Rape
Rape 
ಸುದ್ದಿಗಳು

ಮೊಕದ್ದಮೆಗಳ ಹೆಚ್ಚಳ: ವರ್ಷದೊಳಗೆ ಪೊಕ್ಸೊ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸುವುದು ಅಸಾಧ್ಯ ಎಂದ ಕರ್ನಾಟಕ ಹೈಕೋರ್ಟ್

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012 (ಪೊಕ್ಸೊ ಕಾಯ್ದೆ) ಯ ಅಡಿಯಲ್ಲಿ ಒಂದು ವರ್ಷದೊಳಗೆ ಪ್ರಕರಣಗಳ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯಗಳು ತೀರ್ಮಾನಿಸಲು ವಿಫಲವಾದ ಸಂದರ್ಭದಲ್ಲಿ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ವಿಚಾರಣೆಯನ್ನು ಪೂರ್ಣಗೊಳಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಜಾಮೀನು ಕೋರಿ ಪೊಕ್ಸೊ ಕಾಯ್ದೆಯಡಿ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಯಿದೆಯ ಸೆಕ್ಷನ್ 35ರ ಪ್ರಕಾರ ಒಂದು ವರ್ಷದೊಳಗೆ ಎಷ್ಟಾಗುತ್ತದೋ ಅಷ್ಟು ವಿಚಾರಣೆಯನ್ನು ಪೂರ್ಣಗೊಳಿಸಬೇಕಿದೆ.

ಈ ನಿಬಂಧನೆಯನ್ನು ಗಣನೆಗೆ ತೆಗೆದುಕೊಂಡು, ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರ ಏಕ ನ್ಯಾಯಾಧೀಶರ ನ್ಯಾಯಪೀಠ ಹೀಗೆ ಅಭಿಪ್ರಾಯಪಟ್ಟಿದೆ:

"ಪೊಕ್ಸೊ ಕಾಯ್ದೆಯ ಸೆಕ್ಷನ್ 35 ರ ಉಪವಿಭಾಗ (2) ಅನ್ನು ಸೂಕ್ಷ್ಮವಾಗಿ ಓದಿದಾಗ, ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವ (Cognizance) ದಿನಾಂಕದಿಂದ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಲಾಗಿದೆಯಾದರೂ, ಇದರ ನಡುವೆ ಬಳಸಿದ ‘ಎಷ್ಟಾಗುತ್ತದೋ ಅಷ್ಟು’ ಎಂಬ ಪದಗಳು ಹೇಳುವಂತೆ ಪರಿಗಣನೆಗೆ ತೆಗೆದುಕೊಳ್ಳುವ ದಿನಾಂಕದಿಂದ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂಬುದು ಕಾನೂನು ಆದೇಶವಲ್ಲ. ಈ ನಿಬಂಧನೆಯ ಅಡಿಯಲ್ಲಿ ಕೆಲವು ವಿವೇಚನೆಗಳನ್ನು ನೀಡುವಾಗ, ವಿಚಾರಣಾ ನ್ಯಾಯಾಲಯವು ಒಂದು ವರ್ಷದ ಅವಧಿಯಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಬಹುದು ಎಂದಿದೆ. ಹೀಗಿರುವಾಗ, ವಿಚಾರಣೆಯನ್ನು ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯದ ಕಡೆಯಿಂದ ವಿಳಂಬವಾಗಿದೆ ಎಂದು ಹೇಳಲಾಗದು "
ಕರ್ನಾಟಕ ಹೈಕೋರ್ಟ್

ಆದ್ದರಿಂದ, ಪೋಕ್ಸೊ ಕಾಯ್ದೆಯ ಸೆಕ್ಷನ್ 35 ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದರೆ, ಅದರಿಂದ "ಅಂತಿಮವಾಗಿ ನ್ಯಾಯಕ್ಕೆ ಧಕ್ಕೆಯಾದಂತೆ" ಎಂದು ನ್ಯಾಯಾಲಯ ತಿಳಿಸಿದೆ.

ಒಂದು ವರ್ಷದ ನಂತರ, ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ವಾದಿಸಿದ ಆರೋಪಿ ಮತ್ತೊಮ್ಮೆ ಜಾಮೀನು ಪಡೆಯಲು ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ.

ಆರೋಪಿ ಪರ ವಕೀಲರು, ‘ತಮ್ಮ ಕಕ್ಷೀದಾರ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದಾರೆ. ಆಕೆ ಆತನ ಮನೆಗೆ ಬಲವಂತದಿಂದಾಗಲೀ ಒತ್ತಡದಿಂದಾಗಲೀ ಹೋಗಿರಲಿಲ್ಲ. ಹೈಕೋರ್ಟ್ ಆರೋಪಿಯ ಮೊದಲಿನ ಜಾಮೀನು ಅರ್ಜಿ ತಿರಸ್ಕರಿಸುವಾಗ, ವಿಚಾರಣೆ ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಆದರೂ ಪ್ರಕರಣ ಇತ್ಯರ್ಥವಾಗಿಲ್ಲ. ಪೊಕ್ಸೊ ಕಾಯ್ದೆಯ ಸೆಕ್ಷನ್ 35ರ ಅನ್ವಯ ಪರಿಗಣನೆಗೆ ತೆಗೆದುಕೊಂಡ ದಿನದಿಂದ 30ದಿನಗಳ ಒಳಗಾಗಿ ಸಂತ್ರಸ್ತೆಯ ಸಾಕ್ಷ್ಯ ದಾಖಲಿಸಿಲ್ಲ ಮತ್ತು ಒಂದು ವರ್ಷದೊಳಗಾಗಿ ವಿಚಾರಣೆ ಪೂರ್ಣಗೊಳ್ಳದಿರುವುದರಿಂದ ಆರೋಪಿಗೆ ಜಾಮೀನು ಪಡೆಯುವ ಹಕ್ಕಿದೆ ಎಂದು ವಾದಿಸಿದರು.

ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾರೆ. ವಿಚಾರಣೆಯ ವಿಳಂಬವು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಆಧಾರವಲ್ಲ ಎಂದು ವಾದಿಸಿದರು. ಇದಲ್ಲದೆ, ಆರೋಪಿಗಳು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳುಮಾಡುತ್ತಾರೆ ಮತ್ತು ಜಾಮೀನು ಪಡೆದರೆ ಸಂತ್ರಸ್ತೆ ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಸ್ಪರ್ಧಿ ಸಲ್ಲಿಕೆಗಳನ್ನು ಪರಿಗಣಿಸಿದ ನಂತರ, ನ್ಯಾಯಾಲಯವು ಇತ್ತೀಚೆಗೆ, ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಡಾಕೆಟ್ ಸ್ಫೋಟ ಸಂಭವಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯಗಳು ಒಂದು ವರ್ಷದೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ನ್ಯಾಯಾಲಯವು ವಾದಿಸಿತು.

".... ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಪಟ್ಟಿ ಬೆಳೆಯುತ್ತಿದೆ ಮತ್ತು ಅನೇಕ ಪ್ರಕರಣಗಳು ಪೊಕ್ಸೊ ಕಾಯ್ದೆಯಡಿ ಬರುತ್ತಿವೆ. ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದ್ದರೂ, ಪೊಕ್ಸೊ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ಆಶ್ರಯ ಪಡೆಯುವ ಮೂಲಕ ವಿಚಾರಣಾ ನ್ಯಾಯಾಲಯ ಒತ್ತಡ ಹೇರಿದರೆ, ಅಂತಹ ಸಂದರ್ಭಗಳಲ್ಲಿ ಬಳಿಕ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.