Darshan and Karnataka HC 
ಸುದ್ದಿಗಳು

[ನಟ ದರ್ಶನ್‌ ವಿರುದ್ಧದ ವರದಿಗಾರಿಕೆ] ತಪ್ಪಿತಸ್ಥ ಮಾಧ್ಯಮಗಳಿಗೆ ದಂಡ ವಿಧಿಸಿ, ಪರವಾನಗಿ ರದ್ದುಪಡಿಸಿ: ಹೈಕೋರ್ಟ್‌

“ಮಾಧ್ಯಮ ಕಾವಲುನಾಯಿಯಾಗಿದ್ದು, ಅದು ನ್ಯಾಯಾಧೀಶ, ತೀರ್ಪುಗಾರ & ಅದನ್ನು ಅನುಷ್ಠಾನಗೊಳಿಸುವ ಸ್ಥಾನಕ್ಕೆ ಹೋದರೆ ಕಾನೂನು ಮುರಿದು ಬೀಳಲಿದೆ.  ಸ್ಟುಡಿಯೊಗಳ ಪ್ರಜ್ವಲಿಸುವ ದೀಪಗಳ ಮುಂದೆ ನ್ಯಾಯದಾನ ಪ್ರಕ್ರಿಯೆ ಮಸುಕಾಗಲು ಅವಕಾಶ ನೀಡಲ್ಲ”.

Bar & Bench

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ವಿರುದ್ಧ ನ್ಯಾಯಾಂಗ ಆದೇಶ ಉಲ್ಲಂಘಿಸಿ ಕಾನೂನಿಗೆ ವಿರುದ್ಧಚಾಗಿ ವರದಿ ಮಾಡಿರುವ ಮಾಧ್ಯಮಗಳಿಗೆ ದಂಡ ವಿಧಿಸಿ, ಪರವಾನಗಿ ರದ್ದುಪಡಿಸುವ ದಿಟ್ಟ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ತಮ್ಮ ವಿರುದ್ಧದ ಮಾಧ್ಯಮ ವಿಚಾರಣೆ ನಿರ್ಬಂಧಿಸಲು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ದೇಶನ ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಆದೇಶಿಸುವಂತೆ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದ್ದು, ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Justice Sachin Shankar Magadum

2024ರಲ್ಲಿ ನ್ಯಾಯಾಲಯವು ವಿಚಿತ್ರ ವರದಿಗಾರಿಕೆಯ ಬಗ್ಗೆ ಎಚ್ಚರಿಸಿದೆ. ಇದನ್ನು ಉಲ್ಲಂಘಿಸಿ ವರದಿ ಮಾಡುವಿಕೆಯು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಮಾಧ್ಯಮಗಳಿಗೆ ಪೀಠ ಎಚ್ಚರಿಸಿದೆ.

ಮಾಧ್ಯಮ ಕಾವಲುನಾಯಿಯಾಗಿದ್ದು, ಅದು ನ್ಯಾಯಾಧೀಶ, ತೀರ್ಪುಗಾರ ಮತ್ತು ಅದನ್ನು ಅನುಷ್ಠಾನಗೊಳಿಸುವ ಸ್ಥಾನಕ್ಕೆ ಹೋದರೆ ಕಾನೂನು ಮುರಿದು ಬೀಳಲಿದೆ.  ಸ್ಟುಡಿಯೊಗಳ ಪ್ರಜ್ವಲಿಸುವ ದೀಪಗಳ ಮುಂದೆ ನ್ಯಾಯದಾನ ಪ್ರಕ್ರಿಯೆ ಮಸುಕಾಗಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ
ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್

“ಸಕ್ಷಮ ಪ್ರಾಧಿಕಾರಗಳು ಕ್ರಮಕೈಗೊಳ್ಳದಿರುವುದು ಸ್ವೇಚ್ಛೆಯ ಕ್ರಮವಾಗಿದ್ದು, ಅಸಮರ್ಥನೀಯ. ಮೇಲ್ನೋಟಕ್ಕೆ ಕಾನೂನು ಮತ್ತು ನ್ಯಾಯಾಂಗದ ಆದೇಶಗಳ ಉಲ್ಲಂಘನೆ ಕಾಣುತ್ತದೆ. ಮಾಧ್ಯಮಗಳ ವಿಚಾರಣೆಯು ದರ್ಶನ್‌ ಅವರ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಗಂಭೀರ ಹಾನಿ ಉಂಟು ಮಾಡಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಹೀಗಾಗಿ, ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್‌ (ನಿಯಂತ್ರಣ) ಕಾಯಿದೆಯ ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿರುವ ದರ್ಶನ್‌ ವಿರುದ್ಧದ ಕಂಟೆಂಟ್‌ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ತೆಗೆಯಲು ನಿರ್ದೇಶಿಸಬೇಕು. ಆದೇಶ ಉಲ್ಲಂಘಿಸುವ ಮಾಧ್ಯಮಗಳಿಗೆ ದಂಡ ವಿಧಿಸಬೇಕು, ಅವರ ಪರವಾನಗಿ ರದ್ದುಪಡಿಸುವುದರ ಜೊತೆಗೆ ಕಾನೂನಿನ ಅನ್ವಯ ಸೂಕ್ತ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶಿಸಿದೆ. ಈ ಸಂಬಂಧಿತ ಅನುಪಾಲನಾ ವರದಿಯನ್ನು ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.

“ದರ್ಶನ್ ಅವರು ಪ್ರಸ್ತಾಪಿಸಿರುವ ವಿಷಯಗಳು ಮಾಧ್ಯಮಗಳು ಬಾಕಿ ಇರುವ ನ್ಯಾಯಾಲಯದ ವಿಚಾರಣೆಗಳನ್ನು ಒಂದು ಪ್ರದರ್ಶನವಾಗಿ ಮಾಡಿದ ಗೊಂದಲದ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ನ್ಯಾಯಾಲಯ ಅತೃಪ್ತಿ ದಾಖಲಿಸಿದೆ.

“ವಿದ್ಯುನ್ಮಾನ ಮಾಧ್ಯಮಗಳು ನ್ಯಾಯಾಲಯದಲ್ಲಿ ಕಲಾಪವನ್ನು ಪುನರ್‌ ರೂಪಿಸುವ ಮಟ್ಟಕ್ಕೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಮುಖವನ್ನು ಮರೆಮಾಚಲಾಗಿದೆ. ಉಳಿದಂತೆ ಆರೋಪಿಗಳು ಮತ್ತು ವಕೀಲರ ಮುಖವನ್ನು ಮುಕ್ತವಾಗಿ ಪ್ರಸಾರ ಮಾಡುತ್ತಿವೆ. ಪ್ರತಿದಿನದ ವಿಚಾರಣೆಯಂದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ವಿಚಾರಣೆಗೆ ಬಾಕಿ ಇರುವ ನ್ಯಾಯಾಂಗ ಪ್ರಕ್ರಿಯೆಯನ್ನು ಒಂದು ರೀತಿ ಸಾರ್ವಜನಿಕ ಪ್ರದರ್ಶನವನ್ನಾಗಿಸಿವೆ” ಎಂದು ಕಿಡಿಕಾರಿದೆ.

“ವಿಚಾರಣೆಯ ಮುಖ್ಯಾಂಶಗಳ ಗಡಿರೇಖೆ ಹೊಂದಿರುವ ಇಂತಹ ಪ್ರಸಾರಗಳನ್ನು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುವ ವ್ಯವಸ್ಥೆಯಲ್ಲಿ, ವಿಶೇಷವಾಗಿ ಜಾರಿಯಾಗಿರುವ ನ್ಯಾಯಾಲಯದ ತಡೆಯಾಜ್ಞೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ, ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ರೀತಿಯಲ್ಲಿ ಪ್ರಸಾರ ಮಾಡಿದಾಗ ಅವುಗಳನ್ನು ಸಹಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮ ವರದಿಗಳು ನ್ಯಾಯಾಂಗ ನಿರ್ಣಯವನ್ನು ಬದಲಾಯಿಸಲು ಅನುಮತಿಸಲಾಗದು. ನ್ಯಾಯಾಲಯದ ದೃಶ್ಯಗಳನ್ನು ವಾಸ್ತವಿಕವಾಗಿ ಪ್ರದರ್ಶಿಸುವ ಮೂಲಕ ಮತ್ತು ಆಯ್ದ ನಿರೂಪಣೆಗಳನ್ನು ಬಿಂಬಿಸುವ ಮೂಲಕ, ಮಾಧ್ಯಮಗಳು ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಬುಡಮೇಲು ಮಾಡು ಕೆಲಸದಲ್ಲಿ ನಿರತವಾಗಿದ್ದು, ದರ್ಶನ್ ಅವರ ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸಿವೆ” ಎಂದು ನ್ಯಾಯಾಲಯ ಕಿಡಿಕಾರಿದೆ.

“ಮಾಧ್ಯಮ ಕಾವಲುನಾಯಿಯಾಗಿದ್ದು, ಅದು ನ್ಯಾಯಾಧೀಶ, ತೀರ್ಪುಗಾರ ಮತ್ತು ಅದನ್ನು ಅನುಷ್ಠಾನಗೊಳಿಸುವ ಸ್ಥಾನಕ್ಕೆ ಹೋದರೆ ಕಾನೂನು ಮುರಿದು ಬೀಳಲಿದೆ.  ಸ್ಟುಡಿಯೊಗಳ ಪ್ರಜ್ವಲಿಸುವ ದೀಪಗಳ ಮುಂದೆ ನ್ಯಾಯದಾನ ಪ್ರಕ್ರಿಯೆ ಮಸುಕಾಗಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದೆ.

Darshan Srinivas vs UoI.pdf
Preview