Supreme Court and Tamil Nadu Map 
ಸುದ್ದಿಗಳು

ರಾಜ್ಯಪಾಲರ ಅಂಕಿತವಿಲ್ಲದೇ, ಸುಪ್ರೀಂ ತೀರ್ಪಿನ ಬಲದ ಮೇಲೆ ಹತ್ತು ಕಾಯಿದೆಗಳನ್ನು ಜಾರಿಗೆ ತಂದ ತಮಿಳುನಾಡು ಸರ್ಕಾರ

ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡು ಸರ್ಕಾರವು ರಾಜ್ಯಪಾಲರ ಅನುಮೋದನೆ ದೊರೆತಿದೆ ಎಂದು ಪರಿಗಣಿಸಿ ಹತ್ತು ಮಸೂದೆಗಳನ್ನು ಕಾಯಿದೆಗಳಾಗಿ ಅಧಿಸೂಚನೆಯ ಮೂಲಕ ಜಾರಿಗೊಳಿಸಿದೆ.

Bar & Bench

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯಪಾಲ ಆರ್‌ ಎನ್‌ ರವಿ ಅವರು 'ಸಮ್ಮತಿಸಿದ್ದಾರೆಂದು ಪರಿಗಣಿಸಿʼ ತಮಿಳುನಾಡು ರಾಜ್ಯ ಸರ್ಕಾರವು ಹತ್ತು ಮಸೂದೆಗಳನ್ನು ಶನಿವಾರ ಅಧಿಸೂಚನೆ  ಪ್ರಕಟಿಸುವ ಮೂಲಕ ಕಾಯಿದೆಗಳಾಗಿ ಜಾರಿಗೊಳಿಸಿದೆ.

ಭಾರತದಲ್ಲಿ ರಾಜ್ಯ ಸರ್ಕಾರವೊಂದು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಒಪ್ಪಿಗೆಯಿಲ್ಲದೆ, ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್ ತೀರ್ಪಿನ ಬಲದ ಮೇಲೆ ಕಾಯಿದೆಗಳನ್ನು ಜಾರಿಗೆ ತಂದ ಮೊದಲ ನಿದರ್ಶನ ಇದಾಗಿದೆ.

ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ರಾಜ್ಯಪಾಲರ ದೀರ್ಘಕಾಲದ ವಿಳಂಬ ಮತ್ತು ಶಾಸಕಾಂಗ ಅವುಗಳನ್ನು ಮರು ಪರಿಶೀಲಿಸಿ ಮಂಡಿಸಿದ  ಬಳಿಕ  ರಾಷ್ಟ್ರಪತಿಗಳಿಗೆ ಉಲ್ಲೇಖಿಸಿದ್ದ ರಾಜ್ಯಪಾಲರ ಅಸಾಂವಿಧಾನಿಕ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದ ಒಂದು ದಿನದ ನಂತರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ.

 "ಭಾರತದಲ್ಲಿ ರಾಜ್ಯಪಾಲರು/ರಾಷ್ಟ್ರಪತಿಗಳ ಸಹಿ ಇಲ್ಲದೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಲದ ಮೇಲೆ ಜಾರಿಗೆ ಬಂದ ಮೊದಲ ಶಾಸಕಾಂಗ ಕಾಯ್ದೆಗಳಾಗಿರುವುದರಿಂದ ಇವು ಇತಿಹಾಸ ನಿರ್ಮಿಸಿವೆ" ಎಂದು ಹಿರಿಯ ವಕೀಲ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಪಿ ವಿಲ್ಸನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯಪಾಲರು ಮಸೂದೆಯನ್ನು ವಾಪಸ್‌ ಕಳುಹಿಸಿದ ಬಳಿಕ ಶಾಸಕಾಂಗ  ಅದನ್ನು ಮರಳಿ ಅಂಗೀಕರಿಸಿದರೆ ಆಗ, ರಾಜ್ಯಪಾಲರು ಅದಕ್ಕೆ ಸಾಂವಿಧಾನಿಕವಾಗಿ ಒಪ್ಪಿಗೆ ನೀಡಬೇಕಾಗುತ್ತದೆ ಮತ್ತು ಅದನ್ನು ರಾಷ್ಟ್ರಪತಿಗೆ ಕಳುಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌  ಏಪ್ರಿಲ್ 8ರಂದು ನೀಡಿದ್ದ ತೀರ್ಪನ್ನು ಗೆಜೆಟ್ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಅಧಿಸೂಚನೆ ಮೂಲಕ ರೂಪುಗೊಂಡಿರುವ ಕಾಯಿದೆಗಳಲ್ಲಿ ವಿಶ್ವವಿದ್ಯಾಲಯಗಳ ಮೇಲಿನ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಯೂ ಇದೆ.

ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡು , ಮಸೂದೆಗಳನ್ನು ಪುನಃ ಜಾರಿಗೆ ತಂದ ನಂತರ ರಾಜ್ಯಪಾಲರಿಗೆ ಮರು ಸಲ್ಲಿಸಿದ ದಿನಾಂಕವಾದ ನವೆಂಬರ್ 18, 2023 ರಂದು ಅವುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಪರಿಗಣಿಸಲಾಗಿದೆ ಎಂದು ತೀರ್ಪಿನಲ್ಲಿ ಘೋಷಿಸಿತ್ತು.

"ಪಂಜಾಬ್ ರಾಜ್ಯದ ಕುರಿತಾದ ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿರುವ ತೀರ್ಪಿಗೆ ರಾಜ್ಯಪಾಲರು ನಿಕೃಷ್ಟ ಗೌರವ ತೋರಿರುವುದು ಮತ್ತು ಅವರ ಕಾರ್ಯ ನಿರ್ವಹಣೆಯಲ್ಲಿ ನಿಶ್ಚಿತವಾಗಿ ಕಂಡು ಬಂದಿರುವ ಬಾಹ್ಯ ಪರಿಗಣನೆಗಳನ್ನು ಗಮನದಲ್ಲಿರಿಸಿಕೊಂಡು, ಈ ಹತ್ತು ಮಸೂದೆಗಳನ್ನು ರಾಜ್ಯ ಶಾಸಕಾಂಗವು ಮರುಪರಿಶೀಲಿಸಿದ ನಂತರ ರಾಜ್ಯಪಾಲರಿಗೆ ಮಂಡಿಸಿದ ದಿನಾಂಕದಂದು ಅಂದರೆ 18.11.2023 ರಂದೇ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲಾಗಿದೆ" ಎಂದು ತೀರ್ಪಿನಲ್ಲಿ ಹೇಳಲಾಗಿದೆ. 

ಹತ್ತು ಮಸೂದೆಗಳಲ್ಲಿ, ಒಂದನ್ನು ಮೂಲತಃ 2020 ರ ಹಿಂದೆಯೇ ಶಾಸನಸಭೆಯಲ್ಲಿ ಅಂಗೀಕರಿಸಲಾಗಿತ್ತು, ಉಳಿದವುಗಳನ್ನು 2022 ಮತ್ತು 2023ರ ನಡುವೆ ಅಂಗೀಕರಿಸಲಾಗಿತ್ತು. 200ನೇ ವಿಧಿಯ ಅಡಿಯಲ್ಲಿನ ಅಧಿಕಾರ ಬಳಸಿ ಸಮಯಬದ್ಧ ಸಂವಹನವಿಲ್ಲದೆ ರಾಜ್ಯಪಾಲರು ಈ ಎಲ್ಲಾ ಮಸೂದೆಗಳನ್ನು ತಡೆಹಿಡಿದಿದ್ದರು. ಇದರಿಂದಾಗಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಯಿತು.

ವಿಳಂಬಕ್ಕಾಗಿ ನ್ಯಾಯಾಲಯ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಷ್ಟೇ ಅಲ್ಲದೆ ರಾಷ್ಟ್ರಪತಿಗಳ ಪರಿಗಣನೆಗಾಗಿ ಮಸೂದೆಗಳನ್ನು ಕಾಯ್ದಿರಿಸಿದ ಕ್ರಮವನ್ನು ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಘೋಷಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಕಾಯಿದೆಗಳನ್ನು ಜಾರಿಗೊಳಿಸಿದ ಕುರಿತು ಔಪಚಾರಿಕವಾಗಿ ಅಧಿಸೂಚನೆ ಹೊರಡಿಸುವ  ಮೂಲಕ, ತಮಿಳುನಾಡು ಸರ್ಕಾರವು ರಾಜ್ಯಪಾಲರ ಕಚೇರಿಯ ಹೋಲಿಕೆಯಲ್ಲಿ ಶಾಸಕಾಂಗ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಒಕ್ಕೂಟ ವ್ಯವಸ್ಥೆಯ ಪೂರ್ವನಿದರ್ಶನವೊಂದನ್ನು ಹುಟ್ಟುಹಾಕಿದೆ.