ವಿವಾದಿತ ಸುದರ್ಶನ್ ಟಿವಿಯ ಯುಪಿಎಸ್ ಸಿ ಜಿಹಾದ್ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಬಿಂಬಿಸಿದ ರೀತಿಯಲ್ಲಿ ಅವರನ್ನು ಗ್ರಹಿಸುವುದು ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿತು.
ಈಗಾಗಲೇ ಪ್ರಸಾರ ಮಾಡಲಾಗಿರುವ ಕಂತುಗಳಲ್ಲಿನ ಸಮಸ್ಯಾತ್ಮಕ ವಿಚಾರಗಳ ಬಗ್ಗೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ಪೀಠವು ಪ್ರಸ್ತಾಪಿಸಿತು.
“ಇಡೀ ಸಮುದಾಯವೇ ನಾಗರಿಕ ಸೇವೆಯನ್ನು ವ್ಯಾಪಿಸುತ್ತಿದೆಯೇನೋ ಎಂಬ ರೀತಿಯಲ್ಲಿ ನೀವು ಬಿಂಬಿಸಿದ್ದೀರಿ. ಇದು ನೈಜ ಸಮಸ್ಯೆ. ಮುಸ್ಲಿಮರು ನಾಗರಿಕ ಸೇವೆಗೆ ಸೇರುವುದನ್ನು ಐಸಿಸ್ ತೋರಿಸುತ್ತೀರಿ. ಮುಸ್ಲಿಮರು ನಾಗರಿಕ ಸೇವೆಗೆ ಸೇರುವುದು ಆಳದಲ್ಲಿ ಪಿತೂರಿಯ ಭಾಗ ಎಂದು ಹೇಳಬಯಸುತ್ತಿದ್ದೀರಿ. ಇಡೀ ಸಮುದಾಯವನ್ನು ಮಾಧ್ಯಮ ಗುರಿಯಾಗಿಸುವುದನ್ನು ಸಹಿಸಬಹುದೇ?” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಖಾರವಾಗಿ ಪ್ರಶ್ನಿಸಿದರು.
ಮುಸ್ಲಿಂ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ಭಾರತೀಯ ಜಕಾತ್ ಫೌಂಡೇಶನ್ (ಜೆಎಫ್ಐ) ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಸಂಸ್ಥೆಗಳಿಂದ ದೇಣಿಗೆ ಪಡೆದಿದೆ ಎಂದು ಸುದರ್ಶನ್ ಟಿವಿಯು ಗುರುವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ವಿವರಿಸಿತ್ತು.
ಪ್ರಕರಣದಲ್ಲಿ ತಮ್ಮನ್ನೂ ಭಾಗಿಯಾಗಿಸುವಂತೆ ಭಾರತೀಯ ಜಕಾತ್ ಫೌಂಡೇಶನ್ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ನ್ಯಾಯಾಲಯದಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಂದ್ರಚೂಡ್ ಅವರು “ಸುದರ್ಶನ್ ಟಿವಿಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚವ್ಹಾಣ್ಕೆ ಅವರು ನಿಮ್ಮ ಸಂಸ್ಥೆ ಸಂಘರ್ಷಕ್ಕೆ ಸಿಲುಕಿದೆ ಎಂದು ಹೇಳುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನಿಮಗೆ ಅಥವಾ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ್ದಲ್ಲ. ನೀವು ಮಧ್ಯಪ್ರವೇಶಿಸಲು ಬಯಸಿದ್ದಲ್ಲಿ ನಾವು ಪ್ರತಿವಾದಿ ಪರ ವಕೀಲರಾದ ಶ್ಯಾಮ್ ದಿವಾನ್ ಅವರನ್ನು ನಿಮ್ಮನ್ನೂ ಒಳಗೊಳ್ಳುವಂತೆ ಸೂಚಿಸುತ್ತೇವೆ” ಎಂದರು.
ಜೆಎಫ್‌ಐನ ವಿದೇಶಿ ದೇಣಿಗೆ (ಸುಧಾರಣೆ) ಕಾಯಿದೆಯ (ಎಫ್ ಸಿಆರ್ ಎ) ದಾಖಲೆಗಳನ್ನೂ ಪ್ರಶ್ನಿಸಲಾಗಿದೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು. ಆಗ ಸಂಜಯ್ ಹೆಗ್ಡೆ ಅವರು ಪ್ರಕರಣದಲ್ಲಿ ಜೆಎಫ್‌ಐ ಸೇರಬೇಕೆ ಎಂದು ನಿರ್ಧರಿಸಲು ಸೋಮವಾರದವರೆಗೆ ಕಾಲಾವಕಾಶ ನೀಡುವಂತೆ ಕೋರಿದರು.
ನ್ಯಾಯಾಲಯ ಮಧ್ಯಪ್ರವೇಶಿಸಿದರೆ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಅಸಮತೋಲನವಾಗುವ ಸಾಧ್ಯತೆಯುಂಟು. ವಾಸ್ತವಾಂಶಗಳ ಆಧಾರದಲ್ಲಿ ಜೆಎಫ್‌ಐ ಯನ್ನು ಪ್ರಶ್ನಿಸುವ ಉದ್ದೇಶದಿಂದ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಸುದರ್ಶನ್ ಟಿವಿ ಪರ ವಕೀಲ ಶ್ಯಾಮ್ ದಿವಾನ್ ಹೇಳಿದರು.