Delhi HC 
ಸುದ್ದಿಗಳು

[ಎಸ್‌ಸಿ ವಿದ್ಯಾರ್ಥಿಗಳ ಆತ್ಮಹತ್ಯೆ] ಅಂಕಗಳೇ ಜೀವನದಲ್ಲಿ ಮುಖ್ಯವಲ್ಲ ಎಂದು ಐಐಟಿ ಕಲಿಸಬೇಕು: ದೆಹಲಿ ಹೈಕೋರ್ಟ್

ತಾರತಮ್ಯದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪೋಷಕರ ಆರೋಪಗಳನ್ನು ದೃಢೀಕರಿಸಲು ಯಾವುದೇ ಆಧಾರವಿಲ್ಲ ಎಂದ ನ್ಯಾಯಾಲಯ.

Bar & Bench

ಉತ್ತಮ ಅಂಕಗಳನ್ನು ಗಳಿಸುವುದು ಮಾತ್ರವೇ ಅತ್ಯಂತ ಮುಖ್ಯವಾದ ವಿಷಯವಲ್ಲ ಎಂದು ಯುವ ವಿದ್ಯಾರ್ಥಿಗಳಿಗೆ ಆಪ್ತಸಲಹೆ ನೀಡಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಹೇಳಿದೆ.

ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಸೇರಿದ ಇಬ್ಬರು ಐಐಟಿ ದೆಹಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಜನೀಶ್ ಭಟ್ನಾಗರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.

"ಈ ನ್ಯಾಯಾಲಯಕ್ಕೆ ಮೃತರ ಪೋಷಕರ ಭಾವನೆ ಅರ್ಥವಾಗುತ್ತದೆ. ಜೀವನದ ಪ್ರತಿಯೊಂದು ಅಂಶದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಲು ಯುವ ಮನಸ್ಸುಗಳ ಮೇಲೆ ಒತ್ತಡ ಹೇರುವ ಮೂಲಕ ಅವರು ಇಂತಹ ದುರಂತ ಅಂತ್ಯ ಕಾಣುವಂತಹ ಪ್ರವೃತ್ತಿಗೆ ಕಾರಣವಾಗುವ ಅಂಶಗಳನ್ನು ನ್ಯಾಯಾಲಯವು ತೀವ್ರವಾಗಿ ನಿರುತ್ಸಾಹಗೊಳಿಸುತ್ತದೆ. ಐಐಟಿಯ ಬೋಧಕರು ಮತ್ತು ಇತರ ಸಿಬ್ಬಂದಿ ಸದಸ್ಯರು ಪ್ರಜ್ಞಾಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಲು, ಪ್ರೋತ್ಸಾಹಿಸಲು, ಪ್ರೇರೇಪಿಸಲು ಮತ್ತು ಉತ್ತೇಜಿಸಲು ಪ್ರಯತ್ನ ಮಾಡಲು ಇದು ಸೂಕ್ತ ಸಮಯವಾಗಿದೆ. ಉತ್ತಮ ಅಂಕಗಳಿಸುವುದು ಮತ್ತು ಅತ್ಯುತ್ತಮ ಪ್ರದರ್ಶನ ನೀಡುವುದು ಮುಖ್ಯವಾದರೂ ಅದು ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವಲ್ಲ . ಉತ್ತಮ ಪ್ರದರ್ಶನ ನೀಡುವ ಒತ್ತಡಕ್ಕೆ ಒಳಗಾಗದೆ ಅತ್ಯುತ್ತಮವಾದುದನ್ನು ನೀಡಬಹುದು ಎಂಬುದನ್ನು ಯುವ ಮನಸ್ಸುಗಳು ಅರ್ಥಮಾಡಿಕೊಳ್ಳುವುದು ಮುಖ್ಯ" ಎಂದು ನ್ಯಾಯಾಲಯ ಹೇಳಿದೆ.

Justice Rajnish Bhatnagar

ಐಐಟಿ ದೆಹಲಿಯ ಬೋಧಕರು / ಸಿಬ್ಬಂದಿಯಿಂದ ತಮ್ಮ ಮಕ್ಕಳು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬುದು ಪೋಷಕರ ಆರೋಪವಾಗಿದೆ. ಅಧ್ಯಾಪಕರು ನೈಜ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ಪೊಲೀಸ್ ಅಧಿಕಾರಿಗಳು ದೆಹಲಿಯ ಐಐಟಿ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಮತ್ತು ಎಲ್ಲಾ ಪುರಾವೆಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲು ಉದ್ದೇಶಪೂರ್ವಕವಾಗಿ ವಿಳಂಬ ತಂತ್ರಗಳನ್ನು ಅನುಸರಿಸಿದ್ದಾರೆ. ಹೀಗಾಗಿ, ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಮೃತ ವಿದ್ಯಾರ್ಥಿಗಳಿಬ್ಬರೂ ಅನೇಕ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದು, ಉತ್ತಮ ಪ್ರದರ್ಶನ ನೀಡುವ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅರ್ಜಿದಾರರು ಮಾಡಿದ ಆರೋಪಗಳನ್ನು ದೃಢೀಕರಿಸಲು ಸಾಧ್ಯವಿಲ್ಲ ಮತ್ತು ಅವುಗಳನ್ನು ದೃಢೀಕರಿಸಲು ಯಾವುದೇ ಅಂಶಗಳು ಇಲ್ಲ ಎಂದು ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿತು.

[ತೀರ್ಪು ಓದಿ]

Amit Kumar & Ors v Union of India & Ors.pdf
Preview