2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಪ್ರಣಾಳಿಕೆಯಲ್ಲಿ ಪ್ರಮುಖ ಕಾನೂನಾತ್ಮಕ ವಿಚಾರಗಳ ಕುರಿತು ಪ್ರಸ್ತಾಪಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಒಂದು ರಾಷ್ಟ್ರ ಒಂದು ಚುನಾವಣೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪೌರತ್ವ ನೀಡುವುದಕ್ಕಾಗಿ ಸಿಎಎ ಜಾರಿಗೆ ತರುವ ಭರವಸೆಯನ್ನು ಪಕ್ಷ ನೀಡಿದೆ. ಗಮನಾರ್ಹವಾಗಿ ಸಿಎಎ ಹಾಗೂ ಈಚೆಗೆ ಜಾರಿಗೊಳಿಸಿದ ಪೌರತ್ವ (ತಿದ್ದುಪಡಿ) ನಿಯಮಾವಳಿ – 2024ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸುಮಾರು 236 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ದೊಡ್ಡ ಪ್ರಮಾಣದ ಗಲಭೆಗಳಿಗೂ ಕಾರಣವಾದ ಸಿಎಎಗೆ ಡಿಸೆಂಬರ್ 12, 2019ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು. ನಂತರ ಗೆಜೆಟ್‌ನಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. ನಿಯಮಾವಳಿ ಅಧಿಸೂಚನೆ ಕಾಯಿದೆಯನ್ನು ಜಾರಿಗೊಳಿಸಿತ್ತು.
ಸಿಎಎ ನಿಯಮದ ಪ್ರಕಾರ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳು, ಜೈನರು, ಕ್ರೈಸ್ತರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವ ದೊರೆಯಲಿದೆ. ಪೌರತ್ವ ಕಾಯಿದೆ 1955ರ ಸೆಕ್ಷನ್ 2ಕ್ಕೆ ತಿದ್ದುಪಡಿ ತಂದು ಅಕ್ರಮ ವಲಸಿಗರು ಎಂದು ಮಾಡಲಾಗಿದೆ.
ಇದಲ್ಲದೆ ಏಕರೂಪ ನಾಗರಿಕ ಸಂಹಿತೆ (UCC) ಅನ್ನು ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಒಂದೆಂದು ಪಟ್ಟಿ ಮಾಡುವ ಸಂವಿಧಾನದ 44ನೇ ವಿಧಿಯನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದ್ದು ಯುಸಿಸಿ ಜಾರಿಗೆ ತರುವ ತನ್ನ ನಿಲುವನ್ನು ಬಿಜೆಪಿ ಪುನರುಚ್ಚರಿಸಿದೆ.
"ಭಾರತದ ಎಲ್ಲಾ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳುವವರೆಗೆ ಲಿಂಗ ಸಮಾನತೆ ಸಾಧ್ಯವಿಲ್ಲ ಎಂದು ಬಿಜೆಪಿ ನಂಬುತ್ತದೆ ಹಾಗೂ ಉತ್ತಮ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ಮಿಳಿತಗೊಳಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಸೆಳೆಯುವ ತನ್ನ ನಿಲುವನ್ನು ಬಿಜೆಪಿ ಪುನರಚ್ಚರಿಸುತ್ತಿದೆ” ಎಂದು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ಉತ್ತರಾಖಂಡ ರಾಜ್ಯ ಈಚೆಗೆ ಮೊದಲ ಬಾರಿಗೆ ಯುಸಿಸಿಯನ್ನು ಜಾರಿಗೆ ತಂದಿತು.
ವಿವಿಧ ಧಾರ್ಮಿಕ ಕಟ್ಟುಪಾಡುಗಳಾಚೆಗೆ ಜನರ ಜೀವನದ ವಿವಿಧ ವಿಚಾರಗಳನ್ನು ಒಂದೇ ಕಾನೂನಿನಡಿ ತರುವ ಸಲುವಾಗಿ ವೈಯಕ್ತಿಕ ಸಾಂಪ್ರದಾಯಿಕ ಕಾನೂನುಗಳಿಗೆ ಒಳಪಟ್ಟು ಸಂಬಂಧಗಳಲ್ಲಿ ಯಾವುದು ಅನುಮತಿಸಬೇಕು ಮತ್ತು ಯಾವುದನ್ನು ನಿಷೇಧಿಸಬೇಕು ಎಂಬುದನ್ನು ಹೇಳುತ್ತದೆ ಯುಸಿಸಿ. ಅದರ ಪ್ರಕಾರ ಲಿವ್- ಇನ್ ಸಂಬಂಧ ನೋಂದಣಿಯಾಗದಿದ್ದರೆ ಜೋಡಿಗೆ ಸೆರೆವಾಸ ವಿಧಿಸಲಾಗುತ್ತದೆ.
ಇದಲ್ಲದೆ, ಏಕಕಾಲದಲ್ಲಿ ಚುನಾವಣೆ ನಡೆಸುವ ಸಮಸ್ಯೆಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯ ಶಿಫಾರಸುಗಳ ಜಾರಿಗೆ ಪಕ್ಷ ಕೆಲಸ ಮಾಡುತ್ತದೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಮಾರ್ಚ್‌ನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಹಸಿರು ನಿಶಾನೆ ತೋರಿಸಿತ್ತು.
ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ತನ್ನ ಪ್ರನಾಳಿಕೆಯಲ್ಲಿ ತರಬೇತಿ, ಆನ್‌ಲೈನ್ ಪ್ರಮಾಣಪತ್ರ ಕೋರ್ಸ್‌ಗಳು, ವಿಶ್ವವಿದ್ಯಾಲಯಗಳು ಮತ್ತು ಕಾನೂನು ಶಾಲೆಗಳಲ್ಲಿ ಹೊಸ ಪಠ್ಯಕ್ರಮ ಮತ್ತು ಹೆಚ್ಚುವರಿ ಕ್ರಮಗಳ ಮೂಲಕ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ತಾನು ಬದ್ಧವಾಗಿರುವುದಾಗಿ ತಿಳಿಸಿದೆ.