Yash X corp
ಸುದ್ದಿಗಳು

ಟಾಕ್ಸಿಕ್‌ ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ರಮವಾಗಿ ಮರ ತೆರವು: ನ್ಯಾಯಾಲಯದ ನಿರ್ದೇಶನದ ಬೆನ್ನಿಗೇ ಎಫ್‌ಐಆರ್‌ ದಾಖಲು

ನ್ಯಾಯಾಲಯದ ನಿರ್ದೇಶನದ ಬೆನ್ನಿಗೇ ಅರಣ್ಯ ಇಲಾಖೆಯು ಮೂರು ಮಂದಿಯನ್ನು ಆರೋಪಿಗಳನ್ನಾಗಿಸಿ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್‌ 24(ಜಿ) ಅಡಿ ಮಂಗಳವಾರ ಎಫ್‌ಐಆರ್‌ ದಾಖಲಿಸಿದೆ.

Bar & Bench

ನಟ ಯಶ್‌ ಪ್ರಧಾನ ಭೂಮಿಕೆಯಲ್ಲಿರುವ ʼಟಾಕ್ಸಿಕ್‌ʼ ಸಿನಿಮಾದ ಶೂಟಿಂಗ್‌ಗಾಗಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿನ ಮರಗಳನ್ನು ಕಾನೂನುಬಾಹಿರವಾಗಿ ಕತ್ತರಿಸಿರುವ ಆರೋಪದ ಸಂಬಂಧ ಚಿತ್ರ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಈಚೆಗೆ ಆದೇಶಿಸಿದೆ. ಈ ಬೆನ್ನಿಗೇ ಅರಣ್ಯ ಇಲಾಖೆಯು ಘಟನೆಯ ಸಂಬಂಧ ಎಫ್‌ಐಆರ್‌ ದಾಖಲಿಸಿದೆ.

ಪೀಣ್ಯಾ ವಲಯದ ಅರಣ್ಯಾಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ಎಂಟನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಿ ದೀಪಾ ಇತ್ತೀಚೆಗೆ ಪುರಸ್ಕರಿಸಿದ್ದಾರೆ.

ಪೀಣ್ಯಾ ಪ್ರದೇಶದಲ್ಲಿರುವ ಸರ್ವೇ ನಂಬರ್‌ 2ರಲ್ಲಿನ ಪ್ರದೇಶವು ಸಂರಕ್ಷಿತ ಅರಣ್ಯವಾಗಿದ್ದು, ಅಲ್ಲಿ ಬೆಳೆದಿದ್ದ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗಿದೆ ಎಂದು ಸಂಬಂಧಿತ ಅಧಿಕಾರಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಕ್ಸಿಕ್‌ ಸಿನಿಮಾ ನಿರ್ಮಾಪಕರಾದ ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ, ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರು ಮತ್ತು ಎಚ್‌ಎಂಟಿಯ ಪ್ರಧಾನ ವ್ಯವಸ್ಥಾಪಕರನ್ನು ಆರೋಪಿಗಳನ್ನಾಗಿ ಪ್ರಕರಣ ದಾಖಲಿಸುವಂತೆ ನವೆಂಬರ್‌ 6ರಂದು ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಾಲಯದ ನಿರ್ದೇಶನದ ಬೆನ್ನಿಗೇ ಅರಣ್ಯ ಇಲಾಖೆಯು ಮೇಲಿನ ಮೂರು ಸಂಸ್ಥೆ/ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್‌ 24(ಜಿ) ಅಡಿ ಮಂಗಳವಾರ ಎಫ್‌ಐಆರ್‌ ದಾಖಲಿಸಿದೆ. ಕೆವಿಎನ್‌ ಪ್ರೊಡಕ್ಷನ್‌ಗೆ ವೆಂಕಟ್‌ ಕೆ. ನಾರಾಯಣ್‌ ಮತ್ತು ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ಗೆ ಯಶ್‌ ಮಾಲೀಕತ್ವ ಇದೆ.