ಪತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಇತರೆ ಆರೋಪಿಗಳ ಜೊತೆ ಸೇರಿಕೊಂಡು ಕ್ರೌರ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರ ವಿರುದ್ಧ ಪತ್ನಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಬೆಂಗಳೂರಿನ ಎಸ್ ಮೂರ್ತಿ ಕುಮಾರ್ ಅವರ ಪತ್ನಿ ತಮ್ಮ ವಿರುದ್ದ ದಾಖಲಿಸಿರುವ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
“ದೂರುದಾರೆಯಾದ ಪತ್ನಿಯ ಗಂಡನ ಜೊತೆ ಅರ್ಜಿದಾರೆಯು ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಏಕೈಕ ಆರೋಪವಿದೆ. ಇವು ಅರ್ಜಿದಾರೆಯ ವಿರುದ್ಧದ ಅಪರಾಧಗಳಿಗೆ ತತ್ಸಮಾನವಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ಆರೋಪಗಳು ಅರ್ಜಿದಾರೆಯ ವಿರುದ್ದದ ಅಪರಾಧಗಳಿಗೆ ತತ್ಸಮಾನವಾಗಿಲ್ಲ. ಹೀಗಾಗಿ, ಐದನೇ ಆರೋಪಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಾಸ್ತವಿಕ ಅಂಶಗಳು ಇಲ್ಲ” ಎಂದು ನ್ಯಾಯಾಲಯ ಹೇಳಿದ್ದು, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 498-ಎ, 506, 504 ಮತ್ತು 34, ವರದಕ್ಷಿಣೆ ನಿಷೇಧ ಕಾಯಿದೆ ಸೆಕ್ಷನ್ 3 ಮತ್ತು 4ರ ಅಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.
ಮೊದಲ ಆರೋಪಿಯನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದು, ಅರ್ಜಿದಾರೆ ಮತ್ತು ಇತರೆ ನಾಲ್ವರು ಆರೋಪಿಗಳು ಸೇರಿಕೊಂಡು ತನ್ನ ಮೇಲೆ ಕ್ರೌರ್ಯ ಎಸಗಿದ್ದಾರೆ. ಅರ್ಜಿದಾರೆಯಾದ ಐದನೇ ಆರೋಪಿಯು ತನ್ನ ಪತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ನೀಡಿದ್ದ ದೂರು ಆಧರಿಸಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.