ಸುದ್ದಿಗಳು

ಸಂದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಐಎಂಎ ಮುಖ್ಯಸ್ಥ ಮೊರೆ

ಜಯಲಾಲ್ ಯಾವುದೇ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿರುವ ಅಥವಾ ಜನರಿಗೆ ಆಮಿಷವೊಡ್ಡುತ್ತಿರುವ ಇಲ್ಲವೇ ಜನರನ್ನು ಮತಾಂತರಗೊಳಿಸಲು ಯತ್ನಿಸುತ್ತಿರುವ ಅಂಶ ಸಂದರ್ಶನದಲ್ಲಿ ಇಲ್ಲ ಎಂದು ವಾದಿಸಲಾಗಿದೆ.

Bar & Bench

ತಾನು 'ಕ್ರಿಶ್ಚಿಯಾನಿಟಿ ಟುಡೆʼ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನ ಜಾತ್ಯತೀತತೆಗೆ ವಿರುದ್ಧ ಎಂದು ಆಕ್ಷೇಪಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ, ಜಾನ್‌ರೋಸ್‌ ಆಸ್ಟಿನ್ ಜಯಲಾಲ್ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿ ಆಶಾ ಮೆನನ್ ಅವರಿದ್ದ ಪೀಠ ಈ ಹಂತದಲ್ಲಿ ಯಾವುದೇ ಏಕಪಕ್ಷೀಯ ಆದೇಶ ರವಾನಿಸಲು ನಿರಾಕರಿಸಿತಾದರೂ ಮೇಲ್ಮನವಿ ಕುರಿತಂತೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿತು.

ದೋಷಪೂರಿತ ಆದೇಶದಲ್ಲಿ ತಮ್ಮ ವಿರುದ್ಧ ಮಾಡಿರುವ ಅವಲೋಕನಗಳು ತೀವ್ರ ರೀತಿಯಲ್ಲಿ ಪೂರ್ವಾಗ್ರಹ ಪೀಡಿತವಾಗಿವೆ. ಏಕೆಂದರೆ ಈ ಅವಲೋಕನಗಳು ತಾವು ದುರ್ನಡತೆ ತೋರಿರುವುದಾಗಿ ಮೇಲ್ನೋಟಕ್ಕೆ ಬಿಂಬಿಸುತ್ತವೆ ಎಂದು ಜಯಲಾಲ್‌ ಮನವಿಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಅದೇಶವು 3.5 ಲಕ್ಷದಷ್ಟು ವೈದ್ಯರನ್ನು ಸದಸ್ಯರಾಗಿ ಹೊಂದಿರುವ ಐಎಂಎ ಮುಖ್ಯಸ್ಥರಾಗಿರುವ ಜಯಲಾಲ್‌ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರನ್ನು ಪ್ರತಿನಿಧಿಸಿದ ವಕೀಲ ತನ್ಮಯ್‌ ಮೆಹ್ತಾ ವಾದ ಮಂಡಿಸಿದರು.

ವಿಚಾರಣಾ ನ್ಯಾಯಾಲಯದ ಅವಲೋಕನಗಳಿಗೆ ತಡೆ ನೀಡಬೇಕೆಂದು ಮೆಹ್ತಾ ಕೋರಿದ್ದು ಜಯಲಾಲ್‌ ಯಾವುದೇ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿರುವ ಅಥವಾ ಜನರಿಗೆ ಆಮಿಷವೊಡ್ಡುತ್ತಿರುವ ಇಲ್ಲವೇ ಜನರನ್ನು ಮತಾಂತರಗೊಳಿಸಲು ಯತ್ನಿಸುತ್ತಿರುವ ಅಂಶ ಸಂದರ್ಶನದಲ್ಲಿ ಇಲ್ಲ. ಅವರು ಕ್ರಿಶ್ಚಿಯನ್‌ ಧರ್ಮ ಅಲೋಪತಿಗೆ ಸಮ ಎಂದು ಹೇಳಿಲ್ಲ. ಅವರು ತಾನು ಆಯುರ್ವೇದಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ. ಅವರು ಮಿಕ್ಸೋಪತಿಗೆ ವಿರುದ್ಧವಾಗಿದ್ದಾರೆ. ಯಾರಾದರೂ ಅಲೋಪತಿಗೆ ಆದ್ಯತೆ ನೀಡಿದರೆ ಅದು ಜಯಲಾಲ್‌ ಆಮಿಷವೊಡ್ಡುತ್ತಿದ್ದಾರೆ ಎಂದರ್ಥವಲ್ಲ ಎಂದು ವಾದಿಸಿದರು.

ಆದರೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದ ವಾಸ್ತವಿಕ ನಿಖರತೆಯನ್ನು ಚರ್ಚಿಸಲಾಗದು. ಸಂಬಂಧಪಟ್ಟ ನ್ಯಾಯಾಧೀಶರಿಗೆ ಈ ಬಗ್ಗೆ ಸೂಚನೆ ನೀಡುವುದಿಲ್ಲ. ಇವು ಸಾಮಾನ್ಯ ಅವಲೋಕನಗಳು. ಅವರಿಗೆ (ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ) ತಡೆ ನೀಡಬೇಕು ಅನ್ನಿಸಿದ್ದರೆ ಅಲ್ಲಿಯೇ ತಡೆ ನೀಡುತ್ತಿದ್ದರು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು.

ರೋಹಿತ್‌ ಝಾ ಎಂಬುವವರು ಸಲ್ಲಿಸಿದ ಕ್ಷುಲ್ಲಕ ಅರ್ಜಿಯನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಮೊಕದ್ದಮೆ ದಾಖಲಿಸಿದೆ ಎಂದು ಮೆಹ್ತಾ ತಮ್ಮ ವಾದ ಮಂಡನೆ ವೇಳೆ ಆರೋಪಿಸಿದರು. ಒಂದು ವರ್ಗದ ಮಾನಹಾನಿಗೆ ಅರ್ಜಿಯಲ್ಲಿ ಪರಿಹಾರ ಕೋರಿದ್ದು ಇದನ್ನು ಭಾರತೀಯ ಕಾನೂನಿನಡಿ ಅನುಮತಿಸಲಾಗದ ಕಾರಣ ಪ್ರಕರಣ ಮಾನ್ಯವಾಗುವುದಿಲ್ಲ ಎಂದರು. ಮಾಧ್ಯಮಗಳು ಜಯಲಾಲ್‌ ಅವರನ್ನು ರಾಕ್ಷಸೀಕರಿಸುತ್ತಿರುವುದರಿಂದ ನ್ಯಾಯಾಲಯದ ಅವಲೋಕನಕ್ಕೆ ತಡೆ ನೀಡಬೇಕೆಂದು ಕೋರಿದರು.

ಜಯಲಾಲ್‌ ಅವರು ಬಾಬಾ ರಾಮದೇವ್‌ ಅವರೊಡನೆ ಯಾವುದೇ ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ದಾವೆ ನಕಲಿ ಸುದ್ದಿಯನ್ನು ಆಧರಿಸಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಹಗ್ಗೈ ಇಂಟರ್‌ನ್ಯಾಷನಲ್‌ಗೆ ಸಂದರ್ಶನ ನೀಡಲಾಗಿದೆ ಎಂದು ಆರೋಪಿಸಿರುವ ನಕಲಿ ಸುದ್ದಿಯನ್ನು ಈ ದಾವೆ ಆಧರಿಸಿದೆ. ನಕಲಿ ಸುದ್ದಿ ಬಗ್ಗೆ ಈಗಾಗಲೇ ಸೈಬರ್‌ ಪೊಲೀಸರಿಗೆ ದೂರು ನೀಡಲಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ಅರ್ಹತೆ ಆಧಾರದಲ್ಲಿ ಹೋರಾಡುವುದಾಗಿ ತಿಳಿಸಿದರು.

ವಾದ ಮಂಡನೆ ಬಳಿಕ ನ್ಯಾಯಾಲಯ ಏಕಪಕ್ಷೀಯ ಆದೇಶ ರವಾನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು ನೋಟಿಸ್‌ ಜಾರಿಗೊಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಜೂನ್ 16 ರಂದು ನಡೆಯಲಿದೆ. ವಕೀಲ ನಿತೇಶ್ ಜೈನ್ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.