ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ 
ಸುದ್ದಿಗಳು

'ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇಕೆ ಇ ಡಿ ತನಿಖೆ ಇಲ್ಲ?' ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರದ ಪ್ರಶ್ನೆ

Bar & Bench

ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ವಿಶೇಷವೆಂದರೆ, ಜಾರಿ ನಿರ್ದೇಶನಾಲಯದ ತನಿಖೆ ರಾಜಕೀಯ ಪ್ರೇರಿತವಾಗಿದ್ದು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಸಮನ್ಸ್ ಮೂಲಕ ತನಿಖೆ ನಡೆಸಲು ಯತ್ನಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಸೋಮವಾರ ದೂರಿತು.

ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ , ಹೆಚ್ಚಿನ ಸಂಖ್ಯೆಯ ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿರುವ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇ ಡಿ ಏಕೆ ಇಂತಹ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಇ ಡಿಗೆ ಅಷ್ಟೊಂದು ಕಾಳಜಿ ಇದ್ದರೆ, ನೂರಾರು ಅಕ್ರಮ ಗಣಿಗಾರಿಕೆ ಪ್ರಕರಣಗಳಿರುವ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ವಕೀಲ ದವೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

ಬೇರೆ ರಾಜ್ಯಗಳಲ್ಲಿಯೂ ಇ ಡಿ ಇದೇ ರೀತಿಯ ಕ್ರಮ ಕೈಗೊಂಡರೆ ತನ್ನ ಅರ್ಜಿ ಹಿಂತೆಗೆದುಕೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ತಾನು ತಿಳಿಸುವುದಾಗಿ ಅವರು ಹೇಳಿದರು.

ನ್ಯಾಯಮೂರ್ತಿಗಳಾದ ಎಸ್ ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರಿದ್ದ ಪೀಠದೆದುರು ವಾದ ಮಂಡಿಸಿದರು. ಆಗ ನ್ಯಾಯಾಲಯ ಮಧ್ಯಂತರ ಪರಿಹಾರದ ವಿಚಾರವಾಗಿ ನಾಳೆ (ನವೆಂಬರ್ 28ರ ಮಂಗಳವಾರ) ಆದೇಶ ಹೊರಡಿಸುವುದಾಗಿ ತಿಳಿಸಿತು.

ಅಲ್ಲದೆ ಇಡಿಗೆ ತಮಿಳುನಾಡು ಸರ್ಕಾರದ ಸಹಾಯ ಪಡೆಯುವ ಎಲ್ಲಾ ಹಕ್ಕು ಇದೆ. ಆದರೆ ಅದು ತಮಿಳುನಾಡಿನಲ್ಲೆಡೆ ಕಳೆದ ಐದು ವರ್ಷಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ದಾಖಲಾದ ಎಫ್‌ಐಆರ್‌ಗಳ ಮಾಹಿತಿ ನೀಡಿ ಎಂಬ ಸಾಮಾನ್ಯ ಮಾಹಿತಿ ಕೇಳಿದಾಗ ಕಷ್ಟವಾಗುತ್ತದೆ ಎಂದು ಪೀಠ ಮೌಖಿಕವಾಗಿ ತಿಳಿಸಿತು. ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ ಆರ್‌ ಎಲ್‌ ಸುಂದರೇಶನ್‌ ಅವರು ತಮಿಳುನಾಡು ಸರ್ಕಾರದ ಪರ ಮನವಿಗೆ ವಿರೋಧ ವ್ಯಕ್ತಪಡಿಸಿದರು.