MLA B Nagendra, Gali Janardana Reddy and B V Srinivasa Reddy

 
ಸುದ್ದಿಗಳು

[ಅಕ್ರಮ ಗಣಿಗಾರಿಕೆ] ಶಾಸಕ ನಾಗೇಂದ್ರ ಹಾಗೂ ಗಾಲಿ ಆಪ್ತರ ವಿರುದ್ಧ ಮತ್ತೊಂದು ಕ್ರಿಮಿನಲ್‌ ದೂರು ದಾಖಲಿಸಲು ಆದೇಶ

ಈಗಲ್‌ ಟ್ರೇಡರ್ಸ್‌ ಹಾಗೂ ಅದರ ಪಾಲುದಾರರಾದ ಶಾಸಕ ನಾಗೇಂದ್ರ ಮತ್ತು ನಾಗರಾಜ್‌ ಅವರು ರಾಜ್ಯದ ಬೊಕ್ಕಸಕ್ಕೆ ₹3 ಕೋಟಿ ರೂಪಾಯಿ ಹಾಗೂ ಶ್ರೀನಿವಾಸ್‌ ರೆಡ್ಡಿ ಸುಮಾರು ₹24 ಲಕ್ಷ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

Siddesh M S

ಅಕ್ರಮ ಗಣಿಗಾರಿಕೆಯ ಉರುಳು ಬಿಗಿಗೊಳ್ಳುತ್ತಿದ್ದು ಈಗಲ್‌ ಟ್ರೇಡರ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಮತ್ತು ಅದರ ಪಾಲುದಾರರಾದ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಮತ್ತು ಕೆ ನಾಗರಾಜ್‌ ಅಲಿಯಾಸ್‌ ಸ್ವಸ್ತಿಕ್‌ ನಾಗರಾಜ್‌ ವಿರುದ್ಧ ಹಾಗೂ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮ ಗಣಿಗಾರಿಕೆಯ ರೂವಾರಿ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪೆನಿಯ ನಿರ್ದೇಶಕ ಹಾಗೂ ಶ್ರೀ ಮಿನರಲ್ಸ್‌ ಗಣಿ ಕಂಪೆನಿಯ ಪಾಲುದಾರನಾದ ಬಿ ವಿ ಶ್ರೀನಿವಾಸ್‌ ಮತ್ತು ಇತರರ ವಿರುದ್ಧ ಮತ್ತೊಂದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಎಲ್ಲಾ ಆರೋಪಿಗಳಿಗೆ ಈಚೆಗೆ ಸಮನ್ಸ್‌ ಜಾರಿ ಮಾಡಿದೆ.

ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸ್‌ ವರಿಷ್ಠಾಧಿಕಾರಿ ನೀಡಿರುವ ಖಾಸಗಿ ದೂರಿನ ಅನ್ವಯ ವಿಚಾರಣೆ ನಡೆಸಿರುವ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಆದೇಶ ಮಾಡಿದ್ದಾರೆ.

“ಆರೋಪಿಗಳ ವಿರುದ್ಧ ತನಿಖಾಧಿಕಾರಿ ಸಲ್ಲಿಸಿರುವ ದಾಖಲೆಗಳಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್‌) ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಮೇಲ್ನೋಟಕ್ಕೆ ಸಂಜ್ಞೆಯ ಪರಿಗಣನೆಗೆ (ಕಾಗ್ನಿಜೆನ್ಸ್‌) ತೆಗೆದುಕೊಳ್ಳುವ ಅಂಶಗಳು ಕಂಡು ಬಂದಿವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ರೂವಾರಿ

2009-2020ರ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗಾಲಿ ಜನಾರ್ದನ ರೆಡ್ಡಿ ಆಪ್ತ ಸಹಾಯಕ ಹಾಗೂ ದೇವಿ ಎಂಟರ್‌ಪ್ರೈಸಸ್‌ನ ಪಾಲುದಾರ ಕೆ ಎಂ ಅಲಿ ಖಾನ್‌, ಮಧುಶ್ರೀ ಎಂಟರ್‌ಪ್ರೈಸಸ್‌ನ ಪಾಲುದಾರ ಮಧುಕುಮಾರ್‌ ವರ್ಮಾ, ಕೆ ವಿ ನಾಗರಾಜ್‌ ಅಲಿಯಾಸ್‌ ಸ್ವಸ್ತಿಕ್‌ ನಾಗರಾಜ್‌, ಖಾರದಪುಡಿ ಮಹೇಶ್‌ ಅಲಿಯಾಸ್‌ ಕೆ ಮಹೇಶ್‌ ಕುಮಾರ್‌, ದಾದಾಪೀರ್‌, ಈಗಲ್‌ ಟ್ರೇಡರ್ಸ್‌ ಮತ್ತು ಲಾಜಿಸ್ಟಿಕ್ಸ್‌ನ ಪಾಲುದಾರ ಬಿ ನಾಗೇಂದ್ರ ಮತ್ತಿತರರ ಮನೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಡೀ ಹಗರಣದ ರೂವಾರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಾಗಿದ್ದು, ಅವರ ಜೊತೆ ಆರೋಪಿಗಳಾದ ನಾಗೇಂದ್ರ, ನಾಗರಾಜ್‌ ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳು, ಗೋಪಾಲಕೃಷ್ಣ ಮತ್ತು ಅವರ ಪುತ್ರ ಪ್ರಶಾಂತ್‌ ಅವರಿಗೆ ಸೇರಿದ್ದ ಲಕ್ಷ್ಮಿನಾರಾಯಣ ಮೈನಿಂಗ್‌ ಕಂಪೆನಿಯಿಂದ ಅಕ್ರಮವಾಗಿ ಕಬ್ಬಿಣದ ಅದಿರು ಹೊರತೆಗೆದು ಸಾಗಣೆ ಮಾಡಲು ಅದನ್ನು ದೇವಿ ಎಂಟರ್‌ಪ್ರೈಸಸ್‌ ಮತ್ತಿತರ ಗಣಿ ಕಂಪೆನಿಗಳ ಜೊತೆ ಸೇರಿ ಮಾರಾಟ ಮಾಡಲು ಪಿತೂರಿ ನಡೆಸಿದ್ದರು.

ಲಕ್ಷ್ಮಿ ನಾರಾಯಣ ಮೈನಿಂಗ್‌ ಕಂಪೆನಿಗೆ ಸೇರಿದ್ದ ಪ್ರದೇಶವನ್ನು ಮೇಲೆ ಆರೋಪಿಸಲಾದ ಮೈನಿಂಗ್‌ ಕಂಪೆನಿಗಳು ಮತ್ತು ವ್ಯಕ್ತಿಗಳು ತಮ್ಮ ಹಿಡಿತಕ್ಕೆ ಪಡೆದು ವ್ಯಾಪಕವಾಗಿ ಗಣಿಗಾರಿಕೆ ನಡೆಸಿದ್ದರು. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಪಾರ ತೆರಿಗೆ ನಷ್ಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

2009ರ ನವೆಂಬರ್‌ನಿಂದ 2020ರ ಜೂನ್‌ ಅವಧಿಯಲ್ಲಿ 19,48,521 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ಹೊರತೆಗೆದು ಸಾಗಣೆ ಮಾಡಲಾಗಿತ್ತು. ಇಲ್ಲಿ ಕಳವು, ದುರ್ಬಳಕೆಯ ಜೊತೆಗೆ ಸರ್ಕಾರಕ್ಕೆ ಪ್ರತಿ ಮೆಟ್ರಿಕ್‌ ಟನ್‌ಗೆ 2,500 ರೂಪಾಯಿಯಂತೆ ₹4,87,06,27,500 ಕೋಟಿ ಜೊತೆಗೆ ರಾಜಧನ ಮತ್ತು ತೆರಿಗೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ನಾಗೇಂದ್ರರಿಂದ ಬೊಕ್ಕಸಕ್ಕೆ ₹3 ಕೋಟಿ ತೆರಿಗೆ ನಷ್ಟ

2009ರ ಫೆಬ್ರವರಿ 5ರಂದು ಆರೋಪಿಗಳಾದ ನಾಗೇಂದ್ರ, ನಾಗರಾಜ್‌ ಮತ್ತು ಈಗಲ್‌ ಟ್ರೇಡರ್ಸ್‌ ಸಂಸ್ಥೆಯು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ, ರಾಜಧನ ಮತ್ತು ತೆರಿಗೆ ಪಾವತಿಸದೇ ಟಿಬಿಎಸ್‌ ಲಾಜಿಸ್ಟಿಕ್ಸ್‌ಗೆ 29800 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಾಟ ಮಾಡಿತ್ತು. ಟಿಬಿಎಸ್‌ ಲಾಜಿಸ್ಟಿಕ್ಸ್‌ ಸಂಸ್ಥೆಯು 27279.49 ಕಬ್ಬಿಣದ ಅದಿರನ್ನು ಲಕ್ಷ್ಮಿನಾರಾಯಣ ಮೈನಿಂಗ್‌ ಕಂಪೆನಿಗೆ ಹಾಗೂ ಲಕ್ಷ್ಮಿನಾರಾಯಣ ಮೈನಿಂಗ್‌ ಕಂಪೆನಿಯು ಆ ಕಬ್ಬಿಣದ ಅದಿರನ್ನು ಚೆನ್ನೈನ ಬಂದರಿನ ಮೂಲಕ ಚೀನಾಕ್ಕೆ ರಫ್ತು ಮಾಡಿತ್ತು ಎಂದು ಆಪಾದಿಸಲಾಗಿದೆ. ಈಗಲ್‌ ಟ್ರೇಡರ್ಸ್‌ ಮತ್ತು ನಾಗೇಂದ್ರ ಹಾಗೂ ನಾಗರಾಜ್‌ ಅವರ ಈ ಕಾನೂನುಬಾಹಿರ ಕೃತ್ಯದಿಂದ ರಾಜ್ಯದ ಬೊಕ್ಕಸಕ್ಕೆ 3,05,39,536 ರೂಪಾಯಿ ನಷ್ಟವಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379, 409, 420, 447, 468 and 471‌ ಜೊತೆಗೆ 120-ಬಿ ಅಡಿ ಹಾಗೂ ಎಂಆರ್‌ಎಂಡಿ ಕಾಯಿದೆ ಪ್ರಕರಣ ದಾಖಲಿಸಲಾಗಿದ್ದು, ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದನ್ನು ನ್ಯಾಯಾಲಯವು ಪರಿಗಣಿಸಿ ಕ್ರಿಮಿನಲ್‌ ದೂರು ದಾಖಲಿಸಲು ಆದೇಶ ಮಾಡಿದೆ.

ಶ್ರೀನಿವಾಸ ರೆಡ್ಡಿಯಿಂದ ₹24 ಲಕ್ಷ ತೆರಿಗೆ ವಂಚನೆ

ಬಿ ವಿ ಶ್ರೀನಿವಾಸ ರೆಡ್ಡಿ ಮತ್ತು ಇತರೆ ಆರೋಪಿಗಳ ಪಾಲುದಾರ ಸಂಸ್ಥೆಯಾದ ಶ್ರೀ ಮಿನರಲ್ಸ್‌ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ 1069 ಮೆಟ್ರಿಕ್‌ ಟನ್ ಕಬ್ಬಿಣದ ಅದಿರನ್ನು ಮಾರಾಟ ಮತ್ತು ಸಾಗಣೆ ಮಾಡುವ ಮೂಲಕ‌ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹23,89,650 ತೆರಿಗೆ ವಂಚಿಸಿದ್ದಾರೆ ಎಂದು ತನಿಖಾಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ.

The SP verus B Nagendra and K N Nagaraj.pdf
Preview
The SP versus Sri Minerals Srinivas Reddy.pdf
Preview