Karnataka High Court 
ಸುದ್ದಿಗಳು

ದೇವರಾಯನದುರ್ಗ ಮೀಸಲು ಅರಣ್ಯದಲ್ಲಿ ಅಕ್ರಮ ಒತ್ತುವರಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸಿ, ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ವಕ್ಕೋಡಿ ಗ್ರಾಮದ ಮಾರಣ್ಣ ಪಾಳೆಗಾರ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಸಂಬಂಧ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ತಹಶೀಲ್ದಾರ್, ತುಮಕೂರು ಭೂ ದಾಖಲೆಗಳ ಸಹಾಯಕ ನಿರ್ದೇಶಕ, ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಖಾಸಗಿ ವ್ಯಕ್ತಿ ವಡ್ಡರಹಳ್ಳಿ ನಿವಾಸಿ ಜೆ ಶ್ವೇತಾಕುಮಾರಿ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿ, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಎಲ್ಲಾ ಪ್ರತಿವಾದಿಗಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಬಿ ವಿ ಕೃಷ್ಣ ಅವರು ಅವರು, ಮೀಸಲು ಅರಣ್ಯ ಪ್ರದೇಶದ ಒತ್ತುವರಿ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಸಿವಿಲ್ ವ್ಯಾಜ್ಯವೊಂದರ ನೆಪ ಹೇಳಿ ಅರಣ್ಯಾಧಿಕಾರಿಗಳು ಮೌನವಾಗಿದ್ದಾರೆ. ಅಸಲಿಗೆ ಅರಣ್ಯಾಧಿಕಾರಿಗಳು ಹೇಳುತ್ತಿರುವ ಸಿವಿಲ್ ವ್ಯಾಜ್ಯಕ್ಕೂ, ಒತ್ತುವರಿಗೂ ಸಂಬಂಧವಿಲ್ಲ. ಆದ್ದರಿಂದ ಒತ್ತುವರಿ ತೆರವಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿಯ ವ್ಯಾಪ್ತಿಯ ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ 3 ಎಕರೆ 20 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿ ಜೆ ಶ್ವೇತಕುಮಾರಿ ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಾಣ ಮಾಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ಕೋರಲಾಗಿದೆ.

ಅದೇ ರೀತಿ ಶ್ವೇತಕುಮಾರಿ ಅವರು ಮುತ್ತಸಂದ್ರ ಗ್ರಾಮದ ಸರ್ವೆ ನಂಬರ್ 17 ಹಾಗೂ ವಡ್ಡರಹಳ್ಳಿ ಗ್ರಾಮದ ಸರ್ವೆ ನಂಬರ್ 26ರ ಗೋಮಾಳ ಜಾಗದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.