ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿ ಮಾಡುವ ಸಂದರ್ಭದಲ್ಲಿ ವಿಚಾರಣೆ ಮುಂದೂಡುವುದು ಸರಿಯಲ್ಲ ಎಂದು ಲೋಕಾಯುಕ್ತ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಎಚ್ಚರಿಸಿರುವ ಕರ್ನಾಟಕ ಹೈಕೋರ್ಟ್, ಅಕ್ರಮ ಕಬ್ಬಿಣದ ಅದಿರು ಮಾರಾಟಕ್ಕೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಅವರ ವಿರುದ್ಧ ದಾಖಲಾಗಿರುವ 16 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದೆ.
ಸಚಿವ ನಾಗೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿರುವ 16 ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಸಕದಸ್ಯ ಪೀಠವು ವಿಚಾರಣೆ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಚಿವ ನಾಗೇಂದ್ರ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ ಅವರು “ಒಟ್ಟು 16 ಪ್ರಕರಣಗಳು ಇಂದು ವಿಚಾರಣೆಗೆ ಪಟ್ಟಿಯಾಗಿದ್ದು, 15 ಪ್ರಕರಣಗಳನ್ನು ವಿಶೇಷ ತನಿಖಾ ದಳ, ಉಳಿದ ಒಂದನ್ನು ಸಿಐಡಿ ತನಿಖೆ ನಡೆಸುತ್ತಿವೆ. ಸಿಐಡಿಯನ್ನು ರಾಜ್ಯ ಸರ್ಕಾರ ಪ್ರತಿನಿಧಿಸುತ್ತಿದೆ. ಪ್ರಕರಣಗಳು ಯಾವ ಹಂತದಲ್ಲಿವೆ, ಏನೆಲ್ಲಾ ಆರೋಪಗಳು ಎಂಬ ಪಟ್ಟಿಯನ್ನು ಪೀಠಕ್ಕೆ ಸಲ್ಲಿಸಲಾಗಿದೆ” ಎಂದರು.
ಆಗ ಲೋಕಾಯುಕ್ತ ಎಸ್‌ಐಟಿ ಪ್ರತಿನಿಧಿಸಿದ್ದ ವಕೀಲ ಬಿ ಎಸ್ ಪ್ರಸಾದ್ ಅವರು “ಎಂಟು ಪ್ರಕರಣಗಳಲ್ಲಿ ಆಕ್ಷೇಪಣೆ ಸಿದ್ಧವಾಗಿದೆ. ಉಳಿದವಕ್ಕೆ ಆಕ್ಷೇಪಣೆ ಸಿದ್ಧಪಡಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದಕ್ಕೆ ಪೀಠವು “ಮುಂದಿನ ವಿಚಾರಣೆಯ ವೇಳೆಗೆ ವಾದ ಪೂರ್ಣಗೊಳಿಸಬೇಕು. (ವಿಚಾರಣಾಧೀನ ನ್ಯಾಯಾಲಯದಲ್ಲಿ) ಆರೋಪ ನಿಗದಿ ಮಾಡುವ ಸಂದರ್ಭದಲ್ಲಿ ಅದನ್ನು ಮುಂದೂಡುವುದು ಸರಿಯಲ್ಲ. ನಿಗದಿತ ಸಮಯದಲ್ಲಿ ವಾದ ಮಂಡಿಸದಿದ್ದರೆ ಸೂಕ್ತ ಆದೇಶ ಮಾಡಬೇಕಾಗುತ್ತದೆ” ಎಂದು ಮೌಖಿಕವಾಗಿ ಎಚ್ಚರಿಸಿತು.
ಅಂತಿಮವಾಗಿ ಪೀಠವು ಅರ್ಜಿದಾರರ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ವಾದದ ಸಾರಾಂಶವನ್ನು ಸಲ್ಲಿಸಬೇಕು. ಆರೋಪ ನಿಗದಿಗೆ ಸಂಬಂಧಿಸಿದಂತೆ ಹಿಂದೆ ಮಾಡಿರುವ ವಿಚಾರಣೆ ಮುಂದೂಡಿಕೆ ಆದೇಶವು ಮುಂದಿನ ವಿಚಾರಣೆವರೆಗೆ ಮುಂದುವರಿಯಲಿದೆ ಎಂದು ಆದೇಶಿಸಿ, ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.
ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯಿದೆ 1957ರ ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಸಚಿವ ನಾಗೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಸಂಬಂಧ ಆರೋಪ ಪಟ್ಟಿಯನ್ನೂ ವಿಚಾರಣಾಧೀನ ನ್ಯಾಯಾಲಯಗಳಿಗೆ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದೆ. ಈ ಪ್ರಕರಣಗಳು ವಿವಿಧ ಹಂತದಲ್ಲಿ ವಿಚಾರಣೆಗೆ ಒಳಪಟ್ಟಿವೆ. ಇವುಗಳನ್ನು ವಜಾ ಮಾಡುವಂತೆ ಕೋರಿ ಸಚಿವ ನಾಗೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.