು.
“ಪ್ರಕರಣ ದಾಖಲಿಸಲು ಇಷ್ಟೊಂದು ವಿರೋಧವೇಕೆ? ಲೋಕಾಯುಕ್ತ ಸಂಸ್ಥೆಯೇ ಪ್ರಕರಣ ದಾಖಲಿಸಲು ಅನುಮತಿ ಕೇಳುತ್ತಿದೆ. ಅದಕ್ಕೂ ಇಷ್ಟೊಂದು ವಿರೋಧವೇ? ಹಾಗಿದ್ದರೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಬಿಡಿ. ನಾಳೆ ಬೆಳಿಗ್ಗೆ ಬೀಗ ಹಾಕಿಬಿಡಿ” ಎಂದು ಪೀಠ ತೀವ್ರವಾಗಿ ಹೇಳಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ವಹೀದಾ ಅವರು “ಒಬ್ಬ ಆರೋಪಿಯ ವಿರುದ್ಧ ತನಿಖೆಗೆ ಅನುಮತಿ ನೀಡಲಾಗಿದೆ. ಮತ್ತೊಬ್ಬ ಆರೋಪಿ ಪ್ರಹ್ಲಾದ್ ಕಮ್ಮಾರ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಕಡತ ಮುಖ್ಯಮಂತ್ರಿ ಕಚೇರಿಯಲ್ಲಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿರುವುದರಿಂದ ಕಡತವನ್ನು ಅಲ್ಲಿಗೆ ಕಳುಹಿಸಲಾಗಿದೆ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಮುಖ್ಯಮಂತ್ರಿ ಕಚೇರಿಯಲ್ಲಿ ಕಡತ ಏಕೆ ಇದೆ? ಅನುಮತಿ ನೀಡುವುದು ಮುಖ್ಯಮಂತ್ರಿಗಳೇ? ಕಡತ ಮುಖ್ಯಮಂತ್ರಿ ಕಚೇರಿಯಲ್ಲಿ ಇರುವುದೇಕೆ?” ಎಂದು ಖಾರವಾಗಿ ಪ್ರಶ್ನಿಸಿತು.
ಪ್ರಹ್ಲಾದ್ ಕಮ್ಮಾರ್ ವಿರುದ್ಧ ತನಿಖೆ ನಡೆಸಲು ಅಗತ್ಯ ಅನುಮತಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರದ ವಕೀಲರು ಹಾಗೂ ಅಡ್ವೊಕೇಟ್ ಜನರಲ್ ಅಗತ್ಯ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿದ ಹೈಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.