High Court of Karnataka 
ಸುದ್ದಿಗಳು

ಬೇರೆ ಸಮುದಾಯವನ್ನು ಹೆಸರಿಸದೆ ಒಂದು ಸಮುದಾಯವನ್ನು ಪ್ರಚೋದಿಸುವುದು ಅಪರಾಧವಾಗುವುದೇ? ಕಲ್ಪನೆಯ ಭೀತಿಗೆ ಶಿಕ್ಷೆಯುಂಟೇ?

ಹಿಂದೂಗಳನ್ನು ಬೆದರಿಸುವ ರೀತಿಯಲ್ಲಿ ಹಾಗೂ ಮೆರವಣಿಗೆ ನೋಡುತ್ತಿದ್ದಂತೆಯೇ ಹಿಂದೂಗಳು ಗ್ರಾಮ ತೊರೆಯಬೇಕು ಎಂಬ ರೀತಿಯಲ್ಲಿ ಗುಂಪು ವರ್ತಿಸುತ್ತಿತ್ತು ಎನ್ನುವ ಆರೋಪವನ್ನು ಗುಂಪೊಂದರ ವಿರುದ್ಧ ಮಾಡಲಾಗಿತ್ತು. ಏನಿದು ಪ್ರಕರಣ? ಮುಂದೆ ಓದಿ.

Bar & Bench

ಬೇರೆ ಸಮುದಾಯ/ಗುಂಪನ್ನು ಗುರಿಯಾಗಿಸದೇ ಒಂದು ಸಮುದಾಯ/ಗುಂಪಿನ ಭಾವನೆಗಳನ್ನು ಪ್ರಚೋದಿಸಿದ ಮಾತ್ರಕ್ಕೆ ಅದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153A ಅಡಿ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.

ನ್ಯಾಯಮೂರ್ತಿ ಮೈಕೆಲ್ ಜಾನ್ ಕುನ್ಹಾ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ನೀಡಿದ್ದು, ಹೀಗೆ ಹೇಳಿದೆ:

“ಸುಪ್ರೀಂ ಕೋರ್ಟ್‌ ಬಿಲಾಲ್ ಅಹ್ಮದ್ ಪ್ರಕರಣದಲ್ಲಿ ಹೇಳಿರುವಂತೆ ಮೇಲೆ ಹೇಳಿರುವ ರೀತಿಯಲ್ಲಿ ಅಪರಾಧವಾಗಬೇಕಾದರೆ [(ಐಪಿಸಿ) ಸೆಕ್ಷನ್ 153A] ಎರಡು ಗುಂಪುಗಳು ಅಥವಾ ಸಮುದಾಯಗಳು ಇದರಲ್ಲಿ ಸೇರಿರಬೇಕು. ಬೇರಾವುದೇ ಸಮುದಾಯ/ಗುಂಪು ಉಲ್ಲೇಖಿಸದೆ ಒಂದು ಸಮುದಾಯ/ಗುಂಪು ಭಾವನೆಗಳನ್ನು ಪ್ರಚೋದಿಸುವುದು ಐಪಿಸಿಯ ಸೆಕ್ಷನ್ 153A ಅಡಿ ಅಪರಾಧವಲ್ಲ.”
ಕರ್ನಾಟಕ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ದೂರುದಾರರು 2010ರ ಫೆಬ್ರುವರಿ 17ರಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ 200-250 ಮಂದಿಯ ಗುಂಪು ಮೆರವಣಿಗೆ ಹೊರಟಿತ್ತು. ಈ ಗುಂಪು ಜನರು ರಸ್ತೆ ದಾಟದಂತೆ ಬೆದರಿಕೆ ಹಾಕಿತ್ತು. ಅಲ್ಲದೇ ದೂರುದಾರರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿತ್ತು. ರಸ್ತೆ ದಾಟದಂತೆ ಗುಂಪು ಬೆದರಿಸಿತ್ತು, ಹಾಗೆ ಮಾಡಿದರೆ ಮನೆ ತಲುಪುವುದಿಲ್ಲ ಎಂದು ಧಮಕಿ ಹಾಕಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಹಿಂದೂಗಳನ್ನು ಬೆದರಿಸುವ ರೀತಿಯಲ್ಲಿ ಮತ್ತು ಮುಸ್ಲಿಮರ ಮೆರವಣಿಗೆ ನೋಡುತ್ತಿದ್ದಂತೆ ಹಿಂದೂಗಳು ಗ್ರಾಮ ತೊರೆಯಬೇಕು ಎಂಬ ರೀತಿಯಲ್ಲಿ ಗುಂಪು ವರ್ತಿಸುತ್ತಿತ್ತು ಎಂದು ಮೆರವಣಿಗೆ ಹೊರಟಿದ್ದವರ ವಿರುದ್ಧ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ (ಮೆರವಣಿಗೆ ಹೊರಟಿದ್ದ ಗುಂಪು) ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ದೋಷಪೂರಿತ ಅಡ್ಡಿ), 504 (ಶಾಂತಿ ಹಾಳುಮಾಡಲು ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 153A ಮತ್ತು 149 (ಕಾನೂನುಬಾಹಿರವಾಗಿ ಗುಂಪುಗೂಡುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರಿಂದ ನೊಂದ ಮನವಿದಾರರು (ಮೆರವಣಿಗೆ ಹೊರಟಿದ್ದ ಗುಂಪು) ಎಫ್‌ಐಆರ್ ವಜಾಗೊಳಿಸುವಂತೆ ಹೈಕೋರ್ಟ್‌ ನಲ್ಲಿ ಮನವಿ ಸಲ್ಲಿಸಿದ್ದರು.

ನ್ಯಾಯಾಲಯ ಏನನ್ನು ಎತ್ತಿ ಹಿಡಿದಿದೆ?: “ನಿಬಂಧನೆಗಳ ಅಡಿಯಲ್ಲಿ ಅಪರಾಧಗಳನ್ನು ಸಾಬೀತುಪಡಿಸಲು, ಆರೋಪಿಗಳು ದೂರುದಾರರಿಗೆ ಅಥವಾ ಇತರ ಯಾವುದೇ ವ್ಯಕ್ತಿಗಳಿಗೆ ಉದ್ದೇಶಪೂರ್ವಕವಾಗಿ ಅವಮಾನಿಸಿರಬೇಕು ಅಥವಾ ಪ್ರಚೋದನೆ ನೀಡಿರಬೇಕು ಅಥವಾ ಅಂತಹ ಪ್ರಚೋದನೆಯು ಸಾರ್ವಜನಿಕ ಶಾಂತಿ ನಾಶಪಡಿಸಲು ಕಾರಣವಾಗಬಹುದು ಎಂದು ತಿಳಿದಿರಬೇಕು. ಇಂತಹ ಆರೋಪಗಳು ಎಫ್‌ಐಆರ್ ನಲ್ಲಿ ಸ್ಪಷ್ಟವಾಗಿ ಗೈರಾಗಿವೆ” ಎಂದು ನ್ಯಾಯಾಲಯ ಹೇಳಿದೆ.

“ಸದರಿ ಪ್ರಕರಣದಲ್ಲಿ, ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷದ ಭಾವನೆ ಬಿತ್ತುವ ಉದ್ದೇಶದಿಂದ ಅರ್ಜಿದಾರರು ಕೃತ್ಯಗಳನ್ನು ಎಸಗಿದ್ದಾರೆ ಎಂಬ ಆರೋಪಗಳಿಲ್ಲ. ಬದಲಿಗೆ, ಹಿಂದೂಗಳನ್ನು ಬೆದರಿಸುವ ರೀತಿಯಲ್ಲಿ ಮತ್ತು ಮುಸ್ಲಿಮರ ಮೆರವಣಿಗೆ ನೋಡುತ್ತಿದ್ದಂತೆ ಹಿಂದೂಗಳು ಗ್ರಾಮ ತೊರೆಯಬೇಕು ಎಂಬ ರೀತಿಯಲ್ಲಿ ಗುಂಪು ವರ್ತಿಸುತ್ತಿತ್ತು ಎಂದು ಹೇಳಲಾಗಿದೆ. ಇದು ದೂರುದಾರರ ಕಲ್ಪನೆ ಅಥವಾ ಕೇವಲ ಊಹೆಯಾಗಿದ್ದು, ಅರ್ಜಿದಾರರು ಎಸಗಿರುವ ಕೃತ್ಯವಲ್ಲ. ಇದರ ಪರಿಣಾಮವಾಗಿ, ಅಪರಾಧದ ಸಾಮಾನ್ಯ ಅಂಶವೂ ಐಪಿಸಿ ಸೆಕ್ಷನ್ 153A ಅಡಿ ಅರ್ಜಿದಾರರ ವಿರುದ್ಧ ವಿಚಾರಣೆ ಮುಂದುವರಿಸಲು ತೃಪ್ತಿದಾಯಕವಾಗಿಲ್ಲ” ಎಂದು ಹೇಳಿ ಮನವಿಯನ್ನು ಒಪ್ಪಿಕೊಂಡು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಹೈಕೋರ್ಟ್‌ ಸೂಚಿಸಿದೆ.