High Court of Karnataka
High Court of Karnataka 
ಸುದ್ದಿಗಳು

ವನ್ಯಜೀವಿ ಧಾಮದ ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರ ಅವಕಾಶ ನೀಡಿದ ಹೈಕೋರ್ಟ್‌

Bar & Bench

ಪ್ರಸಿದ್ಧ ಸೋಮೇಶ್ವರ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಮತ್ತು ಪರಿಸರ ಸೂಕ್ಷ್ಮ ವಲಯದ (ಇಎಸ್‌ಜಡ್‌) ಅಧಿಸೂಚನೆ ಉಲ್ಲಂಘಿಸಿ ಯೂನಿಟಿ ರಾಕ್‌ ಇಂಡಸ್ಟ್ರೀಸ್‌ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದಕ್ಕೆ ನೀಡಲಾಗಿರುವ ಅನುಮತಿ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಯೂನಿಟಿ ರಾಕ್‌ ಇಂಡಸ್ಟ್ರೀಸ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

ಉಡುಪಿ ಜಿಲ್ಲೆಯ ಕುಕ್ಕೇಹಳ್ಳಿ ಚೋಲು ಬೆಟ್ಟು ನಿವಾಸಿ ಸಂಜೀವ್‌ ನಾಯ್ಕ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪರಿಸರ ಸೂಕ್ಷ್ಮ ವಲಯದಿಂದ ಹೊರಗಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಂಪೆನಿಗೆ ಪರವಾನಗಿ ನೀಡಲಾಗಿದೆ. ಗುತ್ತಿಗೆ ಅನುಮತಿ ನೀಡುವಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದು ಸರ್ಕಾರದ ಸೂಚನೆಯ ಅನ್ವಯ ವಕೀಲರು ತಿಳಿಸಿದ್ದು, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದ್ದು, ಯೂನಿಟಿ ರಾಕ್‌ ಇಂಡಸ್ಟ್ರೀಸ್‌ ಪರ ವಕೀಲ ಕೆ ಪ್ರಸನ್ನ ಶೆಟ್ಟಿ ಅವರಿಗೂ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಅವಕಾಶ ಮಾಡಿಕೊಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಜೂನ್‌ 22ಕ್ಕೆ ಮುಂದೂಡಿದೆ.

2020ರ ಆಗಸ್ಟ್‌ 28ರ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಉಲ್ಲಂಘಿಸಿ ಉಡುಪಿಯ ನಲ್ಕೂರು ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಯೂನಿಟಿ ರಾಕ್‌ ಇಂಡಸ್ಟ್ರೀಸ್‌ಗೆ ನೀಡಲಾಗಿರುವ ಗುತ್ತಿಗೆ ಅನುಮತಿ ಮತ್ತು ಪರವಾನಗಿಯನ್ನು ರದ್ದುಪಡಿಸಬೇಕು. ಗಣಿಗಾರಿಕೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರೆ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಲ್ಲದೇ, ಸುಣ್ಣದ ಕಲ್ಲು ಗಣಿಗಾರಿಕೆಯಿಂದ ಮಾಲಿನ್ಯವಾಗುತ್ತಿದ್ದು, ಇದರಿಂದ ನಲ್ಕೂರು ಗ್ರಾಮಸ್ಥರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಯೂನಿಟಿ ರಾಕ್‌ ಇಂಡಸ್ಟ್ರೀಸ್‌ ಕಾನೂನುಬಾಹಿರ ಗಣಿಗಾರಿಕೆಯಿಂದ ಸೋಮೇಶ್ವರ ವನ್ಯಜೀವಿ ಧಾಮದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇಲ್ಲಿ ಹುಲಿ, ಚಿರತೆ, ಕರಿ ಚಿರತೆ, ಕಾಡು ನಾಯಿ ಸೇರಿದಂತೆ ಅಪರೂಪದ ವನ್ಯಜೀವಿಗಳು ವಾಸಿಸುತ್ತಿದ್ದು, ಅವುಗಳ ಬದುಕಿಗೆ ಕಂಟಕ ಉಂಟಾಗಿದೆ. ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಪಶ್ಚಿಮ ಘಟ್ಟದ ಕ್ಲಸ್ಟರ್‌ ಆಗಿ ಸೋಮೇಶ್ವರ ವನ್ಯಜೀವಿ ಧಾಮವನ್ನು ಘೋಷಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹೀಗಾಗಿ, ಗಣಿಗಾರಿಕೆ ನಡೆಸಲು ಯೂನಿಟಿ ರಾಕ್‌ ಇಂಡಸ್ಟ್ರೀಸ್‌ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಮತ್ತು ಗಣಿಗಾರಿಕೆ ನಡೆಸದಂತೆ ನಿರ್ಬಂಧಿಸಬೇಕು. ಸೋಮೇಶ್ವರ ವನ್ಯಜೀವಿ ಧಾಮದ ಸುತ್ತಲಿನ 7.8 ಕಿ ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ಮಾಡಿಕೊಡಬಾರದು ಮತ್ತು ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯನ್ನು ಜಾರಿ ಮಾಡಬೇಕು. ಗಣಿಗಾರಿಕೆ ಪರವಾನಗಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮುಂದುವರೆದು, ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ಪುನರ್‌ ನವೀಕರಣ ಮತ್ತು ಸಂರಕ್ಷಣೆಗಾಗಿ ತಲಾ ಐದು ಲಕ್ಷ ರೂಪಾಯಿಗಳನ್ನು ಸೋಮೇಶ್ವರ ವನ್ಯಜೀವಿ ಧಾಮದ ನಿರ್ದೇಶಕರ ಖಾತೆಯಲ್ಲಿ ಠೇವಣಿ ಇಡಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮತ್ತು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಬೇಕು. ಅಕ್ರಮ ಗಣಿಗಾರಿಕೆ, ಕಟ್ಟಡ ನಿರ್ಮಾಣ ಕಲ್ಲುಗಳ ಸಂಗ್ರಹದ ಮೂಲಕ ನಲ್ಕೂರು ಗ್ರಾಮಸ್ಥರ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಮತ್ತು ಸೋಮೇಶ್ವರ ವನ್ಯಜೀವಿ ಧಾಮಕ್ಕೆ ಧಕ್ಕೆ ಉಂಟು ಮಾಡಿರುವ ಯೂನಿಟಿ ರಾಕ್‌ ಇಂಡಸ್ಟ್ರೀಸ್‌ಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಅರ್ಜಿದಾರರನ್ನು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಮತ್ತು ವಕೀಲೆ ಪ್ರಿಯಾಂಕಾ ಯಾವಗಲ್‌ ಪ್ರತಿನಿಧಿಸಿದ್ದಾರೆ.