High Court of Karnataka 
ಸುದ್ದಿಗಳು

ಜೀತ ಪದ್ದತಿ ನಿರ್ಮೂಲನೆ ಕಾಯಿದೆ ಪರಿಣಾಮಕಾರಿ ಜಾರಿಗೆ ಮನವಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

Bar & Bench

ಜೀತ ಪದ್ದತಿ (ನಿರ್ಮೂಲನೆ) ಕಾಯಿದೆ-1976 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿಗೊಳಿಸಿದೆ.

ಜೀತ ವಿಮುಕ್ತಿ-ಕರ್ನಾಟಕದ ಸಂಯೋಜಕ ಡಾ. ಕಿರಣ ಕಮಲ ಪ್ರಸಾದ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಈಚೆಗೆ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆಯ ಎರಡು ಷರತ್ತುಗಳನ್ನು ರದ್ದುಪಡಿಸಬೇಕು, ಜೀತದಾಳುಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದು ಮತ್ತು ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಕೈಬಿಡಬೇಕು ಹಾಗೂ ಜೀತ ಪದ್ದತಿ (ನಿರ್ಮೂಲನೆ) ಕಾಯಿದೆ-1976 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ, ಮನವಿ ಮಾಡಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು, ಸರ್ಕಾರ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸಿರುವ ಮನವಿಗಳನ್ನು ಅರ್ಜಿಯೊಂದಿಗೆ ಅಡಕ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಧಾನ ನಿರ್ದೇಶಕರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿಮಾಡಲು ನ್ಯಾಯಾಲಯ ಆದೇಶಿಸಿತು. ಅರ್ಜಿದಾರರ ಪರವಾಗಿ ವಕೀಲೆ ಅಶ್ಬಿನಿ ಓಬಳೇಶ್ ವಾದಿಸಿದರು.

ಜೀತ ಪದ್ದತಿಯಿಂದ ಬಿಡುಗಡೆ ಹೊಂದಿದವರಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರ ಹಣದ ಬಾಕಿ ಮೊತ್ತ ಬಿಡುಗಡೆ ಮಾಡಬೇಕಾದರೆ ಜೀತದಾಳುಗಳ ಬಿಡುಗಡೆ ಪತ್ರ ಹಾಗೂ ಪ್ರಕರಣದ ಸಂಕ್ಷಿಪ್ತ ವಿಚಾರಣೆ ನಡೆಸಿದ ದಾಖಲೆ ಒದಗಿಸಬೇಕು ಮತ್ತು ರಾಜ್ಯ ಸರ್ಕಾರ ಜೀತದಾಳುಗಳ ಪುನರ್ವಸತಿ ಯೋಜನೆ ದಾಖಲೆ ಸಲ್ಲಿಸಬೇಕು ಎನ್ನುವ ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆ-2016ರ ಷರತ್ತುಗಳನ್ನು ರದ್ದುಪಡಿಸಬೇಕು. ಇದೇ ಯೋಜನೆಯಡಿ ಜೀತದಾಳುಗಳ ಗುರುತಿಸುವಿಕೆ, ಅವರ ರಕ್ಷಣೆ ಹಾಗೂ ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಸೂಚಿಸಲಾಗಿರುವ ಮಾರ್ಗಸೂಚಿಗಳನ್ನು ಸಹ ರದ್ದುಪಡಿಸಬೇಕು. ಜೊತೆಗೆ ಜೀತದಾಳುಗಳ ಕಲ್ಯಾಣ ಮತ್ತು ಅವರ ಆರ್ಥಿಕ ಹಿತಾಸಕ್ತಿ ಕಾಪಾಡಲು ಜಾರಿಗೆ ತಂದಿರುವ ಜೀತ ಪದ್ದತಿ (ನಿರ್ಮೂಲನೆ) ಕಾಯಿದೆ-1976 ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.