ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಕಾಗದರಹಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಯೋಜಿಸಿದ್ದ ಇ-ವಿಧಾನ ಮಂಡಲ ಯೋಜನೆಯನ್ನು ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೇವಾ) ಮೂಲಕ ಜಾರಿಗೊಳಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿರುವ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ಮುಖಂಡ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭೆ ಮತ್ತು ಪರಿಷತ್ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆ ಮುಂದೂಡಿದೆ.
ಕಿಯೋನಿಕ್ಸ್ ಮೂಲಕ 253.75 ಕೋಟಿ ರೂಪಾಯಿ ವೆಚ್ಚದಲ್ಲಿ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡುವುದರ ಬದಲಾಗಿ ನೇವಾ ಮೂಲಕ ಯೋಜನೆ ಜಾರಿಗೊಳಿಸಲು ಆದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.
ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡಿದರೆ ಆಗುವ ಅನುಕೂಲಗಳ ಕುರಿತು ವಿಧಾನಸಭೆಯ ಸ್ಪೀಕರ್‌ಗೆ 2022ರ ಮೇ 5ರಂದು ಪತ್ರ ಬರೆಯಲಾಗಿದೆ. ಕಿಯೋನಿಕ್ಸ್ ಮೂಲಕ ಯೋಜನೆ ಜಾರಿ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ 254 ಕೋಟಿ ರೂಪಾಯಿ ನಷ್ಟವಾಗಲಿರುವುದರಿಂದ ಮಧ್ಯಪ್ರವೇಶಿಸುವಂತೆ ಸ್ಪೀಕರ್‌ಗೆ ಮನವಿಯಲ್ಲಿ ಕೋರಲಾಗಿತ್ತು. ಸ್ಪೀಕರ್ ಅವರಿಂದ ಯಾವುದೇ ಕ್ರಮವಾಗಲಿ ಅಥವಾ ಪ್ರತಿಕ್ರಿಯೆಯಾಗಲಿ ದೊರೆಯಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇ-ವಿಧಾನ ಮಂಡಲ ಯೋಜನೆ ಜಾರಿಗೆ 2016-17ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) 60.84 ಕೋಟಿ ರೂಪಾಯಿ ಅಂದಾಜಿಸಿತ್ತು. ಆದರೆ, ಕರ್ನಾಟಕ ವಿಧಾನ ಮಂಡಲವು ಈ ಯೋಜನೆ ಜಾರಿಗೆ ಕಿಯೋನಿಕ್ಸ್ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು. ಇದರಂತೆ ಕಿಯೋನಿಕ್ಸ್ ಸುಮಾರು 254 ಕೋಟಿ ರೂಪಾಯಿ ಯೋಜನೆಗೆ ತಗುಲುವುದಾಗಿ ವರದಿ ನೀಡಿತ್ತು. ಈ ಸಂಬಂಧ ವಿಧಾನಸಭೆ ಕಾರ್ಯದರ್ಶಿಯು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದಕ್ಕೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಹ ಆಕ್ಷೇಪಿಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.