ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಶಾಸಕ ಕೆ ಎಸ್ ಲಿಂಗೇಶ್ ಒಳಗೊಂಡು 16 ಮಂದಿಯ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಬೇಲೂರು ಪೊಲೀಸರು ಏಪ್ರಿಲ್ 9ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ದೂರು ಆಧರಿಸಿ ಶಾಸಕ ಹಾಗೂ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿ ಸಮಿತಿಯ (ಭೂ ಮಂಜೂರಾತಿ) ಅಧ್ಯಕ್ಷರಾಗಿದ್ದ ಕೆ ಎಸ್ ಲಿಂಗೇಶ್, ಸಮಿತಿಯ ಸದಸ್ಯರಾಗಿದ್ದ ಕುಮಾರ್ ಜಿ ಕೆ ಅಲಿಯಾಸ್ ಕೆಂಚೇಗೌಡ, ಶೈಲಾ ಮೋಹನ್, ಟಿ ಆರ್ ರಮೇಶ್ ಅಲಿಯಾಸ್ ರುದ್ರಯ್ಯ, ಪರ್ವತಗೌಡ ಅಲಿಯಾಸ್ ಕಾಳೇಗೌಡ, ಚೇತನಾ, ಈಶ್ವರ ಪ್ರಸಾದ್, ಎಸ್ ಎನ್ ಲಿಂಗೇಶ್, ರಂಗತ್, ಭಾಗ್ಯಮ್ಮ, ಸಮಿತಿಯ ಕಾರ್ಯದರ್ಶಿಗಳು ಹಾಗೂ ತಹಶೀಲ್ದಾರ್‌ಗಳಾದ ಬಿ ಎ ಜಗದೀಶ್, ಎಚ್ ಎಸ್ ಪರಮೇಶ್, ಜೆ ಉಮೇಶ್, ಬಿ ಎಸ್ ಪುಟ್ಟಶೆಟ್ಟಿ, ಯು ಮೋಹನ್ ಕುಮಾರ್ ಅವರು ಕ್ರಮವಾಗಿ 1-15 ಆರೋಪಿಗಳಾಗಿದ್ದಾರೆ. ಹಾಸನದ ಅನಾಮಧೇಯ ವ್ಯಕ್ತಿಯನ್ನು 16ನೇ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಭೂಮಿಯನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಬೇಲೂರು ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿ ಮೊದಲ ಆರೋಪಿ, ಶಾಸಕ ಲಿಂಗೇಶ್ ಅವರು 750 ಎಕರೆಗಿಂತ ಹೆಚ್ಚಿನ ಪ್ರಮಾಣದ ಸರ್ಕಾರಿ ಜಮೀನುಗಳ ಅನುದಾನವನ್ನು ಅನುಮೋದಿಸಿದ್ದಾರೆ. ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ದೃಷ್ಟಿಸಲು ಸಹರಿಸುವ ಮೂಲಕ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ ಎನ್ ರುದ್ರೇಶ್ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈಚೆಗೆ ಕೋಲಾರದ ರಾಜಣ್ಣ ಅವರ ಖಾಸಗಿ ದೂರನ್ನು ಪರಿಗಣಿಸಿದ್ದ ನ್ಯಾಯಾಲಯವು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿ, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 156 (3)ರ ಅನುಸಾರ ತನಿಖೆ ನಡೆಸಿ 2023ರ ಜುಲೈ 7ಕ್ಕೆ ವರದಿ ಸಲ್ಲಿಸುವಂತೆ ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿತ್ತು.